ನಕಲಿ ಸುಮಲತಾರ ಹಾವಳಿ; ದೂರು ನೀಡಿದ ಸಂಸದೆ ಸುಮಲತಾ
ಮಂಡ್ಯ, ಸೆಪ್ಟೆಂಬರ್ 6: ಕೆಲವು ದಿನಗಳ ಹಿಂದೆಯಷ್ಟೇ ಮಂಡ್ಯ ಸಂಸದೆ ಸುಮಲತಾ ಅವರಿಗೆ ತಲೆನೋವು ತರಿಸಿದ್ದ ನಕಲಿ ಸುಮಲತಾ ಸೋಷಿಯಲ್ ಮೀಡಿಯಾ ಖಾತೆಗಳು ಮತ್ತೆ ತಮ್ಮ ಕಾರ್ಯ ಶುರುವಿಟ್ಟಿಕೊಂಡಿವೆ. ಸುಮಲತಾ ಹೆಸರಿನಲ್ಲಿ ನಕಲಿ ಖಾತೆ ತೆರೆದು ರಾಜಕೀಯ ನಾಯಕರ ಬಗ್ಗೆ ಅವಹೇಳನಕಾರಿ ಟೀಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗುತ್ತಿದೆ.
ಈ ಬಾರಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಟೀಕಿಸಿ ಸುಮಲತಾ ಹೆಸರು ಬಳಸಿಕೊಂಡು ಪೋಸ್ಟ್ ಮಾಡಲಾಗಿದೆ. ಡಿ.ಕೆ. ಶಿವಕುಮಾರ್ ಅವರನ್ನು ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿರುವುದನ್ನು ಬೆಂಬಲಿಸುವಂತೆ ಅವರ ಫೋಟೋ ಜತೆಗೆ "ನ್ಯಾಯದ ಮುಂದೆ ಎಲ್ಲರೂ ಒಂದೇ. ಅವರು ಮಾಡಿದ್ದನ್ನು ಅವರು ಅನುಭವಿಸುತ್ತಾರೆ. ಇದಕ್ಕಾಗಿ ಸಾರ್ವಜನಿಕ ಆಸ್ತಿಯನ್ನು ಹಾಳು ಮಾಡುವುದು ಸರಿಯಲ್ಲ" ಎಂಬ ಪೋಸ್ಟ್ ಹಾಕಲಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ಇದನ್ನು ಸಂಸದೆ ಸುಮಲತಾ ಅಂಬರೀಶ್ ಅವರೇ ಮಾಡಿದ್ದಾರೆಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಈ ಕುರಿತಾಗಿ ಖುದ್ದು ಸಂಸದೆ ಸುಮಲತಾರವರು ಸ್ಪಷ್ಟನೆ ನೀಡಿದ್ದಾರೆ. "ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ನಕಲಿ ಖಾತೆ ಸೃಷ್ಟಿ ಮಾಡಿ ಸ್ಟೇಟಸ್ ಹಾಕಿದ್ದಾರೆ" ಎಂದು ಸಂಸದೆ ಸುಮಲತಾ ಅಂಬರೀಶ್ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಈ ಕುರಿತು ಸೈಬರ್ ಕ್ರೈಂಗೆ ದೂರನ್ನು ದಾಖಲಿಸಲಾಗಿದೆ.

ಈ ಹಿಂದೆಯೂ ಹೈದರಾಬಾದ್ ನಲ್ಲಿ ನಟ ಚಿರಂಜೀವಿ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಸುಮಲತಾ ಭಾಗವಹಿಸಿ ಅಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಹಳೆಯ ವಿಡಿಯೊವನ್ನು ಹಾಕಿ, ನೋಡಿ ನಿಮ್ಮ ಸಂಸದೆ ರಾಜ್ಯದಲ್ಲಿ ನೆರೆ ಪ್ರವಾಹ ಉಂಟಾಗಿ ಜನರು ಕಷ್ಟದಲ್ಲಿರುವಾಗ ಹೇಗೆ ಮೋಜು ಮಸ್ತಿ ಮಾಡುತ್ತಿದ್ದಾರೆ ಎಂದು ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಟೀಕಿಸಲಾಗಿತ್ತು.












Click it and Unblock the Notifications