ಶ್ರೀರಂಗಪಟ್ಟಣದಲ್ಲಿ ಎಲ್ಲಾ ರೈಲು ನಿಲ್ಲಿಸಿ; ಇಲಾಖೆಗೆ ಮನವಿ
ಮಂಡ್ಯ, ಜನವರಿ 30; ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ನಿಲ್ದಾಣದಲ್ಲಿ ಎಲ್ಲಾ ರೈಲುಗಳನ್ನು ನಿಲುಗಡೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಸಂಸದೆ ಸುಮಲತಾಗೆ ಈ ಕುರಿತು ಜಿಲ್ಲಾ ರಕ್ಷಣಾ ವೇದಿಕೆ ಮನವಿ ಸಲ್ಲಿಕೆ ಮಾಡಿದೆ.
ಪ್ಯಾಸೆಂಜರ್, ಪುಶ್-ಪುಲ್ ಸೇರಿದಂತೆ ಕೆಲವು ರೈಲುಗಳು ಮಾತ್ರ ಶ್ರೀರಂಗಪಟ್ಟಣ ನಿಲ್ದಾಣದಲ್ಲಿ ನಿಲುಗಡೆಗೊಳ್ಳುತ್ತಿವೆ. ಇದರಿಂದ ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಿಗೆ ತೆರಳುವ ಜನರಿಗೆ ಅನಾನುಕೂಲವಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಎಕ್ಸ್‌ಪ್ರೆಸ್ ರೈಲುಗಳು ಶ್ರೀರಂಗಪಟ್ಟಣ ನಿಲ್ದಾಣಗಳಲ್ಲಿ ನಿಲ್ಲಿಸುತ್ತಿಲ್ಲ. ರೈಲು ಏರಲು ಲಗೇಜ್ ಹಿಡಿದು ಬರುವ ಪ್ರಯಾಣಿಕರಿಗೆ ಇದರಿಂದಾಗಿ ನಿರಾಸೆಯಾಗುತ್ತಿದೆ ಎಂದು ವೇದಿಕೆ ಮನವಿ ಪತ್ರದಲ್ಲಿ ಉಲ್ಲೇಖಿಸಿದೆ.

ಕಾವೇರಿ ನದಿ ಸೇರಿದಂತೆ ಶ್ರೀರಂಗಪಟ್ಟಣ ವಿವಿಧ ಸ್ಥಳಗಳಿಗೆ ಬೆಂಗಳೂರಿನಿಂದ ಭಾರೀ ಜನರು ಬರುತ್ತಾರೆ. ಆದರೆ ಅವರು ರೈಲಿನಲ್ಲಿ ಸಂಚಾರ ನಡೆಸಲು ಹಲವು ರೈಲುಗಳು ಇಲ್ಲಿ ನಿಲುಗಡೆಗೊಳ್ಳುತ್ತಿಲ್ಲ ಎಂದು ದೂರಿದ್ದಾರೆ.
ಶ್ರೀರಂಗಪಟ್ಟಣ ಪ್ರಸಿದ್ಧ ಯಾತ್ರಾಸ್ಥಳ ಸಹ ಆಗಿದೆ. ಆದ್ದರಿಂದ ರೈಲ್ವೆ ಇಲಾಖೆ ಎಲ್ಲಾ ರೈಲುಗಳಿಗೆ ನಿಲ್ದಾಣಗಳಲ್ಲಿ ನಿಲುಗಡೆ ನೀಡುವ ಕುರಿತು ಪರಾಮರ್ಶೆ ನಡೆಸಬೇಕು ಎಂದು ಮನವಿ ಮಾಡಲಾಗಿದೆ. ಈ ಕುರಿತು ರೈಲ್ವೆ ಇಲಾಖೆಗಮನ ಸೆಳೆಯುವಂತೆ ಸಂಸದರಿಗೆ ಮನವಿ ಮಾಡಲಾಗಿದೆ.
232 ಕಿ. ಮೀ. ವಿದ್ಯುದೀಕರಣ; ಈ ಹಣಕಾಸು ವರ್ಷದಲ್ಲಿ ಇಲ್ಲಿಯ ತನಕ ನೈಋತ್ಯ ರೈಲ್ವೆ 232 ಕಿ. ಮೀ. ಮಾರ್ಗದ ವಿದ್ಯುದೀಕರಣ ಪೂರ್ಣಗೊಳಿಸಿದೆ. ಹಣಕಾಸು ವರ್ಷದ ಮುಕ್ತಾಯದ ವೇಳೆಗೆ ಇನ್ನೂ 200 ಕಿ. ಮೀ. ಮಾರ್ಗದ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಿದೆ.
ವಿದ್ಯುದೀಕರಣ ಪೂರ್ಣಗೊಂಡ ಬಳಿಕ ಎಲೆಕ್ಟ್ರಿಕ್ ಲೋಕೊಮೊಟಿವ್ ಸಂಚಾರ ನಡೆಸಲಿದ್ದು, ಇದರಿಂದಾಗಿ ಡೀಸೆಲ್ ಉಳಿತಾಯವಾಗಲಿದೆ. ಇದರಿಂದಾಗಿ ಪರಿಸರ ರಕ್ಷಣೆ ಆಗುವ ಜೊತೆಗೆ ರೈಲ್ವೆ ಇಲಾಖೆ ಖರ್ಚು ಸಹ ಕಡಿಮೆಯಾಗಲಿದೆ.
ನೈಋತ್ಯ ರೈಲ್ವೆ ವಿಭಾಗದಲ್ಲಿ 2016ರಲ್ಲಿ ವಿದ್ಯುದೀಕರಣಗೊಂಡ ಮಾರ್ಗ ಇದ್ದಿದ್ದು ಕೇವಲ 200 ಕಿ. ಮೀ. ಆಗಿತ್ತು. ಈಗ ಅದು 1452 ಕಿ. ಮೀ.ಗೆ ಏರಿಕೆಯಾಗಿದೆ. ವಿಭಾಗದ ಶೇ 40ರಷ್ಟು ಮಾರ್ಗ ವಿದ್ಯುದೀಕರಣಗೊಂಡಿದೆ.
ಮುಂದಿನ 2 ತಿಂಗಳಿನಲ್ಲಿ 10 ರೈಲುಗಳನ್ನು ಎಲೆಕ್ಟ್ರಿಕ್ ಇಂಜಿನ್ ಮೂಲಕ ಸಂಚಾರ ನಡೆಸಲು ಇಲಾಖೆ ಮುಂದಾಗಿದೆ. 2019-20, 2020-21ರಲ್ಲಿ ನೈಋತ್ಯ ರೈಲ್ವೆ 48 ರೈಲುಗಳನ್ನು ಎಲೆಕ್ಟ್ರಿಕ್ ರೈಲಾಗಿ ಪರಿವರ್ತನೆ ಮಾಡಿದೆ.
10 ಸಾವಿರ ಲೀಟರ್ ಡೀಸೆಲ್ ಉಳಿತಾಯ; ಶನಿವಾರ ನಾಲ್ಕು ರೈಲಗಳು ಎಲೆಕ್ಟ್ರಿಕ್ ರೈಲುಗಳಾಗಿ ಪರಿವರ್ತನೆಗೊಂಡಿವೆ. ಇದರಿಂದಾಗಿ ನೈಋತ್ಯ ರೈಲ್ವೆಗೆ ಪ್ರತಿದಿನ 10 ಸಾವಿರ ಲೀಟರ್ ಡೀಸೆಲ್ ಉಳಿತಾಯವಾಗಲಿದೆ.
ರೈಲು ಸಂಖ್ಯೆ 11312/ 11311 ಹಾಸನ-ಸೊಲ್ಹಾಪುರ-ಹಾಸನ ಎಕ್ಸ್‌ಪ್ರೆಸ್ ಯಶವಂತಪುರ-ಸೊಲ್ಹಾಪುರ-ಯಶವಂತಪುರ ನಡುವೆ ಜನವರಿ 29ರಿಂದ ಎಲೆಕ್ಟ್ರಿಕ್ ರೈಲಾಗಿ ಸಂಚಾರ ನಡೆಸುತ್ತಿದೆ.
ರೈಲು ನಂಬರ್ 17307/ 17308 ಮೈಸೂರು-ಬಾಗಲಕೋಟೆ-ಮೈಸೂರು ಬಸವ ಎಕ್ಸ್‌ಪ್ರೆಸ್ ಮೈಸೂರು-ಸೊಲ್ಹಾಪುರ-ಮೈಸೂರು ನಡುವೆ ಜನವರಿ 28ರಿಂದ ಜಾರಿಗೆ ಬರುವಂತೆ ಎಲೆಕ್ಟಿಕ್ ರೈಲಾಗಿ ಸಂಚಾರ ನಡೆಸುತ್ತಿದೆ. ಇದರಿಂದಾಗಿ ನೈಋತ್ಯ ರೈಲ್ವೆಗೆ ಡೀಸೆಲ್ ಉಳಿತಾಯವಾಗುತ್ತಿದೆ.
2030ಕ್ಕೆ ಸಂಪೂರ್ಣ ವಿದ್ಯುದೀಕರಣ ಗುರಿಯೊಂದಿಗೆ ಭಾರತೀಯ ರೈಲ್ವೆ ಎಲ್ಲಾ ಮಾರ್ಗಗಳನ್ನು ವಿದ್ಯುದೀಕಣರ ಮಾಡುತ್ತಿದೆ. ವಿದ್ಯುತ್ ಪೂರೈಕೆಗೆ ಸಹಾಯಕವಾಗುವಂತೆ ರೈಲು ನಿಲ್ದಾಣಗಳಲ್ಲಿ ಸೌರ ಶಕ್ತಿ ಮೂಲಕ ವಿದ್ಯುತ್ ತಯಾರಿ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23ನೇ ಸಾಲಿನ ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ. ರೈಲ್ವೆ ಬಜೆಟ್ ಸಹ ಸಾಮಾನ್ಯ ಬಜೆಟ್‌ನಲ್ಲಿ ವಿಲೀಗೊಂಡಿದೆ. ಆದ್ದರಿಂದ ರೈಲ್ವೆ ಇಲಾಖೆಯ ಹೊಸ ಘೋಷಣೆಗಳು ಸಹ ಬಜೆಟ್‌ನಲ್ಲಿ ಪ್ರಕಟವಾಗಲಿವೆ. ಬಜೆಟ್‌ನಲ್ಲಿ ವಿದ್ಯುದೀಕರಣಕ್ಕೂ ಆದ್ಯತೆ ಸಿಗುವ ನಿರೀಕ್ಷೆ ಇದೆ.












Click it and Unblock the Notifications