ವಿದ್ಯುತ್ ಇಲಾಖೆಯಿಂದ ತೊಂದರೆ: ರೈತರಿಂದ ಅನಿರ್ಧಿಷ್ಠಾವಧಿ ಧರಣಿ
ಮಂಡ್ಯ, ಡಿಸೆಂಬರ್ 15: ವಿದ್ಯುತ್ ಇಲಾಖೆಯ ವತಿಯಿಂದ ರೈತ ಸಮುದಾಯಕ್ಕೆ ಆಗುತ್ತಿರುವ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ತಾಲೂಕು ರೈತ ಸಂಘದ ಕಾರ್ಯಕರ್ತರು ಪಟ್ಟಣದ ಹೊಸಹೊಳಲು ರಸ್ತೆಯಲ್ಲಿರುವ ಸೆಸ್ಕಾಂ ವಿಭಾಗೀಯ ಕಚೇರಿಯ ಮುಂದೆ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ತಾಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದಲ್ಲಿ ಸೆಸ್ಕಾಂ ವಿಭಾಗೀಯ ಕಛೇರಿಗೆ ಆಗಮಿಸಿರುವ ರೈತರು ಸೆಸ್ಕಾಂ ಕಾರ್ಯವೈಕರಿಯ ವಿರುದ್ದ ಘೋಷಣೆಗಳನ್ನು ಕೂಗಿ ಧರಣಿ ಆರಂಭಿಸಿದರು. ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ಸೆಸ್ಕಾಂ ಕಾರ್ಯವೈಕರಿಯ ವಿರುದ್ದ ವಾಗ್ದಾಳಿ ನಡೆಸಿದರು.


ತಾಲೂಕಿನಾದ್ಯಂತ ಅಳವಡಿಸಿರುವ ವಿದ್ಯುತ್ ಲೈನ್ ತೀರಾ ಹಳೆಯದಾಗಿದ್ದು ಬಹುತೇಕ ಕಡೆ ತಂತಿಗಳು ಜೋತು ಬೀಳುತ್ತಿವೆ. ಕೆಲವುಕಡೆ ತಂತಿಗಳು ತುಂಡಾಗಿ ಅವಘಡಗಳು ಸಂಭವಿಸುತ್ತಿವೆ. ಕಬ್ಬಿನ ಗದ್ದೆಗಳ ಮೂಲಕ ಹಾದುಹೋಗಿರುವ ಜೋತು ಬಿದ್ದಿರುವ ವಿದ್ಯುತ್ ತಂತಿಗಳಿಗೆ ಬೆಳೆದ ಕಬ್ಬಿನ ಸೂಲಂಗಿ ತಗುಲಿ ಬಹುತೇಕ ಕಡೆ ಬೆಳೆದು ನಿಂತ ಕಬ್ಬಿನ ಗದ್ದೆಗಳು ಅಗ್ನಿಗಾಹುತಿಯಾಗುತ್ತಿವೆ. ವಿದ್ಯುತ್ ಇಲಾಖೆಯ ತಪ್ಪಿಗೆ ರೈತರು ನಷ್ಠ ಅನುಭವಿಸುತ್ತಿದ್ದಾರೆ. ಹಳೆಯ ಲೈನುಗಳನ್ನು ತೆಗೆದು ಹೊಸ ಲೈನ್ ಅಳವಡಿಸಬೇಕು. ವಿದ್ಯುತ್ ಅವಘಡಕ್ಕೆ ಒಳಗಾದ ರೈತರ ಕಬ್ಬಿನ ನಷ್ಠವನ್ನು ಸೆಸ್ಕಾಂ ಭರಿಸುವಂತಾಗಬೇಕೆಂದು ರಾಜೇಗೌಡ ಒತ್ತಾಯಿಸಿದರು.
ಕಾಟಾಚಾರದ ಜನಸಂಪರ್ಕ ಸಭೆಗಳನ್ನು ನಿಲ್ಲಿಸಿ:
ರೈತರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಸೆಸ್ಕಾಂ ತ್ರೈಮಾಸಿಕ ಜನಸಂಪರ್ಕ ಸಭೆಗಳನ್ನು ನಡೆಸುತ್ತಿದೆ. ಆದರೆ ಈ ಜನಸಂಪರ್ಕ ಸಭೆಗಳ ಬಗ್ಗೆ ರೈತರಿಗೆ ಮಾಹಿತಿಯಿರುವುದಿಲ್ಲ. ಕೇವಲ ಕಾಗದದ ಮೇಲೆ ನಡೆಸುವ ಜನಸಂಪರ್ಕ ಸಭೆಗಳನ್ನು ನಿಲ್ಲಿಸಿ. ಜನಸಂಪರ್ಕ ಸಭೆ ನಡೆಸುವ ಭಾಗದಲ್ಲಿ ಪೂರ್ವಬಾವಿಯಾಗಿ ಕರಪತ್ರಗಳನ್ನು ಮುದ್ರಿಸಿ ಹಂಚುವ ಮೂಲಕ ರೈತರಿಗೆ ಸಭೆಯ ಬಗ್ಗೆ ಮಾಹಿತಿ ನೀಡಿ. ಕಾಟಾಚಾರದ ಜನಸಂಪರ್ಕಗಳನ್ನು ನಿಲ್ಲಿಸಿ ಎಂದು ರಾಜೇಗೌಡ ಆಗ್ರಹಿಸಿದರು.
ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ, ತಾಲೂಕಿನಲ್ಲಿ 2019 ರಿಂದ 2023ರ ವರೆಗೆ ನೂರಾರು ರೈತರು ನಿಗಧಿತ ಹಣಕಟ್ಟಿ ವಿದ್ಯುತ್ ಟಿ.ಸಿ ಗಾಗಿ ಕಾಯುತ್ತಿದ್ದಾರೆ. ಆದರೆ ವಿದ್ಯುತ್ ಇಲಾಖೆ ಯಾವುದೇ ರೈತರಿಗೂ ಒಂದೇ ಒಂದು ಹೊಸ ಟಿ.ಸಿ ನೀಡಿಲ್ಲ. ಇದರಿಂದ ಕೃಷಿಪಂಪ್ ಸೆಟ್ ಆಧಾರಿತ ರೈತರು ಸಂಕಷ್ಠಕ್ಕೆ ಸಿಲುಕಿದ್ದಾರೆ. ಬಹುತೇಕ ಕಡೆ ಓವರ್ ಲೋಡ್ ನಿಂದ ಟಿ.ಸಿ ಗಳು ಸುಟ್ಟುಹೋಗಿ ರೈತರು ಬವಣೆಪಡುತ್ತಿದ್ದಾರೆ. ರಾಜ್ಯ ಸರ್ಕಾರ ತಕ್ಷಣವೇ ಹಣಕಟ್ಟಿರುವ ಎಲ್ಲಾ ರೈತರಿಗೂ ತಕ್ಷಣವೇ ನೂತನ ವಿದ್ಯುತ್ ಪರಿವರ್ತಕ(ಟಿ.ಸಿ)ಗಳನ್ನು ಅಳವಡಿಸಿಕೊಡುವಂತೆ ಒತ್ತಾಯಿಸಿದರು.
ರೈತರ ಜಮೀನುಗಳಿಗೆ ಟಿ.ಸಿ ಸಾಗಣಿಕೆ ಮಾಡಲು ಇಲಾಖೆ ಸಾಗಾಣಿಕಾ ವಾಹನವನ್ನು ಹೊಂದಿದ್ದು ಇದಕ್ಕೆ ಮಾಸಿ 52 ಸಾವಿರ ರೂ ಬಾಡಿಗೆ ನೀಡುತ್ತಿದೆ. ಆದರೆ ಈ ವಾಹನ ರೈತರಿಗೆ ಲಭ್ಯವಾಗುತ್ತಿಲ್ಲ. ಗುತ್ತಿಗೆದಾರರು ರೈತರಿಂದಲೇ ಟಿ.ಸಿ.ಸಾಗಣಿಕೆ ವೆಚ್ಚವನ್ನು ಪಡೆಯುತ್ತಿದ್ದಾರೆ. ಟಿ.ಸಿ ಸಾಗಾಣಿಕೆಗೆ ರೈತರಿಂದ ಹಣ ಪಡೆಯುವುದನ್ನು ತಕ್ಷಣವೇ ನಿಲ್ಲಿಸುವಂತೆ ಒತ್ತಾಯಿಸಿದ ಪುಟ್ಟೇಗೌಡ ವಿದ್ಯತ್ ಅವಘಡಗಳಿಗೆ ಬಲಿಯಾದ ರೈತರು ಮತ್ತು ರೈತ ಕುಟುಂಬದ ಜಾನುವಾರುಗಳಿಗೆ ಸೂಕ್ತ ಪರಿಹಾರ ನೀಡುವಲ್ಲಿ ವಿದ್ಯುತ್ ಇಲಾಖೆ ವಿಳಂಭ ನೀತಿ ಅನುಸರಿಸುತ್ತಿದೆ.
ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅಳವಡಿಸಿದ್ದ ಕುಡಿಯುವ ನೀರು ಪೂರೈಕೆಯ ತುಂಡಾದ ವಿದ್ಯುತ್ ತಂತಿ ತುಳಿದು ರೈತ ಯುವಕನೊಬ್ಬ ಸಾವಿಗೀಡಾಗಿ ಒಂದು ವರ್ಷ ಕಳೆಯುತ್ತಿದ್ದರೂ ಇದುವರೆಗೂ ಆತನ ಕುಟುಂಬಕ್ಕೆ ಪರಿಹಾರ ನೀಡಿಲ್ಲ. ಬೆಂಗಳೂರು ಮಹಾನಗರದಲ್ಲಿ ವಿದ್ಯುತ್ ಅವಘಡಗಳಿಗೆ ಬಲಿಯಾದವರಿಗೆ ರಾಜ್ಯ ಸರ್ಕಾರ ತಕ್ಷಣವೇ ಪರಿಹಾರ ನೀಡುತ್ತಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಅವಘಡಕ್ಕೆ ಬಲಿಯಾದ ರೈತ ಕುಟುಂಬದ ಸದಸ್ಯರಿಗೆ ವರ್ಷಾಕಾಲ ಕಳೆದರೂ ಪರಿಹಾರ ನೀಡಿಲ್ಲ. ನಗರ ವಾಸಿಗಳ ಜೀವಕ್ಕಿರುವ ಬೆಲೆ ಅನ್ನದಾತರ ಕುಟುಂಬಕ್ಕಿಲ್ಲ. ಪರಿಹಾರ ನೀಡಿಕೆಯಲ್ಲಿನ ತಾರತಮ್ಯ ನೀತಿ ತೊಲಗಬೇಕು ಮತ್ತು ತಕ್ಷಣವೇ ವಿದ್ಯುತ್ ಅವಘಡಕ್ಕೆ ತುತ್ತಾದ ರೈತ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ವಿದ್ಯುತ್ ಅಭಾವದ ಹೆಸರಿನಲ್ಲಿ ರೈತರಿಗೆ ಅನಗತ್ಯ ಲೋಡ್ ಶೆಡ್ಡಿಂಗ್ ಮಾಡಿ ತೊಂದರೆ ಕೊಡಲಾಗುತ್ತಿದೆ. ವಿದ್ಯುತ್ ಅಭಾವವಿರುವುದರಿಂದ ಹೆಚ್.ಟಿ ಬಳಕೆದಾರ ಗ್ರಾಹಕರಿಗೂ ಶೇ.25 ರಷ್ಟು ವಿದ್ಯುತ್ ಖೋತಾ ಮಾಡಿ ಅದನ್ನು ಗ್ರಾಮೀಣ ಪ್ರದೇಶದ ರೈತರಿಗೆ ಪೂರೈಕೆ ಮಾಡುವಂತೆ ರೈತ ಹೋರಾಟಗಾರರು ಆಗ್ರಹಿಸಿದ್ದಾರೆ.
ಸೆಸ್ಕಾಂ ವಿಭಾಗೀಯ ಕಛೇರಿಯ ಕಾರ್ಯಪಾಲಕ ಅಭಿಯಂತರೆ ಪ್ರತಿಮ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ಧರಣಿ ನಿರತರ ಮನವೊಲಿಕೆಗೆ ಯತ್ನಿಸಿದರಾದರೂ ಅದಕ್ಕೆ ಸೊಪ್ಪುಹಾಕದ ರೈತರು ಮೇಲಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆಯನ್ನು ಪರಿಹರಿಸುವವರೆಗೂ ಸೆಸ್ಕಾಂ ಕಛೇರಿಯ ಮುಂದೆ ಆರಂಭಿಸಿರುವ ಆಹೋರಾತ್ರಿ ಧರಣಿಯನ್ನು ಮುಂದುವರಿಸುವುದಾಗಿ ಎಚ್ಚರಿಸಿದ್ದು ಕಛೇರಿಯ ಆವರಣದಲ್ಲಿಯೇ ಅಡುಗೂಟ ತಯಾರಿಸಿ ಮಧ್ಯಾಹ್ನದ ಭೋಜನ ಸವಿದರು.
ರಾಜ್ಯ ರೈತಸಂಘದ ಮುಖಂಡ ಕೆ.ಆರ್.ಜಯರಾಂ, ಜಿಲ್ಲಾ ರೈತಸಂಘ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ರೈತ ಮುಖಂಡರಾದ ಕರೋಟಿ ತಮ್ಮಯ್ಯ, ಕೃಷ್ಣಾಪುರ ರಾಜಣ್ಣ, ಹೊನ್ನೇಗೌಡ, ಹಿರೀಕಳಲೆ ಬಸವರಾಜು, ಸ್ವಾಮೀಗೌಡ, ನರಸಿಂಹೇಗೌಡ, ನೀತಿಮಂಗಲ ಮಹೇಶ್, ನಗರೂರು ಕುಮಾರ್, ಮುದ್ದುಕುಮಾರ್, ನಾಗೇಗೌಡ, ಮಹಿಳಾ ಹೋರಾಟಗಾರರಾದ ಸುಂದರಮ್ಮ, ಕತ್ತರಘಟ್ಟ ಶಿಲ್ಪ, ಸುನೀತಾ, ನಾಗರತ್ನ ಸೇರಿದಂತೆ ನೂರಾರು ರೈತರು ಚಳುವಳಿಯಲ್ಲಿ ಭಾಗವಹಿಸಿದ್ದಾರೆ.












Click it and Unblock the Notifications