ಮತದಾನ ಮಾಡಿ ರಾಜ್ಯದ ಭವಿಷ್ಯ ಬರೆಯಿರಿ; ನೀನಾಸಂ ಸತೀಶ್
ಮಂಡ್ಯ, ಏಪ್ರಿಲ್ 13; "ಯುವಕರು ಹಾಗೂ ಪ್ರಜ್ಞಾವಂತ ನಾಗರೀಕರು ಪ್ರಜ್ಞೆಯಿಂದ ಮತದಾನ ಮಾಡಿ ಈ ರಾಜ್ಯದ ಭವಿಷ್ಯ ಬರೆಯಬೇಕು" ಎಂದು ಕನ್ನಡ ನಟ ನೀನಾಸಂ ಸತೀಶ್ ಕರೆ ನೀಡಿದರು. ಗುರುವಾರ ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.
ನಟ ನೀನಾಸಂ ಸತೀಶ್ ಈ ಬಾರಿಯ ಚುನಾವಣೆಗೆ ಮಂಡ್ಯ ಜಿಲ್ಲೆಯ ಯೂತ್ ಐಕಾನ್ ಆಗಿ ಆಯ್ಕೆಯಾಗಿದ್ದಾರೆ. ಗುರುವಾರ ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಸ್ವೀಪ್ ಸಮಿತಿ ಮಂಡ್ಯ ವಿಶ್ವವಿದ್ಯಾಲಯ ಆವರಣದಲ್ಲಿರುವ ಶಾರದಾ ಮಂದಿರದಲ್ಲಿ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಮತದಾರರ ಪಾಲ್ಗೊಳ್ಳುವಿಕೆ (ಸ್ವೀಪ್) ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೀನಾಸಂ ಸತೀಶ್ ಪಾಲ್ಗೊಂಡಿದ್ದರು.

"2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಮೇ 10ರಂದು ಮತದಾನ ನಡೆಯಲಿದೆ. ಅಂದಿನ ದಿನ ಯುವಕರು ಹಾಗೂ ಪ್ರಜ್ಞಾವಂತ ನಾಗರೀಕರು ಪ್ರಜ್ಞೆಯಿಂದ ಮತದಾನ ಮಾಡಿ ಈ ರಾಜ್ಯದ ಭವಿಷ್ಯ ಬರೆಯಬೇಕು. ಬದಲಾವಣೆ ಮಾಡುವ ಶಕ್ತಿ ನಿಮ್ಮ ಕೈಯಲ್ಲಿದೆ. ಜವಾಬ್ದಾರಿ ಅರಿತು ಕಡ್ಡಾಯವಾಗಿ ಯೋಗ್ಯ ವ್ಯಕ್ತಿಗೆ ಮತದಾನ ಮಾಡುವ ಮೂಲಕ ಇತರರಿಗೆ ಪ್ರೇರಣೆಯಾಗಬೇಕು" ಎಂದು ಕರೆ ನೀಡಿದ್ದರು.
"ಉತ್ತಮ ಸಮಾಜ ಹಾಗೂ ರಾಷ್ಟ್ರ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಮತದಾನದಲ್ಲಿ ಕಡ್ಡಾಯವಾಗಿ ಭಾಗವಹಿಸಿ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಮತದಾನ ಮಾಡುವುದು ಹಕ್ಕು ಹಾಗೂ ಕರ್ತವ್ಯ. ಮತದಾನದ ಮಹತ್ವದ ಬಗ್ಗೆ ಜ್ಞಾನ ಹೆಚ್ಚಿಸಿಕೊಂಡು, ಸಮಾಜಕ್ಕೆ ಏನಾದರೂ ಒಳ್ಳೆಯದು ಮಾಡುವ ನಿಟ್ಟಿನಲ್ಲಿ ಆಲೋಚನೆ ಮಾಡಬೇಕಿದೆ. ಯುವಕರು ಪ್ರಶ್ನೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಮಾನವಾದ ಹಕ್ಕಿದೆ. ನಮ್ಮ ಸುತ್ತಮುತ್ತಲೂ ಇರುವ ಸಮಸ್ಯೆಗಳ ಬಗ್ಗೆ ಪರಿಹಾರ ಮಾಡುವ ನಿಟ್ಟಿನಲ್ಲಿ ಚಿಂತಿಸಬೇಕಿದೆ" ಎಂದರು.
"ಜೀವನದಲ್ಲಿ ಗುರಿ ಇಟ್ಟುಕೊಳ್ಳಿ, ಉತ್ತಮ ವ್ಯಾಸಂಗ ಮಾಡುವ ಮೂಲಕ ಆ ಗುರಿ ಸಾಧಿಸಿ, ಸಮಾಜಕ್ಕೆ ನಮ್ಮಿಂದ ಏನಾದರೂ ಸಹಾಯ ಆಗಬೇಕು. ಆಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ" ಎಂದು ತಿಳಿಸಿದರು. ನೀನಾಸಂ ಸತೀಶ್ ಚಲನಚಿತ್ರ ಗೀತೆ ಹಾಗೂ ಸಿನಿಮಾ ಡೈಲಾಗ್‌ಗಳನ್ನು ಹೇಳಿ ವಿದ್ಯಾರ್ಥಿಗಳನ್ನು ರಂಜಿಸಿದರು. ಬಳಿಕ ಮತದಾನ ಜಾಗೃತಿಯ ಸಹಿ ಅಭಿಯಾನದಲ್ಲಿ ಪಾಲ್ಗೊಂಡರು. ನಂತರ ಮತದಾನದ ಸೆಲ್ಫಿ ಕ್ಲಿಕ್ಕಿಸಿಕೊಂಡಿ ಸಂಭ್ರಮಿಸಿದರು.

ಮತದಾನ ಪ್ರಮಾಣ ಹೆಚ್ಚಳ; ಕಳೆದ ವಿಧಾನಸಭಾ ಚುನಾವಣಾಯಲ್ಲಿ ಶೇಕಡವಾರು ಮತದಾನದಲ್ಲಿ ಮಂಡ್ಯ ಜಿಲ್ಲೆ ಎರಡನೇ ಸ್ಥಾನದಲ್ಲಿತ್ತು, ಈ ಬಾರಿ ಜಿಲ್ಲೆ ಪ್ರಥಮ ಸ್ಥಾನ ಪಡೆಯಬೇಕು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಎಚ್. ಎನ್. ಗೋಪಾಲಕೃಷ್ಣ ಕರೆ ನೀಡಿದ್ದಾರೆ. ಈಗಾಗಲೇ ಮತದಾರರಲ್ಲಿ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ರಾಯಭಾರಿಗಳಾಗಿ ಚಲನಚಿತ್ರ ನಟ ನೀನಾಸಂ ಸತೀಶ್ ಹಾಗೂ ವಿಕಲಚೇತನ ರಾಯಭಾರಿಯಾಗಿ ಡಾ. ಚಲುವರಾಜ್ ಆಯ್ಕೆ ಮಾಡಿಕೊಂಡು ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸುಶಿಕ್ಷಿತರೇ ಹಾಗೂ ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿರುವ ನಗರ ಪ್ರದೇಶಗಳಲ್ಲಿ ಶೇ 70ರಷ್ಟು ಮತದಾನವಾಗುತ್ತಿದೆ.
ಮಂಡ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 2,16,494 ಮತದಾರರಿದ್ದು, ಅವರಲ್ಲಿ 1,06,122 ಪುರುಷರು, 1,10,339 ಮಹಿಳಾ ಮತದಾರರು ಹಾಗೂ 33 ತೃತೀಯ ಲಿಂಗಿಗಳು. ಈ ಬಾರಿ 18 ವರ್ಷ ತುಂಬಿದ 2421ಜನರು ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. ಮಂಡ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 254 ಮತಗಟ್ಟೆಗಳನ್ನು ತೆರೆಯಲಾಗುತ್ತದೆ.
ಜಿಲ್ಲೆಯಲ್ಲಿ 80ವರ್ಷ ಮೇಲ್ಪಟ್ಟ 37,414 ಹಾಗೂ ವಿಶೇಷ ಚೇತನರು 23,110 ಅಂಗವಿಕಲ ಮತದಾರರಿದ್ದಾರೆ. ಮನೆಯಿಂದಲೇ ಮತದಾನ ಮಾಡುವ ಅವಕಾಶ ನೀಡಲಾಗಿದೆ. 80ವರ್ಷ ಮೇಲ್ಪಟ್ಟ ಮತದಾರರಿಗೆ ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ 12ಡಿ ನಮೂನೆಯನ್ನು ವಿತರಣೆಮಾಡುತ್ತಿದ್ದಾರೆ. ಇವರೆಗೂ 60524 ನಮೂನೆ 12 ಡಿ ವಿತರಣೆ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದ ಪ್ರತಿ ಮತಗಟ್ಟೆಯಲ್ಲಿಯೂ ವಿಧಾನಸಭಾ ಕ್ಷೇತ್ರದ ಸಂಖ್ಯೆ, ಮತಗಟ್ಟೆ ಹೆಸರು, ಮತಗಟ್ಟೆ ವಿಳಾಸ ಹಾಗೂ ಮತಗಟ್ಟೆ ಮಟ್ಟದ ಅಧಿಕಾರಿಯ ವಿಳಾಸವನ್ನು ಮತದಾನ ಕೇಂದ್ರದಲ್ಲಿ ನಮೂದಿಸಲು ನಿರ್ದೇಶನ ನೀಡಲಾಗಿದೆ.












Click it and Unblock the Notifications