ಮಂಡ್ಯ: ಅಂತರ್ ಜಿಲ್ಲಾ ಕಳ್ಳರ ಬಂಧನ, 35.86 ಲಕ್ಷ ರೂ ಮೌಲ್ಯದ ವಸ್ತುಗಳು ವಶ
ಮಂಡ್ಯ, ಸೆಪ್ಟೆಂಬರ್ 13: ಅಂತರ ಜಿಲ್ಲಾ ಕಳ್ಳರನ್ನು ಬಂಧಿಸಿರುವ ಜಿಲ್ಲಾ ಪೊಲೀಸರು ಅವರಿಂದ ತಲಾ ಒಂದೊಂದು ಕಾರು, ಬೈಕ್, ಗೂಡ್ಸ್ ಟೆಂಪೋ, ಲ್ಯಾಪ್‌ಟಾಪ್ ಸೇರಿದಂತೆ 35.86 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ತಿಳಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಂಧಿತರು ನೀಡಿದ ಸುಳಿವಿನ ಮೇರೆಗೆ ನಾಲ್ವರು ಭಾಗಿಯಾಗಿದ್ದ ಒಟ್ಟು 11 ಪ್ರಕರಣಗಳನ್ನು ಭೇದಿಸಲಾಗಿದೆ. ಕಳೆದ ವರ್ಷ ಮಂಡ್ಯದ ಶಂಕರನಗರದ ವೈದ್ಯರೊಬ್ಬರ ಮನೆಯಲ್ಲಿ ಮಹಾಲಯ ಅಮಾವಾಸ್ಯೆ ಹಬ್ಬದ ದಿನದಂದೇ ಕಳ್ಳತನ ಮಾಡಿದ್ದ ಪ್ರಕರಣ ಹಾಗೂ ಕೆ.ಆರ್.ಪೇಟೆ ಟೌನ್‌ನ ಲೀಲಾ ಬ್ಯಾಂಕರ್ಸ್ ಅಂಡ್ ಜ್ಯೂವೆಲ್ಲರಿ ಶಾಪ್‌ನಲ್ಲಿನ ಕಳ್ಳತನ ಪ್ರಕರಣಗಳೂ ಪತ್ತೆ ಮಾಡಲಾಗಿದೆ ಎಂದು ತಿಳಿಸಿದರು.

ಬಂಧಿತರು ಕಳವು ಮಾಡಿದ್ದ ಚಿನ್ನಾಭರಣಗಳನ್ನು ಕರಗಿಸಿ ಗಟ್ಟಿ ಮಾಡಿಕೊಂಡಿದ್ದರು. ಹೀಗಾಗಿ ಕಳವಾಗಿದ್ದ ಚಿನ್ನಾಭರಣಗಳಲ್ಲಿ 154 ಗ್ರಾಂ ಚಿನ್ನವಷ್ಟೇ ಸಿಕ್ಕಿದೆ. ಉಳಿದಂತೆ 20ಕಿಲೋ ತೂಕದ ಬೆಳ್ಳಿ ಪದಾರ್ಥಗಳು, ತಲಾ ಒಂದೊಅದು ಎಲ್‌ಪಿಜಿ ಸಿಲಿಂಡರ್, ಆಕ್ಸಿಜನ್ ಸಿಲಿಂಡರ್, ವಾಟರ್ ಟ್ಯಾಂಕ್, ಗ್ಯಾಸ್ ಕಟರ್ ಹಾಗೂ 40,000ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಮಂಡ್ಯ ನಗರದ ಶಂಕರನಗರದ ಅಂಬುಜಮ್ಮ ಪಾರ್ಕ್ ಹತ್ತಿರ ವಾಸವಿದ್ದ ಮೂಲತಃ ನಾಗಮಂಗಲ ತಾಲೂಕು ಚಾಕೇನಹಳ್ಳಿ ನಿವಾಸಿ ಸಿ.ರವಿಕುಮಾರ್, ಮಂಡ್ಯ ತಾಲೂಕು ಸೂನಗಹಳ್ಳಿ ಗ್ರಾಮದ ಎಸ್.ಆರ್.ಮಂಜುನಾಥ, ವಿಷ್ಣು ಹಾಗೂ ಎಸ್.ವಿ.ಹೇಮಂತ್‌ಕುಮಾರ್ ಬಂಧಿತರು. ಈ ನಾಲ್ವರು ಸೇರಿ ಕೆ.ಆರ್.ಪೇಟೆಯ ಜ್ಯೂವೆಲ್ಲರಿ ಅಂಗಡಿಗೆ ಕನ್ನ ಹಾಕಿದ್ದರು. ಉಳಿದಂತೆ ಪತ್ತೆಯಾಗಿರುವ 11 ಪ್ರಕರಣಗಳಲ್ಲಿ 2-3 ಮಂದಿ ಭಾಗಿಯಾಗಿದ್ದಾರೆ ಎಂದು ವಿವರಿಸಿದರು.
ಪ್ರಕರಣಗಳ ತನಿಖೆ ಮತ್ತು ಆರೋಪಿಗಳ ಪತ್ತೆಯಾಗಿ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ನಾಗಮಂಗಲ ತಾಲೂಕು ಬೆಳ್ಳೂರು ಕ್ರಾಸ್‌ನ ಉಮರ್‌ನಗರದ ಬಳಿ ಮೂವರು ಆರೋಪಿಗಳನ್ನು ಮೊದಲು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಮತ್ತೆ ಹೆಚ್ಚಿನ ತನಿಖೆಗಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಮಂಗಳವಾರ ಮತ್ತೊಬ್ಬನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಮಂಡ್ಯ, ಕೆರ್ಆ.ಪೇಟೆ ಹಲಗೂರು, ಚನ್ನರಾಯಪಟ್ಟಣ, ಋಬನ್ನೂರು, ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ನಾಗಮಂಗಲ ಡಿವೈಎಸ್‌ಪಿ ಲಕ್ಷ್ಮೀ ನಾರಾಯಣ್ ಪ್ರಸಾದ್ ಮಾರ್ಗದರ್ಶನದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ದೀಪಕ್, ಜಗದೀಶ್, ಪಿಎಸ್‌ಐಗಳಾದ ಸುನಿಲ್, ಸಿದ್ದಲಿಂಗ ಬಾಣಸೆ, ಎಎಸ್‌ಐ ಚಂದ್ರಶೇಖರ್, ಸಿಬ್ಬಂದಿಗಳಾದ ಬಸವರಾಜು, ರಘು, ಜಯವರ್ಧನ್, ಜೀಸನ್, ಉಮೇಶ್, ಅರುಣ್‌ಕುಮಾರ್, ಅವಿನಾಶ್, ಮಂಜು, ಪ್ರದೀಪ, ಎನ್.ಎಲ್.ಪ್ರದೀಪ, ರವಿಕಿರಣ್, ಲೋಕೇಶ್, ಉಮೇಶ್, ಷರೀಫ್ ಅವರನ್ನೊಳಗೊಂಡ ತಂಡವು ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು ಎಂದು ತಿಳಿಸಿದರು.
ಹಸುಗಳನ್ನು ಕದ್ದು ಹಸು ಫಾರಂ ಮಾಡಿದ್ದ ಕಳ್ಳ
ನಾಗಮಂಗಲ ತಾಲೂಕು ಚಾಕೇನಹಳ್ಳಿ ನಿವಾಸಿ ರವಿ ಹಲವೆಡೆ ಜರ್ಸಿ ತಳಿಯ ಹಸುಗಳನ್ನು ಕದ್ದು, ಊರಿನಲ್ಲಿ ಹಸು ಫಾರಂ ಮಾಡಿಕೊಂಡಿದ್ದರು. ಜೊತೆಗೆ, ಅವುಗಳ ನಿರ್ವಹಣೆಗಾಗಿ ಹಲವೆಡೆ ಪಶು ಆಹಾರ(ಫೀಡ್ಸ್)ವನ್ನೂ ಕಳ್ಳತನ ಮಾಡಿದ್ದನು. ವಿಚಾರಣೆ ವೇಳೆ ಈತ ಈ ಬಗ್ಗೆಯೂ ಮಾಹಿತಿ ನೀಡಿದ್ದ ಹಿನ್ನಲೆಯಲ್ಲಿ 8 ಹಸುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಎನ್.ಯತೀಶ್ ತಿಳಿಸಿದರು.
ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಚಾಕನಹಳ್ಳಿ ರವಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದನು. ಸೂನಗಹಳ್ಳಿಯ ಮಂಜುನಾಥ್, ಈ ಹಿಂದೆ ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದು, ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದನು. ರವಿ ಮತ್ತು ವಿಷ್ಣು ಹಲವು ಶಾಲೆಗಳಲ್ಲಿ ಈ ಹಿಂದೆ ನಡೆದಿದ್ದ ಕಂಪ್ಯೂಟರ್‌ಗಳ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಇದೇ ವೇಳೆ ತಿಳಿಸಿದರು.
ವಿಶೇಷ ತಂಡ ರಚನೆ
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಾತ್ರಿ ವೇಳೆ ನಡೆಯುತ್ತಿರುವ ಕಾರು ಪ್ರಯಾಣಿಕರ ದರೋಡೆ ಪ್ರಕರಣಗಳನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಆರೋಪಿಗಳ ಬಗ್ಗೆ ಸುಳಿವು ದೊರೆತಿದ್ದು, ಶೀಘ್ರ ಬಂಧಿಸಲಾಗುವುದು. ಮಂಡ್ಯದಲ್ಲಿ ಮಂಗಳವಾರ ನಡೆದ ಅಕ್ಷಯ್ ಎಂಬ ಯುವಕ ಕೊಲೆ ಪ್ರಕರಣದ ತನಿಖೆಯೂ ತ್ವರಿತಗತಿಯಲ್ಲಿ ನಡೆಯುತ್ತಿದೆ. ಈ ಪ್ರಕರಣದ ಆರೋಪಿಗಳ ಬಗ್ಗೆಯೂ ಸುಳಿವು ಸಿಕ್ಕಿದ್ದು, ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎಎಸ್‌ಪಿ ಸಿ.ಇ.ತಿಮ್ಮಯ್ಯ, ನಾಗಮಂಗಲ ಡಿವೈಎಸ್‌ಪಿ ಲಕ್ಷ್ಮಿನಾರಾಯಣಪ್ರಸಾದ್ ಹಾಜರಿದ್ದರು.












Click it and Unblock the Notifications