ಬೂಕನಕೆರೆ ವ್ಯಾಪ್ತಿಯಲ್ಲಿ ಜನರ ನಿದ್ದೆ ಕೆಡಿಸಿದ ಚಿರತೆ
ಮಂಡ್ಯ, ಅಕ್ಟೋಬರ್ 24: ಕೃಷಿ ಕೈಕೊಟ್ಟಿರುವ ಕಾರಣದಿಂದ ಕುರಿ ಸಾಕಾಣಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೈತರ ಪಾಲಿಗೆ ಚಿರತೆಯೊಂದು ಕಂಟಕವಾಗಿ ಪರಿಣಮಿಸಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಡ್ಡಾಡುತ್ತಾ ಕೊಟ್ಟಿಗೆಗೆ ನುಗ್ಗಿ ಕುರಿ, ಮೇಕೆಗಳನ್ನು ತಿಂದು ಹಾಕುತ್ತಿದೆ.
ಚಿರತೆಯ ಉಪಟಳದಿಂದ ರೈತರು ಆತಂಕ್ಕಕ್ಕೀಡಾಗಿದ್ದು, ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯ ಮೊರೆಹೋಗಿದ್ದಾರೆ. ಚಿರತೆಯು ರಾಜೇನಹಳ್ಳಿ ಗ್ರಾಮದ ನಿವಾಸಿ ವಿಶ್ವೇಶ್ ಎಂಬುವವರಿಗೆ ಸೇರಿದ ಕುರಿಗಳ ಹಟ್ಟಿಗೆ ಎರಡು ಬಾರಿ ದಾಳಿ ಮಾಡಿದ್ದು, ಎರಡು ಕುರಿಗಳನ್ನು ಸಾಯಿಸಿದೆ.

ಗ್ರಾಮದ ವ್ಯಾಪ್ತಿಯ ಅರಣ್ಯದಲ್ಲಿ ಅಡಗಿ ಕುಳಿತಿರುವ ಚಿರತೆ ಆಗಾಗ್ಗೆ ಗ್ರಾಮದೊಳಗೆ ನುಗ್ಗಿ, ಕುರಿ ಮೇಕೆಗಳ ಮೇಲೆ ದಾಳಿ ಮಾಡುತ್ತಿರುವುದರಿಂದ ಗ್ರಾಮಸ್ಥರು ಭಯದ ವಾತಾವರಣ ನಿರ್ಮಾಣವಾಗಿದೆ. ಜಮೀನಿಗೆ ತೆರಳಲು, ಕೃಷಿ ಕೆಲಸ ಮಾಡಲು ಭಯಪಡುವಂತಾಗಿದೆ. ರಾತ್ರಿ ವೇಳೆ ಸಂಚರಿಸಲೂ ಜನ ಹಿಂದೇಟು ಹಾಕುತ್ತಿದ್ದಾರೆ. ಅರಣ್ಯ ಇಲಾಖೆ ಈ ಕುರಿತು ಶೀಘ್ರವೇ ಕ್ರಮ ಕೈಗೊಳ್ಳಬೇಕೆಂಬುದು ಜನರ ಇಂಗಿತ.












Click it and Unblock the Notifications