ಕೇಸಲ್ಲಿ ಸೆಣಸಾಡುವ ವಕೀಲರಿಗೆ ರಾಗಿ ಮುದ್ದೆ ಸ್ಪರ್ಧೆ

By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಡಿಸೆಂಬರ್ 17 : ಮನೆಯ ರಾಗಿ ಮುದ್ದೆಗಿಂತ ಪಿಜ್ಜಾ, ಬರ್ಗರ್ ಕಡೆಗೆ ಒಲವು ಹೆಚ್ಚಿಸಿಕೊಂಡಿರುವ ಯುವ ಜನಾಂಗಕ್ಕೆ ಮುದ್ದೆ ತಿಂದವನು ಶಕ್ತಿಶಾಲಿಯಾಗುತ್ತಾನೆ ಎಂಬುದನ್ನು ತೋರಿಸಿಕೊಡುವ ಅನಿವಾರ್ಯತೆ ಎದುರಾಗಿದೆ.

ಮುದ್ದೆ ಆರೋಗ್ಯಕಾರಿ ಮತ್ತು ಶ್ರಮದ ಕೆಲಸಕ್ಕೆ ಶಕ್ತಿ ನೀಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಇಂಥ ಆರೋಗ್ಯಕಾರಿ ರಾಗಿ ಮುದ್ದೆ ತಿನ್ನುವ ಸ್ಪರ್ಧೆ ಏರ್ಪಡಿಸಿದರೆ ಹೇಗಿರಬಹುದು ಎಂಬ ಯೋಚನೆ ಬಂದ ಕೂಡಲೇ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಮಂಡ್ಯದ ಎಚ್.ಹೊಂಬೇಗೌಡ ಮೆಮೋರಿಯಲ್ ಅಡ್ವೋಕೇಟ್ಸ್ ಅಸೋಸಿಯೇಷನ್ ರಿಕ್ರಿಯೇಷನ್ ಕ್ಲಬ್ ಯಶಸ್ವಿಯಾಗಿದೆ.

ಕನ್ನಡ ರಾಜ್ಯೋತ್ಸವ ಸಮಾರಂಭದ ಅಂಗವಾಗಿ ಗ್ರಾಮೀಣ ಕ್ರೀಡೆಗಳಲ್ಲೊಂದಾಗಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯನ್ನು ವಕೀಲರಿಗಾಗಿ ಏರ್ಪಡಿಸುವ ಮೂಲಕ ಕ್ಲಬ್ ಎಲ್ಲರ ಗಮನ ಸೆಳೆಯಿತು.

Ragi Mudde eating competition for Mandya Advocates

ಈ ಸ್ಪರ್ಧೆಗೆ ಸುಮಾರು 40ಕ್ಕೂ ಹೆಚ್ಚು ಮಹಿಳಾ ಹಾಗೂ ಪುರುಷ ವಕೀಲರು, ಇತರರು ಸಾಥ್ ನೀಡುವ ಮೂಲಕ ಕ್ರೀಡಾಮನೋಭಾವ ಮೆರೆದರು. ಮಹಿಳಾ ಮತ್ತು ಪುರುಷ ಹೀಗೆ ಎರಡು ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಿಗಳು ತಾವೇನು ರಾಗಿ ಮುದ್ದೆ ತಿನ್ನುವುದರಲ್ಲಿ ಹಿಂದೆ ಬಿದ್ದಿಲ್ಲ ಎನ್ನುವುದನ್ನು ತೋರಿಸಿಕೊಟ್ಟರು.

ಬಿಸಿಬಿಸಿ ರಾಗಿ ಮುದ್ದೆ ನಾಟಿಕೋಳಿ ಸಾರಿನಲ್ಲಿ ಮುದ್ದೆ ಉಣ್ಣೋಕೆ ಶುರು ಮಾಡಿದ ಸ್ಪರ್ಧಿಗಳು ಗ್ರಾಂನಿಂದ ಆರಂಭವಾಗಿ ಕಿಲೋ ಗ್ರಾಂಗೆ ಬಂದು ನಿಂತರು. ಕೆಲವರು ಮುಂದೆ ತಿನ್ನಲಾರದೆ ಕೈತೊಳೆದರೆ ಮತ್ತೆ ಕೆಲವರು ಒದ್ದಾಡುತ್ತಾ ತಿನ್ನುವ ಪ್ರಯತ್ನ ಮಾಡಿದರು.

Ragi Mudde eating competition for Mandya Advocates

ಕೊನೆಗೂ ಪುರುಷರ ವಿಭಾಗದಲ್ಲಿ ವಕೀಲ ಚಿಕ್ಕಸ್ವಾಮಿ ಅವರು 2 ಕೆ.ಜಿ. 200 ಗ್ರಾಂ ಮುದ್ದೆ ತಿಂದು ಪ್ರಥಮ ಸ್ಥಾನ ಗಿಟ್ಟಿಸಿಕೊಂಡರೆ, ವಕೀಲ ಸೋಮ 1 ಕೆಜಿ 700 ಗ್ರಾಂ ತಿಂದು ದ್ವಿತೀಯ ಸ್ಥಾನ ಪಡೆದರೆ, ವಕೀಲ ತಂಡಸನಹಳ್ಳಿ ಶಂಕರೇಗೌಡ 1 ಕೆಜಿ 650 ಗ್ರಾಂ ಮುದ್ದೆ ತಿಂದು ತೃತೀಯ ಸ್ಥಾನಕ್ಕೆ ಸಮಾಧಾನ ಪಟ್ಟುಕೊಂಡರು.

ಮಹಿಳಾ ವಿಭಾಗದಲ್ಲಿ ವಕೀಲೆ ಶೈಲಜಾ ಅವರು 1 ಕೆ.ಜಿ. 750 ಗ್ರಾಂ ಮುದ್ದೆ ತಿನ್ನುವ ಮೂಲಕ ಪ್ರಥಮ ಸ್ಥಾನ ಪಡೆದರೆ, ಸಾಕಮ್ಮ ಎಂಬುವರು 1 ಕೆಜಿ 600 ಗ್ರಾಂ ತಿಂದು ದ್ವಿತೀಯ, ಜಯಲಕ್ಷ್ಮಿ ಅವರು 1 ಕೆಜಿ 500 ಗ್ರಾಂ ಮುದ್ದೆ ತಿಂದು ತೃತೀಯ ಸ್ಥಾನ ಪಡೆದುಕೊಂಡರು. ಒಟ್ಟಾರೆ ಸ್ಪರ್ಧೆ ಖಷಿಯಾಗಿ ಕಳೆದಿದ್ದಂತೂ ನಿಜ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ragi Mudde eating competition was conducted for Mandya Advocates. Many male and female advocates participated in eating ragi, which is considered as healthy food.
Please Wait while comments are loading...