ಶ್ರೀರಂಗಪಟ್ಟಣ: ಕಟ್ಟೇರಿಯಲ್ಲಿ ವಸತಿ ನಿಲಯ ಬಾಲಕಿಯರಿಗೆ ಲೈಂಗಿಕ ಕಿರುಕುಳ, ಕಾಮುಕ ಮುಖ್ಯಶಿಕ್ಷಕನಿಗೆ ಗೂಸಾ
ಮಂಡ್ಯ, ಡಿಸೆಂಬರ್, 16: ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವಸತಿನಿಲಯ ಉಸ್ತುವಾರಿಗೆ ಹಿಗ್ಗಾ-ಮುಗ್ಗಾ ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಶ್ರೀರಂಗಪಟ್ಟಣ ತಾಲೂಕು ಕಟ್ಟೇರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಾಷ್ಟ್ರೀಯ ಅಭಿಯಾನ ಶಿಕ್ಷಣ ಯೋಜನೆ ವತಿಯಿಂದ ನಡೆಯುತ್ತಿರುವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಮುಖ್ಯಶಿಕ್ಷಕ ಹಾಗೂ ಉಸ್ತುವಾರಿ ಆಗಿರುವ ಚಿನ್ಮಯಾನಂದಸ್ವಾಮಿ ಎಂಬಾತನೇ ವಿದ್ಯಾರ್ಥಿನಿಯರಿಂದ ಧರ್ಮದೇಟು ತಿಂದವನಾಗಿದ್ದಾನೆ.
ಬಾಲಕಿಯರಿಗೆ ಲೈಂಗಿಕ ಕಿರುಕುಳ
ವಸತಿ ನಿಲಯದಲ್ಲಿ ಉಸ್ತುವಾರಿಯಾಗಿದ್ದ ಚಿನ್ಮಯಾನಂದಸ್ವಾಮಿ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುವುದು, ಅಸಭ್ಯವಾಗಿ ವರ್ತಿಸುವುದನ್ನು ರೂಢಿಸಿಕೊಂಡಿದ್ದ. ಈ ಬಗ್ಗೆ ವಾರ್ಡನ್‌ಗೆ ತಿಳಿಸಿದ್ದರೂ ಸಹ ಅವರನ್ನೂ ಬೆದರಿಸಿ ಯಾವುದೇ ವಿಚಾರವೂ ಹೊರಗೆ ಹೋಗದಂತೆ ನೋಡಿಕೊಳ್ಳುತ್ತಿದ್ದ. ವಿದ್ಯಾರ್ಥಿನಿಯೊಬ್ಬಳನ್ನು ರೂಮಿಗೆ ಕರೆದು ಅವರ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೆ ಬಾಲಕಿಗೆ ಮುತ್ತು ಕೊಡಲು ಹೋಗಿದ್ದಾನೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಬಾಲಕಿ ತನ್ನ ಸ್ನೇಹಿತರನ್ನು ಕರೆದು ಈ ಬಗ್ಗೆ ಹೇಳಿಕೊಂಡಿದ್ದಾಳೆ. ಇದರಿಂದ ಉದ್ರಿಕ್ತಗೊಂಡ ಎಲ್ಲ ಮಕ್ಕಳೂ ಒಟ್ಟಿಗೆ ಸೇರಿ ಚಿನ್ಮಯಾನಂದಸ್ವಾಮಿಗೆ ತರಾಟೆ ತೆಗೆದುಕೊಂಡರು. ಬಳಿಕ ಆತನೂ ಎಚ್ಚರಿಕೆ ನೀಡಿದ್ದರಿಂದ ಮತ್ತಷ್ಟು ಕುಪಿತಗೊಂಡ ವಿದ್ಯಾರ್ಥಿನಿಯರು ಕೈಗೆ ಸಿಕ್ಕ ಕೋಲು, ದೊಣ್ಣೆಗಳನ್ನು ಹಿಡಿದು ಚಿನ್ಮಯಾನಂದಸ್ವಾಮಿಗೆ ಹಿಗ್ಗಾ ಮುಗ್ಗಾ ಥಳಿಸಿದರು.

ಕಾಮುಕ ಮುಖ್ಯಶಿಕ್ಷಕನಿಗೆ ಬಿತ್ತು ಗೂಸಾ
ಈ ದೃಶ್ಯವನ್ನು ವೀಡಿಯೋ ಮಾಡುತ್ತಿದ್ದನ್ನು ಕಂಡ ಚಿನ್ಮಯಾನಂದಸ್ವಾಮಿ ನಿಬ್ಬೆರಗಾಗಿದ್ದಾನೆ. ಆದರೂ ವೀಡಿಯೋ ಮಾಡುತ್ತಿದ್ದುದ್ದನ್ನು ಕಂಡರೂ ಕೂಡ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಸುದ್ಧಿ ತಿಳಿದ ತಕ್ಷಣ ಗ್ರಾಮಸ್ಥರು, ಪೋಷಕರು ಸ್ಥಳಕ್ಕೆ ಆಗಮಿಸಿ ಚಿನ್ಮಯಾನಂದಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಸೂಕ್ತ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಕೆ.ಆರ್. ಸಾಗರ ಇನ್ಸ್‌ಪೆಕ್ಟರ್ ಪುನೀತ್ ಮತ್ತು ಪಿಎಸ್‌ಐ ಲಿಂಗರಾಜು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು ಕಾಮುಕ ಚಿದಾನದಸ್ವಾಮಿಯನ್ನು ವಶಕ್ಕೆ ಪಡೆದರು.

ಭಯಾನಕ ಸತ್ಯವೊಂದು ಬಯಲು
ವಾರ್ಡನ್ ನಮಿತ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ವಶಕ್ಕೆ ಪೆಡದ ಪೊಲೀಸರು, ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಂತರ ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಹಲವು ತಿಂಗಳುಗಳಿಂದಲೂ ಆರೋಪಿ ಚಿನ್ಮಯಾನಂದಸ್ವಾಮಿ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ. ಪೋಷಕರು ಮತ್ತು ಯಾರಿಗಾದರೂ ಹೇಳಿದರೆ ಪರೀಕ್ಷೆ ಬರೆಯಲು ಆವಕಾಶ ನೀಡುವುದಿಲ್ಲ ಎಂದು ವಿದ್ಯಾರ್ಥಿಗಳನ್ನು ಬೆದರಿಸುತ್ತಿದ್ದ ಎನ್ನುವ ಭಯಾನಕ ಸತ್ಯವೊಂದು ಬಯಲಾಗಿದೆ.












Click it and Unblock the Notifications