ಮಂಡ್ಯ: ಜಮೀನು ಮಾರಿ ಸಾಲ ತೀರಿಸಲು ತಂದ ಹಣ ಕಳ್ಳರ ಪಾಲು, ಅಷ್ಟಕ್ಕೂ ನಡೆದಿದ್ದೇನು..?
ಮಂಡ್ಯ, ನವೆಂಬರ್ 06: ಮಂಡ್ಯ ಜಿಲ್ಲೆಯಲ್ಲಿ ಹಾಡಹಗಲೇ ಕಳ್ಳತನ ನಡೆದಿದೆ. ವ್ಯಕ್ತಿಯೊಬ್ಬರು ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಇರುವ ಭೂಮಿಯನ್ನು ಮಾರಾಟ ಮಾಡಿ ಸಾಲ ತೀರಿಸಲೆಂದು ತಂದ ಹಣ ಮಾರಾಟವಾಗಿದೆ.
ಪಾಂಡವಪುರ ತಾಲೂಕು ಚಿನಕುರಳಿ ಗ್ರಾಮದ ಪರಮೇಶ್ ಸಾಲ ತೀರಿಸಲು ತಮ್ಮ ಬಳಿಯಿದ್ದ ಜಮೀನು ಮಾರಾಟ ಮಾಡಿ ಹಣವನ್ನು ಕಾರಿನಲ್ಲಿಟ್ಟು ಬ್ಯಾಂಕಿಗೆ ಹೋದ ವೇಳೆ ಖತರ್‌ನಾಕ್ ಕಳ್ಳರು ಕಾರಿನ ಗಾಜನ್ನು ಒಡೆದು ಹಣ ಕಳ್ಳತನ ಮಾಡಿರುವ ವಿಲಕ್ಷಣ ಪ್ರಸಂಗ ಮಂಡ್ಯ ನಗರದಲ್ಲಿ ಹಾಡಹಗಲೇ ನಡೆದಿದೆ.

ಪರಮೇಶ್ ಬ್ಯಾಂಕಿಗೆ ಹೋಗಿ ಬರುವಷ್ಟರಲ್ಲಿ ಹಣ ಕಳ್ಳತನವಾಗಿದ್ದು, ಈ ವಿಚಾರ ತಿಳಿದು ರಸ್ತೆಯಲ್ಲೇ ಗೋಳಾಡಿದ್ದಾರೆ. ಹಣ ಕಳೆದುಕೊಂಡ ಪರಮೇಶ್ ಗೋಳಾಟ ನೋಡುಗರ ಮನ ಕಲುಕುವಂತಿತ್ತು.
ಹಾಡಹಗಲೇ ಕಳ್ಳರ ಕಾಟ: ಅಷ್ಟಕ್ಕೂ ನಡೆದಿದ್ದೇನು..?
ಸಾಲಗಾರರಿಗೆ ಹಣ ನೀಡಲು ಇರುವ ಭೂಮಿಯಲ್ಲಿ ಒಂದಷ್ಟು ಭಾಗವನ್ನು ಮಾರಾಟ ಮಾಡಿ ಮಂಡ್ಯದ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಿ, ಅದರಿಂದ ಬಂದ ಹಣವನ್ನು ಕಾರಿನಲ್ಲಿ ಇಟ್ಟುಕೊಂಡು ಪರಮೇಶ್ ಅವರು ನಗರಸಭೆ ಆವರಣಕ್ಕೆ ಬಂದಿದ್ದರು.
ನಗರಸಭೆಯಲ್ಲಿ ಸಣ್ಣ ಕೆಲಸ ಮುಗಿಸಿಕೊಂಡು ವಾಪಸ್ಸು ಹೋಗುವ ಮುನ್ನ ತಮ್ಮ ವೈಯಕ್ತಿಕ ಕಾರ್ಯ ನಿಮಿತ್ತ ಅಲ್ಲೇ ಸಮೀಪದಲ್ಲಿದ್ದ ಎಸ್‌ಬಿಐಗೆ ಹೋಗಿದ್ದಾರೆ. ಕೆಲಸ ಮುಗಿಸಿಕೊಂಡು ವಾಪಸ್ಸು ಕಾರಿನ ಬಳಿ ಬಂದಾಗ ಪರಮೇಶ್‌ಗೆ ಶಾಕ್ ಕಾದಿತ್ತು. ಕಾರಿನ ಗಾಜನ್ನು ಒಡೆದ ದುಷ್ಕರ್ಮಿಗಳು ಕಾರಿನಲ್ಲಿದ್ದ 4.5 ಲಕ್ಷ ರೂಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು. ಇದರಿಂದ ಆತಂಕಗೊಂಡ ಪರಮೇಶ್ ಸ್ಥಳದಲ್ಲೇ ಗೋಳಾಡತೊಡಗಿದರು.
ಈ ದೃಶ್ಯವನ್ನು ಕಂಡ ನಗರಸಭೆ ಅಧಿಕಾರಿ, ಸಿಬ್ಬಂದಿ ಈ ಬಗ್ಗೆ ಮಾಹಿತಿ ಪಡೆದು ಆವರಣದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಗಳನ್ನು ವೀಕ್ಷಿಸಿದಾಗ ಸ್ಕೂಟರ್‌ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಕಾರಿನ ಗಾಜನ್ನು ಒಡೆದು ಕಾರಿನಲ್ಲಿದ್ದ 4.50 ಲಕ್ಷ ರೂ. ಕದ್ದು ಪರಾರಿಯಾಗಿದ್ದರು. ಈ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಉಪ ನೋಂದಣಿ ಕಚೇರಿ ಸೇರಿದಂತೆ ವಿವಿಧೆಡೆ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications