Mandya Sugar Factory: ಹೊಸ ಕಾರ್ಖಾನೆ ನಿರ್ಮಾಣದ ಬಗ್ಗೆ ಶಾಸಕ ರವಿಕುಮಾರ್ ಮಹತ್ವದ ಹೇಳಿಕೆ
ಮಂಡ್ಯ: ಮೈಷುಗರ್ ಕಾರ್ಖಾನೆಗೆ ಸೇರಿದ ಸಾತನೂರು ಫಾರಂನಲ್ಲೇ ಆಧುನಿಕ ತಂತ್ರಜ್ಞಾನದ ಹೊಸ ಕಾರ್ಖಾನೆಯನ್ನು ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.
ತಾಲೂಕಿನ ಬೂದನೂರು ಗ್ರಾಮದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಈಗ ಕಾರ್ಖಾನೆ ಇರುವ ಜಾಗದಲ್ಲಿ ಸಾಫ್ಟ್‌ವೇರ್ ಪಾರ್ಕ್ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.

ಸಾತನೂರು ಫಾರಂನಲ್ಲಿ ಹೊಸ ಕಾರ್ಖಾನೆ ನಿರ್ಮಾಣಕ್ಕೆ ರೈತ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಕೇಳಿದಾಗ, ಎಲ್ಲದಕ್ಕೂ ವಿರೋಧ ಮಾಡುವುದು ಸರಿಯಲ್ಲ. ಸಾಫ್ಟ್‌ವೇರ್ ಪಾರ್ಕ್‌ನ್ನು ಸಾತನೂರಿನಲ್ಲಿ ಮಾಡಲು ಸಾಧ್ಯವೇ. ಅಲ್ಲಿ ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣವಾದರೆ ರೈತರು ಕಬ್ಬು ತರುವುದಕ್ಕೆ ಉತ್ತಮವಾದ ಜಾಗವಾಗಿದೆ. ನಗರದಿಂದ ಕೇವಲ 2-3 ಕಿ.ಮೀ. ದೂರದಲ್ಲಿದ್ದು, ರಸ್ತೆ ಸಂಪರ್ಕವೂ ಉತ್ತಮವಾಗಿರುವುದರಿಂದ ಕಬ್ಬು ಸಾಗಣೆಗೆ ಪೂರಕವಾಗಿದೆ ಎಂದು ಹೇಳಿದರು.
ಸಾಫ್ಟ್‌ವೇರ್ ಪಾರ್ಕ್ ನಿರ್ಮಾಣ
ನಗರ ವ್ಯಾಪ್ತಿಯಲ್ಲಿ ಸಾಫ್ಟ್‌ವೇರ್ ಪಾರ್ಕ್ ನಿರ್ಮಾಣವಾದರೆ ಸ್ಥಳೀಯವಾಗಿ ಯುವಕರಿಗೆ ಉದ್ಯೋಗವಕಾಶಗಳು ದೊರಕಲಿವೆ. ಇದರಿಂದ ಕೆಲಸ ಹುಡುಕಿಕೊಂಡು ವಲಸೆ ಹೋಗುವುದು ತಪ್ಪುತ್ತದೆ. ಈ ವಿಷಯವಾಗಿ ರೈತಮುಖಂಡರೊಂದಿಗೆ ಸಮಾಲೋಚನೆ ನಡೆಸುತ್ತೇನೆ. ಸಾಧಕ-ಬಾಧಕಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ವಿರೋಧಕ್ಕೆ ಅವಕಾಶವಿಲ್ಲದಂತೆ ಹೊಸ ಕಾರ್ಖಾನೆ ನಿರ್ಮಿಸುವುದಾಗಿ ಹೇಳಿದರು.
ಕಾರ್ಖಾನೆ ಆಸ್ತಿಯನ್ನು ಮಾರಾಟ ಮಾಡಿ ಹೊಸ ಕಾರ್ಖಾನೆ ನಿರ್ಮಿಸಲಾಗುವುದೇ ಎಂದಾಗ, ಯಾರು ಹಾಗೆ ಹೇಳಿದವರು, ಸರ್ಕಾರದಲ್ಲಿ ಈ ವಿಷಯವಾಗಿ ಗೆಜೆಟ್ ನೋಟಿಫಿಕೇಷನ್ ಆಗಿದೆಯಾ, ಯಾರಾದರೂ ಈ ಸಂಬಂಧ ಚರ್ಚೆ ನಡೆಸಿದ್ದಾರಾ, ಸುಮ್ಮನೆ ಊಹೆ ಮಾಡಿಕೊಳ್ಳುವುದಕ್ಕೆಲ್ಲಾ ಉತ್ತರ ಕೊಡಲಾಗುವುದಿಲ್ಲ. ಸರ್ಕಾರ 500 ಕೋಟಿ ರು. ವೆಚ್ಚದಲ್ಲಿ ಕಾರ್ಖಾನೆಯನ್ನು ನಿರ್ಮಿಸಲಿದೆ ಎಂದರು.
ಜಾತಿ ಗಣತಿ ವರದಿ ವಿಚಾರವಾಗಿ ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ನೋಡಿಕೊಳ್ಳುವಂತೆ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಶಾಸಕರೆಲ್ಲರೂ ಸಭೆ ನಡೆಸಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆಯೇ ವಿನಃ ಯಾರೂ ವಿರೋಧ ಮಾಡಿಲ್ಲ. ಆಯೋಗ ಮೊದಲು ಸರ್ಕಾರಕ್ಕೆ ವರದಿ ಕೊಡಲಿ. ಮುಖ್ಯಮಂತ್ರಿಗಳು ನಾವು ಅದನ್ನು ಜಾರಿಗೆ ತರಬೇಕು ಅಂತೇನಿಲ್ಲ ಎಂದಿದ್ದಾರೆ. ಸಿಎಂ ಮತ್ತು ಸರ್ಕಾರದ ಮೇಲೆ ನಮಗೆ ನಂಬಿಕೆ ಇದೆ. ಅವರು ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ ಎಂದು ಹೇಳಿದರು.
2022ರಲ್ಲಿ ಪ್ರತಿಭಟನೆ ನಡೆಸುವ ವೇಳೆ ಪಾಕ್ ಪರ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರ ವಿರುದ್ಧವೂ ತನಿಖೆಗೆ ಸರ್ಕಾರವನ್ನು ಒತ್ತಾಯಿಸುತ್ತೇನೆ. ಶತ್ರುರಾಷ್ಟ್ರದ ವಿರುದ್ಧ ಯಾರೇ ಘೋಷಣೆ ಕೂಗಿದರೂ ನಾವು ಅದನ್ನು ಸಹಿಸುವುದಿಲ್ಲ ಎಂದು ಹೇಳಿದರು.












Click it and Unblock the Notifications