Cauvery dispute: ಸೆಪ್ಟೆಂಬರ್ 6ರಂದು ಕಾನೂನು ತಂಡ ಸುಪ್ರೀಂಗೆ ಮನವರಿಕೆ ಮಾಡಲಿದೆ, ಮತ್ತೆ ನೀರು ಬಿಡಲಾಗದು: ಚಲುವರಾಯಸ್ವಾಮಿ
ಮಂಡ್ಯ, ಸೆಪ್ಟೆಂಬರ್, 05: ಕಾವೇರಿ ವಿಚಾರವಾಗಿ ಸುಪ್ರೀಂಕೋರ್ಟ್‌ಗೆ ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆಯು ಸೆಪ್ಟೆಂಬರ್ 6ರಂದು ನಡೆಯಲಿದೆ. ನಮ್ಮ ವಕೀಲರ ತಂಡವು ರಾಜ್ಯದ ವಸ್ತುಸ್ಥಿತಿಯೊಂದಿಗೆ ತಾಂತ್ರಿಕ ಮಾಹಿತಿಗಳನ್ನು ಕೋರ್ಟ್‌ಗೆ ನೀಡಿದೆ. ಜೊತೆಗೆ, ಯಾವುದೇ ಕಾರಣಕ್ಕೂ ಮತ್ತೆ ನೀರು ಬಿಡಲಾಗದು ಎಂದು ಸ್ಪಷ್ಟವಾಗಿ ಹೇಳಲಾಗಿದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಮಂಡ್ಯದಲ್ಲಿ ತಿಳಿಸಿದರು.
ಇದರಿಂದ ನಮ್ಮ ಪರವಾಗಿ ಕೋರ್ಟ್ ಆದೇಶ ನೀಡಿದರೆ ಸಂತೋಷ. ಇಲ್ಲದಿದ್ದರೆ ರಾಜ್ಯ ಸರಕಾರ ಕಠಿಣ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ಇನ್ನು ಕಾನೂನು ಮತ್ತು ನೀರಾವರಿ ತಜ್ಞರನ್ನು ನಮ್ಮ ಸರ್ಕಾರ ಬಂದ ನಂತರ ನೇಮಿಸಿಕೊಂಡಿಲ್ಲ. 20-30 ವರ್ಷಗಳಿಂದ ಇರುವ ತಂಡವೇ ಈಗಲೂ ಇದೆ. ಅವರ ಮೂಲಕ ನಮ್ಮ ವಾದವನ್ನು ಸಮರ್ಥವಾಗಿ ಮಾಡಿಸಿದ್ದೇವೆ. ನಾವು ರಾಜ್ಯದ ಜನರ ಪರವಾಗಿರುತ್ತೇವೆ ಎಂದರು.

ತಿಂಗಳ ಹಿಂದೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ 25,000ಕ್ಯೂಸೆಕ್ ನೀರು ಬಿಡಲು ಸೂಚಿಸಿತ್ತು. ನಾವು ಒಪ್ಪದಿದ್ದಾಗ 15,000ಕ್ಯೂಸೆಕ್ ಬಿಡಿ ಎಂದಿತ್ತು. ಅದನ್ನು ಒಪ್ಪದೆ ತಮಿಳುನಾಡು ಸಭಾತ್ಯಾಗ ಮಾಡಿದೆ. ಆಗ ನಾವು ಮತ್ತೆ ನಮ್ಮ ವಾದ ಮುಂದುವರೆಸಿದಾಗ 10,000ಕ್ಯೂಸೆಕ್ ನೀರು ಬಿಡುವಂತೆ ಪ್ರಾಧಿಕಾರದ ಸೂಚಿಸಿತು. ಅದರಂತೆಯೇ ಮೊದಲು ನೀರು ಬಿಡಲಾಗಿದೆ. ಎರಡನೇ ಆದೇಶದ ಪ್ರಕಾರ ನಿತ್ಯ 5,000ಕ್ಯೂಸೆಕ್ ನೀರು ಬಿಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಸಂಕಷ್ಟ ಸೂತ್ರ ರಚನೆಗೆ ಕೇಂದ್ರ ಮತ್ತು ಪ್ರಾಧಿಕಾರದ ಮೇಲೆ ಹಿಂದಿನ ಬಿಜೆಪಿ ಸರ್ಕಾರ ಏಕೆ ಒತ್ತಡ ಹೇರಲಿಲ್ಲ. ಈಗ ನಮ್ಮ ಸರ್ಕಾರ ಬಂದ ನಂತರ ಸಂಕಷ್ಟ ಸೂತ್ರ ರಚಿಸುವಂತೆ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ. ಸರ್ವಪಕ್ಷಗಳ ನಿಯೋಗದೊಂದಿಗೆ ಪ್ರಧಾನಿ ಭೇಟಿಗೆ ಸಮಯ ಕೇಳಲಾಗಿದೆ. ಅದಕ್ಕೂ ಇನ್ನು ಪ್ರತಿಕ್ರಿಯೆ ಬಂದಿಲ್ಲ. ಕರ್ನಾಟಕದ ಸಂಸದರಿಗೂ ರಾಜ್ಯದ ಬಗ್ಗೆ ಬದ್ಧತೆ, ಜವಾಬ್ದಾರಿ ಇರಬೇಕಲ್ಲ. ಆ ಜವಾಬ್ದಾರಿಯನ್ನು ಏಕೆ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಬರ ಪರಿಸ್ಥಿತಿ ಇರುವ 196 ತಾಲೂಕುಗಳ ಪಟ್ಟಿಯನ್ನು ಅಧಿಕಾರಿಗಳ ಮೂಲಕ ಸಿದ್ಧಪಡಿಸಲಾಗಿದೆ. ಈ ಬಗ್ಗೆ ಸೆಪ್ಟೆಂಬರ್ 7ರಂದು ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೊದಲ ಹಂತದಲ್ಲಿ 113 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಲಾಗಿತ್ತು. ಕೇಂದ್ರದ ಮಾರ್ಗಸೂಚಿಗಳ ಪ್ರಕಾರ 62 ತಾಲೂಕುಗಳು ಮಾತ್ರ ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿವೆ. ಉಳಿದ 51 ತಾಲೂಕುಗಳು ಕೇಂದ್ರದ ಮಾರ್ಗಸೂಚಿಗಳಿಗೆ ಒಳಪಟ್ಟಿಲ್ಲ. ಹೀಗಾಗಿ ಮೊದಲ ಹಂತದ ಬರಪೀಡಿತ ಪ್ರದೇಶಗಳ ಪಟ್ಟಿಯನ್ನು ಇನ್ನೂ ಪ್ರಕಟಿಸಿಲ್ಲ ಎಂದು ಅವರು ಹೇಳಿದರು.
ಬಾಕಿ ಉಳಿದಿರುವ 51 ತಾಲೂಕುಗಳ ಪಟ್ಟಿಗೆ ಹೊಸದಾಗಿ 83 ತಾಲೂಕುಗಳನ್ನು ಸೇರಿಸಿ 134 ತಾಲೂಕುಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈಗಾಗಲೇ ಕೇಂದ್ರದ ಮಾರ್ಗಸೂಚಿಗಳ ಪ್ರಕಾರ ಬರಪೀಡಿತ ಪ್ರದೇಶವೆಂದು ಘೋಷಣೆಗೆ ಸಿದ್ದವಾಗಿರುವ 62 ತಾಲೂಕುಗಳನ್ನು ಒಳಗೊಂಡಂತೆ 196 ತಾಲೂಕುಗಳು ನಮ್ಮ ಪ್ರಕಾರ ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿವೆ ಎಂದರು.
ಜೂನ್‌ನಲ್ಲಿ ಮಳೆ ಕೊರತೆಯಾಗಿದ್ದರೂ ಜುಲೈನಲ್ಲಿ ಉತ್ತಮವಾಗಿ ಮಳೆ ಸುರಿದಿತ್ತು. ಆದರೆ, ಮತ್ತೆ ಆಗಸ್ಟ್‌ನಲ್ಲಿ ವಾಡಿಕೆಗಿಂತಲೂ ಶೇಕಡಾ 60-70ರಷ್ಟು ಮಳೆ ಕಡಿಮೆಯಾಗಿದೆ. ಒಟ್ಟಾರೆ ಜೂನ್‌ನಿಂದ ಆಗಸ್ಟ್‌ವರೆಗೆ ಸರಾಸರಿ ಶೇಕಡಾ 35ರಷ್ಟು ಮಳೆ ಕೊರತೆಯಿದೆ. ಕೆಲ ದಿನಗಳು ಸುರಿದ ಜೋರು ಮಳೆಯನ್ನೇ ಕೃಷಿಗೆ ಪರಿಗಣಿಸಲಾಗದು. ತಿಂಗಳಿಡೀ ನಿಯಮಿತವಾಗಿ ಮಳೆ ಬಿದ್ದಾಗಷ್ಟೇ ಕೃಷಿಗೆ ಅನುಕೂಲವಾಗುತ್ತದೆ. ಹೀಗಾಗಿ ಬರ ಸಂಬಂಧ ಕೇಂದ್ರದ ನಿಯಮಾವಳಿಗಳನ್ನು ಸಡಿಲಗೊಳಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಆದರೆ, ಈವರೆಗೆ ಕೇಂದ್ರದಿಅದ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದರು.
ಇದರೊಂದಿಗೆ 196 ತಾಲೂಕುಗಳಲ್ಲಿನ ಬರಪರಿಸ್ಥಿತಿ ಬಗ್ಗೆ ಕೃಷಿ ಮತ್ತು ಕಂದಾಯ ಇಲಾಖೆಗಳ ಮೂಲಕ ವಸ್ತುಸ್ಥಿತಿ ಅಧ್ಯಯನದೊಂದಿಗೆ ಜಂಟಿ ಸಮೀಕ್ಷೆ ನಡೆಸಿ ನಾಲ್ಕೈದು ದಿನಗಳಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಬರ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರದ ತಂಡ ಬರುವುದೋ? ಇಲ್ಲವೋ? ಗೊತ್ತಿಲ್ಲ. ಆದರೆ, ರಾಜ್ಯ ಸರ್ಕಾರ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ರಚನೆಗೆ ಶಿಫಾರಸ್ಸು ಮಾಡಿದೆ ಎಂದರು.
ಈ ಟಾಸ್ಕ್‌ಫೋರ್ಸ್‌ಗಳು ಕುಡಿಯುವ ನೀರಿನ ಸಮಸ್ಯೆ, ಬೋರ್‌ವೆಲ್‌ಗಳ ಸಮಸ್ಯೆ, ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಕೆ, ಖಾಸಗಿ ಬೋರ್‌ವೆಲ್/ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆಯುವುದು ಹೀಗೆ ನಾನಾ ವಿಷಯಗಳ ಬಗ್ಗೆ ಸ್ಥಳೀಯವಾಗಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಪಿ.ರವಿಕುಮಾರ್, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ನಿರ್ದೇಶಕ ಅಶೋಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಸೇರಿದಂತೆ ಮತ್ತಿತರರು ಹಾಜರಿದ್ದರು.












Click it and Unblock the Notifications