ಪಾಂಡವಪುರ: ವಿಶ್ವೇಶ್ವರಯ್ಯ ನಾಲೆಗೆ ಉರುಳಿದ ಕಾರು, ಐವರು ಜಲಸಮಾಧಿ
ಪಾಂಡವಪುರ, ನವೆಂಬರ್, 08: ಎದುರಿನಿಂದ ಬಂದ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಕಾರು ನಾಲೆಗೆ ಬಿದ್ದು ಐವರು ಜಲಸಮಾಧಿಯಾಗಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಬನ್ನಘಟ್ಟ ಬಳಿ ನಡೆದಿದೆ.
ತುಮಕೂರು ಜಿಲ್ಲೆಯ ತಿಪಟೂರಿನ ಕೆ.ಟಿ. ಕೃಷ್ಣಪ್ಪ, ಧನಂಜಯ, ಹುಚ್ಚಪ್ಪ ಹಾಗೂ ಮತ್ತಿಬ್ಬರು ಜೀವಂತ ಜಲಸಮಾಧಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಚಂದ್ರಪ್ಪ ಎಂಬುವರಿಗೆ ಸೇರಿದ ಇಂಡಿಕಾ ಕಾರು (ಕೆ.ಎ.14, ಎ. 2457) ಮೈಸೂರಿನಿಂದ ನಾಗಮಂಗಲ ಕಡೆಗೆ ಚಲಿಸುತ್ತಿತ್ತು. ಬನ್ನಘಟ್ಟ ಬಳಿ ಸೇತುವೆ ಮೇಲೆ ಎದುರಿನಿಂದ ಬಂದ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಲುವಾಗಿ ಚಾಲಕ ಕಾರನ್ನು ಪಕ್ಕಕ್ಕೆ ತಿರುಗಿಸಿದಾಗ ನಿಯಂತ್ರಣ ಕಳೆದುಕೊಂಡು ಸೇತುವೆಯ ತಡೆ ಗೋಡೆಗೆ ಡಿಕ್ಕಿ ಹೊಡೆಯಿತು.

ಅತಿ ವೇಗವಾಗಿ ಚಲಿಸುತ್ತಿದ್ದ ಕಾರು ಸೇತುವೆ ತಡೆಗೋಡೆಗೆ ರಭಸದಿಂದ ಡಿಕ್ಕಿ ಹೊಡೆದು ನಾಲೆಗೆ ಉರುಳಿಬಿದ್ದಿದೆ. ಸಂಜೆ 4:45ರ ಸಮಯಕ್ಕೆ ಕಾರು ನಾಲೆಗೆ ಉರುಳಿ ಬಿದ್ದಿದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಅಗ್ನಿಶಾಮಕ ಸಿಬ್ಬಂದಿ ನೆರವಿನೊಂದಿಗೆ ಪೊಲೀಸರು ಕಾರನ್ನು ಹೊರ ತೆಗೆಯುವ ಕಾರ್ಯಚರಣೆಗೆ ಇಳಿದರು. ರಾತ್ರಿ 9ರ ವೇಳೆಗೆ ಕಾರನ್ನು ನಾಲೆಯಿಂದ ಕ್ರೈನ್ ಮೂಲಕ ಹೊರತೆಗೆಯುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ಯಶಸ್ವಿಯಾದರು.
ಕೆ.ಆರ್.ಎಸ್.ನಿಂದ ನಾಲೆಗಳಿಗೆ ನಿನ್ನೆಯಿಂದಲೇ ನೀರು ಹರಿಸಲಾಗಿತ್ತು. ಪೂರ್ಣ ಪ್ರಮಾಣದಲ್ಲಿ ನೀರು ನಾಲೆಯಲ್ಲಿ ಹರಿಯುತ್ತಿತ್ತು. ಮೇಲಿನಿಂದ ರಭಸವಾಗಿ ಕಾರು ಬಿದ್ದ ಕಾರಣ ನೋಡು ನೋಡುತ್ತಿದ್ದಂತೆ ನಾಲೆಯೊಳಗೆ ಮುಳುಗಿತ್ತು. ಸ್ಥಳೀಯ ಕೂಗಿಕೊಂಡರಾದರೂ ಮುಳುಗಿದ್ದ ಕಾರನ್ನು ಕಂಡು ಯಾರೂ ನಾಲೆಯೊಳಗೆ ಇಳಿಸುವ ಪ್ರಯತ್ನ ಮಾಡಲಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಮೂರ್ನಾಲ್ಕು ಗಂಟೆಗಳ ಕಾಲ ಸತತ ಪ್ರಯತ್ನದ ನಂತರ ಹೊರತೆಗೆಯಲಾಯಿತು.
ಕಾರನ್ನು ಹೊರತೆಗೆದು ಒಳಗಿದ್ದ ಐದೂ ಮಂದಿಯ ಶವಗಳನ್ನು ತೆಗೆದು ಸಮೀಪದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಯಿತು. ಕಾರಿನೊಳಗೆ ಹೂವು, ಹಣ್ಣು ಇದ್ದು, ಯಾವುದೋ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ವಾಪಸ್ಸು ತೆರಳುತ್ತಿದ್ದರೆಂದು ಹೇಳಲಾಗಿದೆ. ಕಾರು ಉರುಳಿ ಬಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್, ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್, ತಹಶೀಲ್ದಾರ್ ಮೋಹನ್, ಪಾಂಡವಪುರ ಸಿಪಿಐ ವಿವೇಕಾನಂದ, ಗ್ರಾಮಾಂತರ ಸಿಪಿಐ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಾಲಿಗೆ ತಡೆಗೋಡೆ ಇಲ್ಲ
ಬನಘಟ್ಟ ಬಳಿ ಇರುವ ವಿಶ್ವೇಶ್ವರಯ್ಯ ನಾಲೆ ಆಳವಾದ ಸ್ಥಳದಲ್ಲಿದ್ದು, ಪಾಂಡವಪುರ ಕಡೆಯಿಂದ ಬರುವಾಗ ಇಳಿಜಾರಿನಿಂದ ಕೂಡಿದೆ. ಈ ಸ್ಥಳದಲ್ಲಿನಾಲೆಗೆ ಅಡ್ಡವಾಗಿ ಯಾವುದೇ ತಡೆಗೋಡೆಯನ್ನು ನಿರ್ಮಿಸಿಲ್ಲ. ಇದು ಅಪಾಯಕಾರಿ ಸ್ಥಳವಾಗಿರುವುದರಿಂದ ಎಚ್ಚರಿಕೆಯಿಂದ ವಾಹನಗಳನ್ನು ಚಲಾಯಿಸಬೇಕಾಗಿದ್ದು, ತಿರುವಿನಲ್ಲಿ ಸ್ವಲ್ಪ ಎಚ್ಚರ ತಪ್ಪಿದರೆ ವಾಹನಗಳು ನೇರವಾಗಿ ನಾಲೆಯೊಳಗೆ ಉರುಳಿ ಬೀಳುತ್ತವೆ. ಈ ಹಿಂದೆಯೂ ಅನೇಕ ವಾಹನಗಳು ಬಿ.ಜೆ.ಕ್ರಮಗಳು ನಾಲೆಗೆ ಉರುಳಿರುವ ನಿದರ್ಶನಗಳಿವೆ.
ಈ ಅಪಾಯವನ್ನು ಮನಗಂಡು ನಾಲೆ ಪಕ್ಕದ ರಸ್ತೆಗೆ ಬದಲಾಗಿ ಪಕ್ಕದಲ್ಲಿ ಪ್ರತ್ಯೇಕವಾಗಿ ವಾಹನಗಳ ಸಂಚಾರಕ್ಕೆ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಅದು ಮುಗಿಯುವ ಹಂತದಲ್ಲಿದ್ದು, ಸೇತುವೆ ಸಂಚಾರಕ್ಕೆ ಮುಕ್ತವಾದರೆ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಇರುವುದಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಭಾರಿ ಜನಸ್ತೋಮ
ನಾಲಗೆ ಕಾರು ಹುರುಳಿ ಬಿದ್ದ ಸ್ಥಳದಲ್ಲಿ ಬಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ನಡೆಸುತ್ತಿದ್ದ ಕಾರ್ಯಾಚರಣೆಯನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರು. ಈ ವೇಳೆ ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.












Click it and Unblock the Notifications