ಅಂಬಿಗರಹಳ್ಳಿ ತ್ರಿವೇಣಿ ಸಂಗಮದಲ್ಲಿ ಮಹಾಕುಂಭಮೇಳ, ಶುಕ್ರವಾರ ಚಾಲನೆ
ಮಂಡ್ಯ, ಅಕ್ಟೋಬರ್ 14 : ಕೆ.ಆರ್. ಪೇಟೆ ತಾಲೂಕಿನ ಅಂಬಿಗರ ಹಳ್ಳಿಯ ತ್ರಿವೇಣಿ ಸಂಗಮದಲ್ಲಿ ಅಕ್ಟೋಬರ್ 14ರಿಂದ 16ರವರೆಗೆ ಶ್ರೀ ಮಲೈ ಮಹದೇಶ್ವರ ಸ್ವಾಮಿಯ ಮಹಾ ಕುಂಭಮೇಳ ನಡೆಯಲಿದೆ. ತ್ರಿವೇಣಿ ಸಂಗಮವನ್ನು ದೊಡ್ಡ ಮಟ್ಟದ ತೀರ್ಥಸ್ಥಾನವಾಗಿ ಮಾಡಬೇಕು ಎಂಬ ಹೆಬ್ಬಯಕೆ ನಮ್ಮದು ಎಂದು ರೇಷ್ಮೆ,ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ. ಕೆ. ಸಿ. ನಾರಾಯಣಗೌಡ ತಿಳಿಸಿದರು.
ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಮಲೈ ಮಹದೇಶ್ವರ ಸ್ವಾಮಿಯ ಪ್ರತಿಷ್ಠಾಪನಾ ಪೂಜೆಯನ್ನು ಸಲ್ಲಿಸಿ ಅವರು ಮಾತನಾಡಿದರು. ಶ್ರೀ ಮಲೈ ಮಹದೇಶ್ವರಸ್ವಾಮಿ ದೇವರನ್ನು ಪ್ರತಿಷ್ಠಾಪನೆ ಮಾಡಿ, ದೇವಾಲಯ ಪ್ರವೇಶ ಮಾಡಿ ಅಕ್ಟೋಬರ್ 14 ರಂದು ಸಂಜೆಯಿಂದ ಅಕ್ಟೋಬರ್ 15, 16 ರಂದು ಬೆಳಿಗ್ಗೆಯವರೆಗೂ ಕುಂಭಮೇಳ ಸಂಬಂಧಪಟ್ಟಂತೆ ಕಳಸ ಪೂಜೆಗಳು ಹಾಗೂ ಇನ್ನಿತರ ಪೂಜಾ ಕಾರ್ಯಕ್ರಮಗಳು ನಡೆಸಿ ದೊಡ್ಡ ಗುರುಗಳಿಂದ ಭಗವಂತನ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.
ಚಂದ್ರವನಾಶ್ರಮದ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಅವರು ಭಗವಂತನ ಸ್ಥಳದಲ್ಲಿ ಪೂಜೆಯನ್ನು ಮಾಡಿ ಕುಂಭಮೇಳಕ್ಕೆ ಹೆಚ್ಚಿನ ಶಕ್ತಿಯನ್ನು ತುಂಬುವಂತಹ ಕೆಲಸವನ್ನು ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದರು.

2013ರಲ್ಲಿ ಕುಂಭಮೇಳ ಸಣ್ಣ ಪ್ರಮಾಣದಲ್ಲಿ ಆಗಿತ್ತು. ಈ ಬಾರಿ ಬಹಳ ವಿಜೃಂಭಣೆಯಿಂದ ಹಾಗೂ ಬಹಳ ವಿಶೇಷತೆಯಿಂದ ಇಡೀ ಭಾರತಕ್ಕೆ ಹೆಸರುವಾಸಿಯಾಗುವಂತಹ ಮಹಾಕುಂಭ ಮೇಳ ಕಾರ್ಯಕ್ರಮವನ್ನು ಆಚರಣೆ ಮಾಡಲಾಗುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪೂಜೆಯನ್ನು ಸಲ್ಲಿಸಿ ಪುಣ್ಯ ಸ್ನಾನವನ್ನು ಮಾಡಿ ಎಂದರು.
ಅಕ್ಟೋಬರ್ 16ಕ್ಕೆ ಯೋಗಿ ಆದಿತ್ಯನಾಥ್ ಭಾಗಿ; 40ಕ್ಕೂ ಹೆಚ್ಚಿನ ಮಠಾಧೀಶರುಗಳು ಕುಂಭಮೇಳದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ, ಪುಣ್ಯ ಸ್ನಾನವನ್ನು ಮಾಡಲಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ರವರು ಅಕ್ಟೋಬರ್ 16ರಂದು ಆಗಮಿಸಲಿದ್ದಾರೆ.
ಚಾಮರಾಜನಗರ ಜಿಲ್ಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ಟೋಬರ್ 6ರಂದು ಜ್ಯೋತಿಯಾತ್ರೆಗೆ ಚಾಲನೆ ನೀಡಲಾಗಿತ್ತು. ಗುರುವಾರ ಕುಂಭಮೇಳದಲ್ಲಿ ವಿವಿಧ ಜಿಲ್ಲೆಗಳಿಂದ ಬಂದಿದ್ದ ಜ್ಯೋತಿಯಾತ್ರೆ ಒಂದಾದ ನಂತರ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯುದ್ದಕ್ಕೂ ಸಾವಿರಾರು ಜನ, ವಿದ್ಯಾರ್ಥಿಗಳು, ಕಲಾ ತಂಡಗಳ ಸದಸ್ಯರು ಭಾಗವಹಿಸಿದ್ದರು.

ಆಳ್ವಾಸ್ ಸಂಸ್ಥೆಯ 113 ಕಲಾತಂಡಗಳು, 3 ಸಾವಿರಕ್ಕೂ ಹೆಚ್ಚು ಸ್ಥಳೀಯ ಕಲಾವಿದರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಡೊಳ್ಳುಕುಣಿತ, ನಗಾರಿ, ವೀರಗಾಸೆ, ತಮಟೆ ವಾದ್ಯ, ಕಹಳೆ, ಕಂಸಾಳೆ, ಹುಲಿವೇಷ ಪ್ರದರ್ಶನಗಳು ಗಮನ ಸೆಳೆದವು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮೆರವಣಿಗೆಗೆ ಚಾಲನೆ ನೀಡಿದರು.
ಶುಕ್ರವಾರ 11 ಗಂಟೆಗೆ ಚಾಲನೆ; ಅಂಬಿಗರ ಹಳ್ಳಿಯ ತ್ರಿವೇಣಿ ಸಂಗಮದಲ್ಲಿ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಕುಂಭಮೇಳಕ್ಕೆ ಧರ್ಮಸ್ಥಳ ಧರ್ಮಾಧಿ ಕಾರಿ, ರಾಜ್ಯಸಭಾ ಸದಸ್ಯ ಡಾ.ವೀರೇಂದ್ರ ಹೆಗ್ಗಡೆ ಚಾಲನೆ ನೀಡಲಿದ್ದಾರೆ. ನಂತರ, ನದಿ ತಟದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮಲೆಮಹದೇಶ್ವರ ದೇವಾಲಯದಲ್ಲಿ ದೇವರ ಪ್ರತಿಷ್ಠಾಪನಾ ಕಾರ್ಯ ನಡೆಯಲಿದೆ.
ಸಂಜೆ 7 ಗಂಟೆಗೆ ವಾರಾಣಸಿ ಮಾದರಿಯಲ್ಲಿ ಕಾವೇರಿ ನದಿಗೆ ಆರತಿ ನಡೆಯಲಿದೆ. ಪ್ರತಿದಿನ ರಾತ್ರಿ ವಿಶೇಷ ಲೇಸರ್ ಪ್ರದರ್ಶನ ನಡೆಯಲಿದೆ. ರಾಜ್ಯ, ಹೊರರಾಜ್ಯಗಳಿಂದ ಬಂದ ಪ್ರವಾಸಿಗರಿಗೆ ಟೆಂಟ್‌ನಲ್ಲಿ ವಸತಿ ಸೌಲಭ್ಯ ಒದಗಿಸಲಾಗಿದೆ. ಭಕ್ತರಿಗೆ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿದೆ. ಮೂರು ದಿನ ಪ್ರಸಿದ್ಧ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ.












Click it and Unblock the Notifications