ರಾಜ್ಯಕ್ಕೆ 555 ಕೋಟಿ ಬಿಡುಗಡೆ, ಪ್ರತೀ ಬುಧವಾರ ಸಾಲಮೇಳ: ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ಬಗ್ಗೆ ಇಲ್ಲಿದೆ ವಿವರ
ಮಂಡ್ಯ, ನವೆಂಬರ್ 07 : ಪ್ರಧಾನಮಂತ್ರಿ ಸ್ವನಿಧಿ ಯೋಜನೆ ದೇಶದಲ್ಲೇ ಕರ್ನಾಟಕ 5ನೇ ಸ್ಥಾನದಲ್ಲಿದ್ದು, ಡಿಸೆಂಬರ್ ಅಂತ್ಯದೊಳಗೆ ಮೊದಲ ಸ್ಥಾನಕ್ಕೆ ಪ್ರಯತ್ನ ನಡೆಸಲಾಗುವುದು ಎಂದು ಸ್ವನಿಧಿ ಯೋಜನೆಯ ರಾಜ್ಯ ಸಂಚಾಲಕ ಕೆ. ರಾಮದಾಸ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ವನಿಧಿ ಯೋಜನೆಯಡಿ ರಾಜ್ಯದ 311 ನಗರ, ಪಟ್ಟಣ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಿಗೆ ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ 3.31 ಲಕ್ಷ ಗುರಿ ಹೊಂದಲಾಗಿದ್ದು, 3.08 ಲಕ್ಷ ಮಂದಿಗೆ ನೀಡಲಾಗಿದೆ. ನವೆಂಬರ್ ಅಂತ್ಯದೊಳಗೆ ಗುರಿ ಸಾಧನೆ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ, ಈಗಾಗಲೇ 26 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದೇನೆ ಎಂದು ಹೇಳಿದರು.

ಪ್ರಧಾನಮಂತ್ರಿಗಳು ರಾಜ್ಯಕ್ಕೆ 555 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಈ ಯೋಜನೆಗೆ ವ್ಯಾಪಾರಸ್ಥರಲ್ಲದೆ, ಅಸಂಘಟಿತ ಕಾರ್ಮಿಕರನ್ನು ತರುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ರಾಜ್ಯದ 32 ಜಿಲ್ಲೆಗಳಲ್ಲೂ ಈ ಯೋಜನೆ ಜಾರಿಯಲ್ಲಿದ್ದು, ದೇಶದ 4.86 ಜನರಿಗೆ 9 ಸಾವಿರ ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ 4181 ಮಂದಿ ಅರ್ಜಿ ಸಲ್ಲಿಸಿದ್ದು, ಈ ಪೈಕಿ 4065 ಅರ್ಜಿಗಳನ್ನು ಶಿಫಾರಸ್ಸು ಮಾಡಲಾಗಿದೆ. ಇದರಲ್ಲಿ 3795 ಮಂದಿಗೆ ಸಾಲ ನೀಡುವ ಮೂಲಕ ಶೇ. 97ರಷ್ಟು ಸಾಧನೆ ಮಡಲಾಗಿದೆ ಎಂದು ವಿವರಿಸಿದರು.
ಸ್ವನಿಧಿಯಿಂದ ಮುದ್ರಾ ಯೋಜನೆಗೆ ಪರಿವರ್ತನೆ
ಪ್ರಾರಂಭಿಕ ಹಂತದಲ್ಲಿ 10 ಸಾವಿರ ರೂ.ಗಳ ಸ್ವನಿಧಿ ಯೋಜನೆಯ ಸಾಲ ವಿತರಿಸಲಾಗುವುದು. ಸಾಲ ಮರುಪಾವತಿ ಮಾಡಿದಲ್ಲಿ 20 ಸಾವಿರ ಹಾಗೂ 50 ಸಾವಿರಗಳಿಗೆ ಏರಿಕೆ ಮಾಡಲಾಗುತ್ತದೆ. ಈ ಸಾಲವನ್ನು ನಿಗಧಿತ ಸಮಯದೊಳಗೆ ಮರುಪಾವತಿ ಮಾಡಿದಲ್ಲಿ ಮುದ್ರಾ ಯೋಜನೆಗೆ ಪರಿವರ್ತನೆ ಮಾಡಿ 10 ಲಕ್ಷ ರೂ.ಗಳವರೆಗೆ ಯಾವುದೇ ಗ್ಯಾರಂಟಿಗಳಿಲ್ಲದೆ ಸಾಲ ನೀಡಲಾಗುತ್ತದೆ ಎಂದು ಹೇಳಿದರು.
ಪ್ರಧಾನಮಂತ್ರಿ ಸ್ವನಿಧಿ, ಸಮೃದ್ಧಿ ತಕ್, ವಿಶ್ವಕರ್ಮ, ಅತ್ಮನಿರ್ಭರ, ಜೀವನ್ ಸುರಕ್ಷಾ, ಸೇರಿದಂತೆ ವಿವಿಧ ಏಳು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಈ ಪೈಕಿ ಸ್ವನಿಧಿ ಯೋಜನೆಯಲ್ಲಿ ಇದುವರೆಗೆ ಬೀದಿ ಬದಿ ವ್ಯಾಪಾರಿಗಳು, ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ನೀಡಲಾಗುತ್ತಿತ್ತು. ಇದೀಗ ಮನೆ ಮನೆಗೆ ಪತ್ರಿಕೆ, ಹಾಲು ವಿತರಿಸುವವರು, ಇಸ್ತ್ರಿ ಮಾಡುವವರು, ಕ್ಯಾಟರಿಂಗ್, ಟೈಲರಿಂಗ್, ಮನೆ ಮನೆಗೆ ಆಹಾರ, ಇತರೆ ವಸ್ತುಗಳನ್ನು ವಿತರಣೆ ಮಾಡುವವರಿಗೆ ಸಾಲ ನೀಡುವ ಹೊಸ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದರು.
ಪ್ರಧಾನಮಂತ್ರಿ ಜೀವನ್ ಸುರಕ್ಷಾ ಯೋಜನೆಯಡಿ ಅಪಘಾತ, ಸ್ವಾಭಾವಿಕ ಸಾವು ಸಂಭವಿಸಿದಲ್ಲಿ 2 ಲಕ್ಷ ರೂ.ಗಳ ಪರಿಹಾರ ವಿತರಿಸಲಾಗುತ್ತದೆ. ಮಾತೃವಂಧನಾ ಯೋಜನೆಯಲ್ಲಿ ಗರ್ಭಿಣಿ ಸ್ತ್ರೀಯರಿಗೆ ಪ್ರತೀ ತಿಂಗಳು 5 ಸಾವಿರ, ಹೆರಿಗೆಯಾದ ನಂತರ ತಾಯಂದಿರಿಗೆ ಪ್ರತಿ ತಿಂಗಳು 6 ಸಾವಿರ ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ಹೇಳಿದರು.
ಮಂಡ್ಯ ಜಿಲ್ಲೆಯಲ್ಲಿ ಮಂಡ್ಯ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ಕೆ.ಆರ್. ಪೇಟೆ, ಪಾಂಡವಪುರ, ನಾಗಮಂಗಲ ಹಾಗೂ ಬೆಳ್ಳೂರು ಸ್ಥಳೀಯ ಸಂಸ್ಥೆಗಳಲ್ಲಿ ಈ ಯೋಜನೆ ಜಾರಿಯಲ್ಲಿದ್ದು, ಯೋಜನೆ ಪಡೆದ ಕುಟುಂಬದ ಮಕ್ಕಳಿಗೂ ಸಹ ಸಹಾಯ ಮಾಡುವಂತಹ ಪೂರ್ಣ ಪ್ರಮಾಣದ ಯೋಜನೆಯನ್ನು ರೂಪಿಸಲಾಗಿದೆ ಎಂದರು.
ಪ್ರತೀ ಬುಧವಾರ ಸಾಲಮೇಳ
ಬ್ಯಾಂಕುಗಳಲ್ಲಿ ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ಸಾಲ ನೀಡುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವರು ಸ್ವತಃ ಬ್ಯಾಂಕುಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಕಟ್ಟು ನಿಟ್ಟಿನ ಸೂಚನೆ ನೀಡಿದ್ದು, ಸರ್ಕಾರ ನೀಡುವ ಹಣವನ್ನು ಈ ಯೋಜನೆಯಡಿಯಲ್ಲಿ ಸಾಲ ವಿತರಿಸಬೇಕು. ಈ ಹಿನ್ನೆಲೆಯಲ್ಲಿ ಪ್ರತೀ ಬುಧವಾರ ಸಾಲಮೇಳ ಆಯೋಜಿಸುವಂತೆ ಸೂಚಿಸಲಾಗಿದ್ದು, ಎಲ್ಲ ಬ್ಯಾಂಕುಗಳಲ್ಲೂ ಪ್ರತೀ ಬುಧವಾರದಂದು ಸಾಲಮೇಳ ನಡೆಯಲಿದೆ ಎಂದು ಹೇಳಿದರು.
ಹೆಚ್ಚು ಮಂದಿ ಯುಪಿಎ ಬಳಕೆ
ಬೀದಿ ಬದಿ ವ್ಯಾಪಾರಿಗಳೂ ಸಹ ಹೆಚ್ಚಾಗಿ ಫೋನ್‌ಪೇ ಮೂಲಕ ಯುಪಿಎಯನ್ನು ಬಳಕೆ ಮಾಡುತ್ತಿದ್ದು, ಇಂತಹ ಬಳಕೆದಾರನ್ನು ಉತ್ತೇಜಿಸುವ ಸಲುವಾಗಿ ಅವರ ಖಾತೆಗೆ ಪ್ರತೀ ತಿಂಗಳು 100ರೂ.ಗಳ ಅವರ ಖಾತೆಗೆ ಜಮಾ ಮಾಡಲಾಗುತ್ತದೆ. ಇದಕ್ಕಾಗಿ ಸರ್ಕಾರ 107.9 ಕೋಟಿ ರೂ. ಗಳನ್ನು ಮೀಸರಿಸಿದೆ ಎಂದು ವಿವರಿಸಿದರು.












Click it and Unblock the Notifications