KRS Dam: ಕೆಆರ್ಎಸ್ ಜಲಾಶಯದಿಂದ ನದಿ ಮತ್ತು ನಾಲೆಗಳಿಗೆ ನೀರು ಬಿಡುಗಡೆ
ಮಳೆ ಕೊರತೆಯ ನಡುವೆಯೂ ಕೆಆರ್ಎಸ್ ಜಲಾಶಯದಿಂದ ನದಿ ಮತ್ತು ನಾಲೆಗಳಿಗೆ ನೀರು ಹರಿಸಲು ಕಾವೇರಿ ನೀರಾವರಿ ನಿಗಮ ನಿರ್ಧರಿಸಿದ್ದು ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಕುಡಿಯುವ ನೀರಿನ ಅಗತ್ಯತೆಯನ್ನು ಪೂರೈಸಲು ನೀರು ಹರಿಸಲು ತೀರ್ಮಾನಿಸಿದೆ.
ಜನ, ಜಾನುವಾರುಗಳಿಗೆ ಕುಡಿಯುಬ ನೀರು ಪೂರೈಕೆ ಹಾಗೂ ಕೆರೆ, ಕಟ್ಟೆಗಳನ್ನು ತುಂಬಿಸುವ ಸಲುವಾಗಿ ಶನಿವಾರ ನದಿ ಮತ್ತು ನಾಲೆಗಳಿಗೆ ನೀರು ಬಿಡಲಿದೆ. ಮೈಸೂರು, ಮಂಡ್ಯ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕುಡಿಯುವ ನೀರು ಪೂರೈಕೆಗಾಗಿ ಈ ನೀರು ಬಳಕೆಯಾಗಲಿದೆ.

ಸದ್ಯ ಜಲಾಶಯದಲ್ಲಿ 32.10 ಪ್ರತಿಶತ ಮಾತ್ರ ನೀರಿನ ಸಂಗ್ರಹ ಇರುವುದರಿಂದ, ಹೊಸದಾಗಿ ಯಾವುದೇ ಬೆಳೆ ಹಾಕದಂತೆ ಜಲಾಶಯ ಪಾತ್ರದ ರೈತರಿಗೆ ಮನವಿ ಮಾಡಿದೆ. ಮಳೆ ಬರದೇ ಇದ್ದರೆ ಕೇವಲ 10 ದಿನಗಳ ಕಾಲ ಮಾತ್ರ ನೀರು ಹರಿಸಲಾಗುತ್ತದೆ.
124.62 ಅಡಿ ಸಾಮರ್ಥ್ಯ ಹೊಂದಿರುವ ಕೆಆರ್ ಎಸ್ ಜಲಾಶಯದಲ್ಲಿ ಪ್ರಸ್ತುತ 90.80 ಅಡಿ ನೀರು ಸಂಗ್ರಹವಾಗಿದ್ದು, 4336 ಕ್ಯೂಸೆಕ್ಸ್ ಒಳ ಹರಿವಿದೆ. ಮಳೆ ಕೊರತೆಯಿಂದಾಗಿ ಕೆಆರ್ ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ದಾಖಲೆ ಮಟ್ಟದಲ್ಲಿ ಕುಸಿತ ಕಂಡಿತ್ತು.
ಮುಂಗಾರು ಕೊರತೆ, ಆತಂಕದಲ್ಲಿ ರೈತರು
ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಕೃಷ್ಣರಾಜಸಾಗರ ಜಲಾಶಯ ಈ ಬಾರಿ ಮಳೆಕೊರತೆಯಿಂದಾಗಿ ಬರಿದಾಗಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ನೆರೆಯ ಕೇರಳದ ವಯನಾಡು ಮತ್ತು ಕೊಡಗು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾದರೆ ಮಾತ್ರ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರಲಿದೆ. ಆದರೆ ಈ ಬಾರಿ ಮುಂಗಾರು ಕೈಕೊಟ್ಟ ಕಾರಣ ಜಲಾಶಯದಲ್ಲಿ ನೀರಿನ ಸಂಗ್ರಹ ಭಾರಿ ಕಡಿಮೆಯಾಗಿದೆ.
ಸದ್ಯ ಜಲಾಶಯದಲ್ಲಿ 90.80 ಅಡಿ ನೀರು ಇದೆ, 4336 ಕ್ಯೂಸೆಕ್ಸ್ ಒಳಹರಿವು ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 124.80 ಅಡಿ ನೀರು ಸಂಗ್ರಹವಾಗಿದ್ದು, 59,675 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದುಬರುತ್ತಿತ್ತು ಮತ್ತು 54,637 ಕ್ಯೂಸೆಕ್ ನೀರನ್ನು ಹೊರಬಿಡಲಾಗಿತ್ತು.
ಮಳೆ ಕೊರತೆ ಮಧ್ಯೆಯೇ ತನ್ನ ಪಾಲಿನ ನೀರು ಹರಿಸುವಂತೆ ತಮಿಳುನಾಡು ಸರ್ಕಾರ ಕಾವೇರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದೆ. ನೀರು ಸಂಗ್ರಹ ಇಲ್ಲದ ಕಾರಣ ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಪ್ರತ್ಯುತ್ತರ ನೀಡಿದೆ. ಮುಂಗಾರು ಬೆಳೆಗೆ ನೀರಿ ಹರಿಸಿ ಎಂದು ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಎಲ್ಲಾ ಸಮಸ್ಯೆಗೂ ಒಂದೇ ಪರಿಹಾರ ಎಂದರೆ ಮಳೆ.
ವರುಣ ಕಾವೇರಿ ಕಣಿವೆ ಪ್ರದೇಶದಲ್ಲಿ ಕೃಪೆ ತೋರಿದರೆ ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ. ಆಗಸ್ಟ್‌ನಲ್ಲಿ ಕೂಡ ಮುಂಗಾರು ಕೈಕೊಟ್ಟರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಸದ್ಯ ರೈತರು ಮುಗಿಲಿನತ್ತ ಮುಖ ಮಾಡಿದ್ದು, ಕೃಪೆ ತೋರುವಂತೆ ವರುಣನಿಗೆ ಮೊರೆ ಇಟ್ಟಿದ್ದಾರೆ.












Click it and Unblock the Notifications