2024ರ ಮಕರ ಸಂಕ್ರಾಂತಿಯೊಳಗೆ ಶ್ರೀ ರಾಮ ಮಂದಿರ ನಿರ್ಮಾಣ ಪೂರ್ಣ: ಪೇಜಾವರ ಶ್ರೀ
ಅಯೋಧ್ಯೆಯ ರಾಮ ಮಂದಿರ ನಿರ್ಮಾಣ 2024ರ ಮಕರ ಸಂಕ್ರಾಂತಿಯೊಳಗೆ ಪೂರ್ಣಗೊಳ್ಳಲಿದೆ ಎಂದು ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾಹಿತಿ ನೀಡಿದರು.
ಮದ್ದೂರು, ಫೆಬ್ರವರಿ, 07: ಅಯೋಧ್ಯೆ ರಾಮಮಂದಿರ ನಿರ್ಮಾಣ ಪ್ರತಿಷ್ಠಾಪನಾ ಮಹೋತ್ಸವ 2024ರ ಮಕರ ಸಂಕ್ರಾಂತಿಯೊಳಗೆ ಪೂರ್ಣಗೊಳ್ಳಲಿದೆ ಎಂದು ಶ್ರೀ ರಾಮಜನ್ಮಭೂಮಿ ಟ್ರಸ್ಟಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮದ್ದೂರಿನಲ್ಲಿ ತಿಳಿಸಿದರು.
ಪಟ್ಟಣದ ಪುರಾಣ ಪ್ರಸಿದ್ಧ ಹೊಳೇ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಅಯೋಧ್ಯೆ ರಾಮಮಂದಿರ ಪ್ರತಿಷ್ಠಾನಾ ಮಹೋತ್ಸವಕ್ಕೂ ಮುನ್ನ ನಿಧಿ ಸಂಗ್ರಹಣೆ ಕಾರ್ಯಕ್ರಮವನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗುವುದು. ಮಹೋತ್ಸವಕ್ಕೆ 3 ಸಾವಿರ ಕೋಟಿ ರೂ. ನಿಧಿ ಸಂಗ್ರಹಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ. ಪ್ರತಿ ಭಕ್ತರ ಮನೆಯಿಂದ ಕನಿಷ್ಠ 100 ರೂ. ದೇಣಿಗೆಯನ್ನು ಭಿಕ್ಷಾ ರೂಪದಲ್ಲಿ ಸಂಗ್ರಹಿಸುವುದು ನಮ್ಮ ಗುರಿಯಾಗಿದೆ. ರಾಮಮಂದಿರ ನಿರ್ಮಾಣ ಕೇವಲ ನಮ್ಮ ಕನಸಲ್ಲ, ಇಡೀ ದೇಶದ ರಾಮಭಕ್ತರ ಕನಸಾಗಬೇಕು. ಗೋಸಾಗಾಣಿಕೆ ಸಹಿತ ವಿವಿಧ ಸಾಮೂಹಿಕ ಕಾರ್ಯಕ್ರಮಗಳನ್ನು ರಾಮಮಂದಿರ ನಿರ್ಮಾಣದ ಬಳಿಕ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜೀವನದಲ್ಲಿ ಸಾವು, ನೋವುಗಳು ಸಹಜ
ಜೀವನದಲ್ಲಿ ಸಾವು, ನೋವು, ದುಃಖಗಳು ಸಹಜವಾಗಿರುತ್ತವೆ. ಅನುಗ್ರಹ ದೊರೆತ ನಂತರ ಎಲ್ಲ ನೋವು ತನ್ನಿಂದ ತಾನೇ ದೂರವಾಗುತ್ತದೆ. ಮನುಷ್ಯ ಎಷ್ಟೇ ಐಶ್ವರ್ಯ, ಹಣ ಸಂಪಾದನೆ ಮಾಡಬಹುದು. ಇವೆಲ್ಲವೂ ಭಗವಂತನ ಸಾಕ್ಷಾತ್ಕಾರದಿಂದ ಸಾಧ್ಯವಾಗುತ್ತದೆ. ಎಲ್ಲಾ ಆತ್ಮಗಳಲ್ಲೂ ಭಗವಂತ ಇದ್ದಾನೆ. ಈತನ ಆಶೀರ್ವಾದ ಇಲ್ಲದಿದ್ದರೆ ಎಷ್ಟೇ ಸಂಪಾದನೆ ಇದ್ದರೂ ಸಹ, ಒಂದಲ್ಲ ಒಂದು ರೂಪದಲ್ಲಿ ಕಾಡಿ ನಾಶ ಮಾಡುತ್ತದೆ ಎಂದು ಎಂದರು.

ಪೇಜಾವರ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ
ಶ್ರೀ ಹೊಳೆ ಆಂಜನೇಯಸ್ವಾಮಿ ದೇಗುಲದ ಸನ್ನಿಧಿಗೆ ಆಗಮಿಸಿದ್ದ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಬೆಂಗಳೂರಿನಿಂದ ಬೆಳಗ್ಗೆ 8:30ಕ್ಕೆ ಆಗಮಿಸಿದ ಶ್ರೀಗಳನ್ನು ದೇವಾಲಯದ ಹಿರಿಯ ಅರ್ಚಕ ಕೃಷ್ಣಾಚಾರ್, ಪ್ರಧಾನ ಅರ್ಚಕ ಪ್ರದೀಪಾಚಾರ್ಯರು, ಸಹ ಅರ್ಚಕ ಸುರೇಶಾಚಾರ್ಯ ಸೇರಿದಂತೆ ನೆರೆದಿದ್ದ ಅಖಂಡ ಭಕ್ತ ಸಮೂಹ ಮಂಗಳವಾದ್ಯ ಸಮೇತ ಬರಮಾಡಿಕೊಂಡು. ನಂತರ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಮುಖ್ಯ ಪ್ರಾಣದೇವರು ಶ್ರೀ ಹೊಳೆ ಆಂಜನೇಯಸ್ವಾಮಿ ಮೂಲ ವಿಗ್ರಹಕ್ಕೆ ಮಧು ಮತ್ತು ಪಂಚಾಮೃತ ಅಭಿಷೇಕದೊಂದಿಗೆ ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿದರು.
ಶ್ರೀಗಳು ಸಂಸ್ಥಾನ ಪೂಜೆ ನೆರವೇರಿಸಿದ ನಂತರ ದೇಗುಲದ ಆವರಣದಲ್ಲಿ ಕನ್ನಡ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ 1 ಲಕ್ಷ ರೂ.ಗಳ ನಾಣ್ಯಗಳೊಂದಿಗೆ ತುಲಾಬಾರ ಸೇವೆ ನೆರವೇರಿಸಲಾಯಿತು. ನಂತರ ಸೇವೆಯಿಂದ ಸಂಗ್ರಹವಾದ ನಿಧಿಯನ್ನು ದೇಗುಲದ ಅಭಿವೃದ್ಧಿ ಕಾರ್ಯಕ್ಕೆ ಬಳಸುವಂತೆ ಶ್ರೀಗಳು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಡಿ.ಸಿ. ತಮ್ಮಣ್ಣ, ಮನ್‌ಮುಲ್ ನಿರ್ದೇಶಕಿ ರೂಪ, ಭಾರ್ಗವ ಸೇರಿದಂತೆ ಅಪಾರ ಭಕ್ತ ಸಮೂಹವೇ ನೆರೆದಿತ್ತು.












Click it and Unblock the Notifications