ಪ್ರಶ್ನೆ ಮಾಡುವ ಹಕ್ಕನ್ನು ಕಳೆದುಕೊಳ್ಳಬೇಡಿ: ಮತ ಚಲಾಯಿಸಿದ ಬಳಿಕ ಸುಮಲತಾ ಹೇಳಿಕೆ
ಮಂಡ್ಯ, ಮೇ 10: ಸೆಲೆಬ್ರೆಟಿ ಅಥವಾ ಸಂಸದೆ ಎನ್ನುವ ದರ್ಪ ತೋರದೆ ಸಾಮಾನ್ಯ ಜನರೊಂದಿಗೆ ಬೆರೆತು ತಮ್ಮ ಹಕ್ಕನ್ನು ಚಲಾಯಿಸುವುದು ಮುಖ್ಯ ಎಂದು ಸಂಸದೆ ಸುಮಲತಾ ಅಂಬರೀಶ್ ಅಭಿಪ್ರಾಯಪಟ್ಟರು.
ಮದ್ದೂರು ತಾಲೂಕು ದೊಡ್ಡರಸಿನಕೆರೆ ಗ್ರಾಮದ ಸರ್ಕಾರಿ ಶಾಲೆಗೆ ಆಗಮಿಸಿ ಗ್ರಾಮಸ್ಥರೊಂದಿಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಲೆಬ್ರೆಟಿ ಅಥವಾ ಸಂಸದೆ ಎನ್ನುವುದು ಹುದ್ದೆ. ಇಲ್ಲಿಗೆ ಬಂದಾಗ ನಾವೂ ಸಹ ಸಾಮಾನ್ಯ ಜನರ ರೀತಿಯಲ್ಲೇ ನಡೆದುಕೊಳ್ಳಬೇಕು. ಸಂಸದೆ ಎಂಬ ದರ್ಪ ತೋರಿಸುವುದು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸೆಲೆಬ್ರೆಟಿ ಅಥವಾ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನದಲ್ಲಿರುವವರು ಮತ್ತು ಗಣ್ಯರು ಬಂದರೆ ಸಾಮಾನ್ಯವಾಗಿ ಅವರೊಂದಿಗೆ ಜನರು ಸೆಲ್ಫಿ ತೆಗೆದುಕೊಳ್ಳುತ್ತಾರೆ. ಇದು ಎಲ್ಲಾ ಕಡೆ ನಡೆಯುತ್ತದೆ. ಅದೂ ಸಹ ನಮ್ಮ ಒಂದು ಭಾಗವಾಗಿರುತ್ತದೆ. ಅದನ್ನೇ ದೊಡ್ಡದು ಮಾಡುವುದು ಸರಿಯಲ್ಲ ಎಂದರು.
ಈ ಬಾರಿಯ ಚುನಾವಣೆಯಲ್ಲಿ ಖಂಡಿತವಾಗಿ ಭಾರತೀಯ ಜನತಾ ಪಕ್ಷಕ್ಕೆ ಒಂದು ನಿಖರವಾದ ಸಂಖ್ಯೆ ಬಂದೇ ಬರುತ್ತದೆ. ಅದು ಎಷ್ಟು ಸ್ಥಾನ ಬರುತ್ತದೆ ಎಂದು ನಾನು ಯಾವಾಗಲೂ ಹೇಳಿಲ್ಲ. ಖಂಡಿತಾ ನಾವು ಹೆಚ್ಚಿನ ಸ್ಥಾನಗಳನ್ನು ಮಂಡ್ಯ ಜಿಲ್ಲೆಯಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾತು ಮುಂದುವರಿಸಿದ ಸುಮಲತಾ, ಮತದಾನ ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯ ಕೂಡ. ಹಾಗಾಗಿ ತಪ್ಪದೇ ಎಲ್ಲರೂ ಮತದಾನ ಮಾಡಿ. ಯಾರು ವೋಟು ಹಾಕುವುದಿಲ್ಲವೋ ಅವರು ಪ್ರಶ್ನೆ ಮಾಡುವ ಹಕ್ಕನ್ನೇ ಕಳೆದುಕೊಳ್ಳುತ್ತಾರೆ. ಮತದಾನ ಎನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂಭ್ರಮ. ಇದೊಂದು ಹಬ್ಬದ ಮಾದರಿಯಲ್ಲಿ ಆಚರಿಸುವಂತಹುದ್ದು. ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಚಲಾಯಿಸಬೇಕು. ಅದರಿಂದ ಹೆಚ್ಚಿನ ಮನ್ನಣೆ ಬರುತ್ತದೆ ಎಂದು ಹೇಳಿದರು. ಮತ ಹಾಕಲಿಲ್ಲ ಎಂದರೆ ತಮ್ಮ ಹಕ್ಕನ್ನು ಕಳೆದುಕೊಂಡಂತೆ. ಅದರಿಂದ ವಂಚಿತರಾದಂತಾಗುತ್ತದೆ. ಇದು ಪ್ರತಿಯೊಬ್ಬರ ಜವಾಬ್ದಾರಿಯೂ ಕೂಡ. ಖಂಡಿತವಾಗಿಯೂ ಮತ ಕೇಂದ್ರಕ್ಕೆ ತೆರಳಿ ಮತದಾನ ಮಾಡಬೇಕು ಎಂದು ಹೇಳಿದರು.












Click it and Unblock the Notifications