Mandya: ಕಬ್ಬಿನ ಕೊರತೆ; ಕಾರ್ಖಾನೆ ಮತ್ತು ಆಲೆಮನೆಗಳ ನಡುವೆ ಪೈಪೋಟಿ
ಕಳೆದ ವರ್ಷ ಬರಗಾಲ ಮತ್ತು ನೀರಿನ ಕೊರತೆಯಿಂದ ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆಗಳಿಗೆ ಕಬ್ಬಿಗೆ ತೀವ್ರ ಕೊರತೆ ಕಾಡಲಿದೆ. ಪ್ರತಿ ಕಾರ್ಖಾನೆಗಳಿಗೂ ತಲಾ ಎರಡರಿಂದ ಮೂರು ಲಕ್ಷ ಟನ್ ಸಿಗುವುದೇ ಹೆಚ್ಚು ಎನ್ನಲಾಗುತ್ತಿದ್ದು, ಬೆಲ್ಲಕ್ಕೆ ಉತ್ತಮ ಬೆಲೆ ಇರುವುದರಿಂದ ಆಲೆಮನೆಗಳೂ ಕೂಡ ಕಾರ್ಖಾನೆಗಳೊಂದಿಗೆ ಕಬ್ಬು ನುರಿಸುವುದಕ್ಕೆ ಪೈಪೋಟಿಗಿಳಿದಿವೆ.
ಮಳೆ ಕೊರತೆಯಿಂದ ಕೃಷ್ಣರಾಜಸಾಗರ ಜಲಾಶಯ ಕಳೆದ ವರ್ಷ ಭರ್ತಿಯಾಗಲಿಲ್ಲ. ಬೇಸಿಗೆ ಸಮಯದಲ್ಲಿ ನಾಲೆ ಆಧುನೀಕರಣದ ನೆಪವೊಡ್ಡಿ ನೀರು ಹರಿಸಲಿಲ್ಲ. ರಣಬಿಸಿಲ ತಾಪಕ್ಕೆ ಕಬ್ಬಿನ ಬೆಳೆ ಉರುವಲಾಯಿತು. ಕಬ್ಬು ಒಣಗುತ್ತಿರುವುದನ್ನು ನೋಡಲಾಗದೆ ಹಲವರು 8 ತಿಂಗಳ ಕಬ್ಬನ್ನು ಹೊರ ಜಿಲ್ಲೆಯ ಕಾರ್ಖಾನೆಗೆ ಸಾಗಿಸಿದರು. ಹೀಗಾಗಿ ಕಬ್ಬಿಗೆ ತೀವ್ರ ಕೊರತೆ ಎದುರಾಗಿದೆ.

ಸಾಗಣೆ ವೆಚ್ಚ ಕೈಬಿಟ್ಟ ಖಾಸಗಿ ಕಾರ್ಖಾನೆಗಳು
ಪ್ರತಿ ವರ್ಷ ಕನಿಷ್ಠ 4 ಲಕ್ಷ ಟನ್‌ನಿಂದ 5 ಲಕ್ಷ ಟನ್ ಕಬ್ಬು ಅರೆಯುತ್ತಿದ್ದ ಕಾರ್ಖಾನೆಗಳು ಈ ವರ್ಷ ಎರಡೂವರೆಯಿಂದ ಮೂರು ಲಕ್ಷ ಟನ್ ಕಬ್ಬು ಅರೆದರೆ ಅದೇ ಹೆಚ್ಚು ಎನ್ನುವಂತಾಗಿದೆ. ಅಲ್ಲದೆ, ನಿತ್ಯ 4 ರಿಂದ 5 ಸಾವಿರ ಟನ್ ಕಬ್ಬು ಅರೆಯುತ್ತಿದ್ದ ಕಾರ್ಖಾನೆಗಳಿಗೆ ಈ ಬಾರಿ ಆ ಪ್ರಮಾಣದ ಕಬ್ಬು ಸಿಗದೇ ಹೋಗಬಹುದು ಎನ್ನಲಾಗಿದೆ.
ಕಬ್ಬಿಗೆ ತೀವ್ರ ಕೊರತೆ ಇರುವುದರಿಂದ ಕೆಲವೊಂದು ಖಾಸಗಿ ಕಾರ್ಖಾನೆಗಳ ರೈತರಿಂದ ಸಾಗಣೆ ವೆಚ್ಚ ಪಡೆಯುವುದನ್ನೇ ನಿಲ್ಲಿಸಿವೆ. ಪ್ರತಿ 5 ರಿಂದ 10 ಕಿ.ಮೀ.ಗೆ ಒಂದೊಂದು ರೀತಿಯ ದರ ನಿಗದಿಪಡಿಸಿಕೊಂಡು ರೈತರಿಗೆ ಕೊಡಬೇಕಾದ ಹಣದಲ್ಲಿ ಕಟಾವು ಮಾಡಿಕೊಳ್ಳುತ್ತಿದ್ದ ಕಾರ್ಖಾನೆಗಳು, ಈಗ ಕಬ್ಬು ಸಿಗುವುದೇ ಕಷ್ಟವಾಗಿರುವುದರಿಂದ ಸಾಗಣೆ ವೆಚ್ಚವನ್ನು ಕೇಳದೆ ತಮ್ಮದೇ ಖರ್ಚಿನಲ್ಲೇ ಕಾರ್ಖಾನೆಗೆ ಕೊಂಡೊಯ್ಯುವುದಕ್ಕೆ ನಿರ್ಧರಿಸಿವೆ. ಈಗಾಗಲೇ ಮೈಷುಗರ್ ವ್ಯಾಪ್ತಿಯ ಹಲವು ರೈತರನ್ನೂ ಸಂಪರ್ಕಿಸಿ ಮುಂಗಡ ಹಣ ಕೊಟ್ಟು ಕಬ್ಬು ಒಪ್ಪಿಗೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೈಷುಗರ್ ಸಕ್ಕರೆ ಕಾರ್ಖಾನೆ ಸುಮಾರು 2 ಲಕ್ಷ ಟನ್ ಕಬ್ಬು ಒಪ್ಪಿಗೆ ಮಾಡಿಕೊಂಡಿರುವುದಾಗಿ ಹೇಳುತ್ತಿದೆ. ಆದರೆ, ಕಬ್ಬು ಸಾಗಣೆ ವೆಚ್ಚ ಕೈಬಿಡುವ ಬಗ್ಗೆ ಆಡಳಿತ ಮಂಡಳಿ ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಕಬ್ಬು ಸಾಗಣೆ ವೆಚ್ಚ ಕೈಬಿಡದಿದ್ದರೆ ಕಾರ್ಖಾನೆಗೆ ಬರಬೇಕಾದ ಕಬ್ಬು ಬೇರೆ ಕಾರ್ಖಾನೆಗಳಿಗೆ ಅಥವಾ ಆಲೆಮನೆಗಳ ಪಾಲಾಗುವ ಸಾಧ್ಯತೆಗಳೂ ಇವೆ.
ಆಲೆಮನೆಗಳಿಂದ ಪೈಪೋಟಿ
ಪ್ರಸ್ತುತ ದಿನಗಳಲ್ಲಿ ಬೆಲ್ಲಕ್ಕೂ ಉತ್ತಮ ಬೆಲೆ ಇದೆ. ಪ್ರತಿ ಟನ್ ಬೆಲ್ಲಕ್ಕೆ 4000 ರು. ನಿಂದ 4500 ರು.ವರೆಗೆ ಬೆಲೆ ಇರುವುದರಿಂದ ಆಲೆಮನೆಗಳ ಮಾಲೀಕರು ರೈತರಿಂದ ಕಬ್ಬನ್ನು ಪಡೆದು ನುರಿಸುತ್ತಿದ್ದಾರೆ. ಜಿಲ್ಲೆಯಲ್ಲಿರುವ ಆಲೆಮನೆಗಳು ನಿತ್ಯ ಗರಿಷ್ಠ 2 ಸಾವಿರ ಟನ್ ಕಬ್ಬು ಅರೆಯುತ್ತಿವೆ. ಆಲೆಮನೆ ಮಾಲೀಕರು ರೈತರಿಗೆ ಸ್ಥಳದಲ್ಲೇ 2500 ರೂ.ನಿಂದ 2800 ರೂ. ಹಣ ಕೊಟ್ಟು ಕಬ್ಬನ್ನು ಕಡಿದುಕೊಂಡು ಆಲೆಮನೆಗಳಿಗೆ ತರುತ್ತಿದ್ದಾರೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತಿದೆ.
ಕಾರ್ಖಾನೆಗಳಿಗೆ ಕಬ್ಬನ್ನು ಸಾಗಿಸಿದರೂ ತೂಕದಲ್ಲಿ ವ್ಯತ್ಯಾಸ, ಹಣ ಬರುವವರೆಗೂ ಕಾಯಬೇಕು. ಸಾಗಣೆ ವೆಚ್ಚ ಕೈಬಿಟ್ಟರೂ ಕಟಾವು, ಗದ್ದೆಯಿಂದ ರಸ್ತೆವರೆಗೆ ಸಾಗಿಸುವುದಕ್ಕೆ ಹಣ ನೀಡಬೇಕಿರುವುದರಿಂದ ಕನಿಷ್ಠ 600 ರೂ. ನಿಂದ 800 ರೂ. ವರೆಗೆ ನಷ್ಟವಾಗಲಿದೆ. ಆ ಕಾರಣಕ್ಕೆ ಆಲೆಮನೆಯವರಿಗೆ ನೀಡುವುದೇ ಉತ್ತಮ ಎಂಬ ಅಭಿಪ್ರಾಯವೂ ರೈತರಲ್ಲಿದೆ.
ಕಾರ್ಖಾನೆಗಳು ಶುರುವಾಗುವುದಕ್ಕೆ ಮುನ್ನವೇ ಸಿಕ್ಕಷ್ಟು ಕಬ್ಬನ್ನು ಅರೆಯುವ ಕಾರ್ಯದಲ್ಲಿ ಆಲೆಮನೆಗಳು ತೊಡಗಿವೆ. ಕಂಪನಿಗಳು ಕಬ್ಬು ಅರೆಯುವಿಕೆ ಆರಂಭಿಸಿದರೆ ಕಬ್ಬು ಸಿಗುವುದಿಲ್ಲ ಎಂಬ ಕಾರಣಕ್ಕೆ ಬಿರುಸಿನಿಂದ ಅರೆಯಲಾರಂಭಿಸಿವೆ.












Click it and Unblock the Notifications