Clash in Padayatre: 'ಗೌಡರ ಗೌಡ ಪ್ರೀತಂ ಗೌಡ...': ಬಿಜೆಪಿ ಜೆಡಿಎಸ್ ಪಾದಯಾತ್ರೆ ವೇಳೆ ಘರ್ಷಣೆ!
ಮಂಡ್ಯ ಆಗಸ್ಟ್ 7: ಸಿಎಂ ಸಿದ್ದರಾಮಯ್ಯ ಅವರನ್ನು ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಹಾಗೂ ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆ ವೇಳೆ ಘರ್ಷಣೆ ನಡೆದಿದೆ. ಯಾತ್ರೆ ಮಂಡ್ಯಗೆ ತಲುಪುತ್ತಿದ್ದಂತೆ ಪ್ರೀತಂ ಗೌಡ ಹಾಗೂ ಜೆಡಿಎಸ್ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಘರ್ಷಣೆ ತಾರಕ್ಕಕ್ಕೇರಿ ಗಲಾಟೆ ನಡೆದಿದ್ದು ಪರಿಸ್ಥಿತಿ ಶಾಂತಗೊಳಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಜೆಡಿಎಸ್ ಕಾರ್ಯಕರ್ತನಿಗೆ ಪ್ರೀತಂ ಗೌಡ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಜೆಡಿಎಸ್ ಕಾರ್ಯಕರ್ತರು ದೇವೇಗೌಡರ ಪರ ಘೋಷಣೆಯನ್ನು ಕೂಗಿದ್ದಾರೆ. ಪಾದಯಾತ್ರೆಯಲ್ಲಿ ಪ್ರೀತಂಗೌಡ ಅವರಿಗೆ ಠಕ್ಕರ್ ಕೊಡಲು ಜೆಡಿಎಸ್ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಗೌಡರ ಗೌಡ ಪ್ರೀತಂ ಗೌಡ ಎಂದು ಘೋಷಣೆಗಳನ್ನು ಕೂಗುತ್ತಾ ಪಾದಯಾತ್ರೆಯಲ್ಲಿ ವಾಗ್ವಾದಕ್ಕಿಳಿದಿರುವ ದೃಶ್ಯ ಕಂಡು ಬಂದಿದೆ. ಈ ವೇಳೆ ಪರಸ್ಪರ ತಳ್ಳಾಟ ನೂಕಾಟ ನಡೆದಿದೆ. ಮಾಜಿ ಪ್ರಧಾನಿ ದೇವೇಗೌಡರ ಪರ ಘೋಷಣೆ ಕೂಗಿ ಜೆಡಿಎಸ್ ಕಾರ್ಯಕರ್ತರು ಗಲಾಟೆ ಮಾಡಿರುವ ದೃಶ್ಯ ಕಂಡು ಬಂದಿದೆ.

ಮೊದಲ ದಿನದ ಪಾದಯಾತ್ರೆಯಲ್ಲಿ ಮಧ್ಯಾಹ್ನದ ಬಳಿಕ ಪಾದಯಾತ್ರೆಯ ಮುಂಚೂಣಿಯಲ್ಲಿ ಪ್ರೀತಂ ಗೌಡ ಕಾಣಿಸಿಕೊಂಡಿದ್ದರು. ಆದರೆ, ಎರಡನೇ ದಿನದ ಪಾದಯಾತ್ರೆಯಲ್ಲಿ ಎಲ್ಲೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಕಾಣಿಸಿಕೊಂಡಿಲ್ಲ. ಎರಡನೇ ದಿನ ಪಾದಯಾತ್ರೆಯಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಪಾದಯಾತ್ರೆಯಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಪಾದಯಾತ್ರೆ ಕಡೆ ಪ್ರೀತಂ ಗೌಡ ಸುಳಿದಿಲ್ಲ.
ಸೋಮವಾರ ಬೆಳಿಗ್ಗೆ ಕುಮಾರಸ್ವಾಮಿ ಹಾಜರಿದ್ದ ವೇಳೆ ಗೈರಾಗಿ ಮಧ್ಯಾಹ್ನದ ಬಳಿಕ ಪಾದಯಾತ್ರೆ ಯಲ್ಲಿ ಕಾಣಿಸಿಕೊಂಡಿದ್ದ ಪ್ರೀತಂ ಗೌಡ, ಭಾನುವಾರವಂತೂ ಬೆಳಗ್ಗೆ ಮತ್ತು ಮಧ್ಯಾಹ್ನದ ಬಳಿಕವೂ ಪಾದಯಾತ್ರೆಯಲ್ಲಿ ಕುಮಾರಸ್ವಾಮಿ ಭಾಗಿಯಾದ ಹಿನ್ನೆಲೆಯಲ್ಲಿ ಪಾದಯಾತ್ರೆಯಲ್ಲಿ ಎಲ್ಲೂ ಪ್ರೀತಂ ಗೌಡ ಮುಂಚೂಣಿಯಲ್ಲಿ ಕಾಣಿಸಿಕೊಂಡಿರಲಿಲ್ಲ.
ಪಾದಯಾತ್ರೆ ಉಸ್ತುವಾರಿ ವಿಚಾರವಾಗಿ ಪ್ರೀತಂ ಗೌಡ ವಿರುದ್ಧ ಎಚ್ ಡಿ ಕುಮಾರಸ್ವಾಮಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ಕುಮಾರಸ್ವಾಮಿ ತವರು ಜಿಲ್ಲೆಯಲ್ಲಿ ಪಾದಯಾತ್ರೆಯಿಂದ ಅಂತರವನ್ನು ಪ್ರೀತಮ್ ಗೌಡ ಕಾಯ್ದುಕೊಂಡಿದ್ದರು.

ಸೋಮವಾರವೂ ಪ್ರೀತಂ ಗೌಡ ಪಾದಯಾತ್ರೆಯಲ್ಲಿ ಕಾಣಿಸಿಕೊಂಡಿಲ್ಲ. ಪ್ರೀತಂ ಗೌಡ ಪಾದಯಾತ್ರೆಯಲ್ಲಿ ಕಾಣಿಸಿಕೊಳ್ಳದೆ ಇರುವುದಕ್ಕೆ ಎಚ್ ಡಿ ಕೆ ಹೇಳಿಕೆಯೇ ಕಾರಣ ಎಂಬುದು ಸ್ಪಷ್ಟವಾಗಿತ್ತು.
ಇನ್ನೂ ಹಾಸನ ಪೆನ್ ಡ್ರೈವ್ ಕೇಸ್ ನಲ್ಲಿ ಪ್ರೀತಂ ಗೌಡ ಪಾತ್ರದ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಆರೋಪ ಮಾಡಿದ್ದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಪ್ರೀತಂ ಗೌಡ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಯಾವಾಗ ಎಚ್ ಡಿ ಕೆ ವಿರೋಧ ವ್ಯಕ್ತವಾಯಿತೋ ಅಲ್ಲಿಂದ ಅವರು ಪಾದಯಾತ್ರೆಯಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡಿಲ್ಲ.
ಇಂದು ಪಾದಯಾತ್ರೆಯಲ್ಲಿ ಪ್ರೀತಂ ಗೌಡ ಭಾಗಿಯಾಗಿದ್ದರು. ಆದರೆ ಜೆಡಿಎಸ್ ಕಾರ್ಯಕರ್ತನ ಮೇಲೆ ಕೈ ಮಾಡಿದ್ದಾರೆ ಎಂದು ಆರೋಪಿಸಿ ಘರ್ಷಣೆ ನಡೆದಿದೆ.












Click it and Unblock the Notifications