Mysuru Dasara 2023: ಮಹಿಷ ದಸರಾ ಆಚರಣೆ ಬಗ್ಗೆ ರಾಜವಂಶಸ್ಥ ಯದುವೀರ್ ಹೇಳಿದ್ದೇನು?
ಮಂಡ್ಯ, ಸೆಪ್ಟೆಂಬರ್, 11: ಪ್ರತಿ ವರ್ಷದಂತೆ ಮೈಸೂರು ದಸರಾ ವಿಧಿವಿಧಾನಗಳ ಪ್ರಕಾರದ ಆಚರಣೆ ಇರಲಿದ್ದು, ಇದರಲ್ಲಿ ಯಾವುದೇ ಬದಲಾವಾಣೆ ಆಗುವುದಿಲ್ಲ. ಮಹಿಷಾ ದಸರಾ ಆಚರಣೆ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಸಂವಿಧಾನದ ಪ್ರಕಾರ ಯಾರು ಏನು ಬೇಕಾದರೂ ಅನುಸರಿಸಬಹುದು ಎಂದು ಮೈಸೂರು ಸಂಸ್ಥಾನದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಂಡ್ಯದಲ್ಲಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ದಸರಾ ವಿಜೃಂಭಣೆಯಿಂದ ಆಚರಿಸಲಾಗುವುದು. ರೈತರ ಕಷ್ಟದಲ್ಲಿ ನಾವು ಜೊತೆ ಇದ್ದೇವೆ, ಇದು ನಮ್ಮ ಕರ್ತವ್ಯವಾಗಿದೆ. ವಿಜೃಂಭಣೆಯಿಂದ ದಸರಾ ನಡೆಯುವುದೇ ಆಚರಣೆ. ಸರ್ಕಾರ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಮಹಿಷಾ ದಸರಾ ಆಚರಣೆ ವಿಚಾರವಾಗಿ ನನ್ನ ಅಭಿಪ್ರಾಯ ಏನೂ ಇಲ್ಲ. ಆದರೆ, ಸಂವಿಧಾನದ ಪ್ರಕಾರ ಯಾರು ಏನು ಬೇಕಾದರೂ ಅನುಸರಿಸಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಧರ್ಮದ ಬಗ್ಗೆ ತಪ್ಪು ಸಂದೇಶಗಳಲ್ಲಿ ಮಾತನಾಡುವುದು ಸರಿಯಲ್ಲ. ಎಲ್ಲಾ ಧರ್ಮಕ್ಕೂ ಒಂದು ರೀತಿಯ ಗೌರವವಿದೆ. ನಮ್ಮ ದೇಶದಲ್ಲಿ ಸನಾತನ ಧರ್ಮ ಎಲ್ಲದಕ್ಕೂ ಮೂಲ. ನಾವು ಉದಯನಿಧಿ ಅವರ ಹೇಳಿಕೆ ಒಪ್ಪುವುದಿಲ್ಲ. ಯಾರೇ ಆಗಲಿ ಮೊದಲು ಧರ್ಮಕ್ಕೆ ಗೌರವ ಕೊಡಬೇಕು ಎಂದು ಸಲಹೆ ನೀಡಿದರು.
ಕೆಆರ್‌ಎಸ್ ಅಣೆಕಟ್ಟೆ ವಿಚಾರದಲ್ಲಿ ಇತಿಹಾಸ ನೋಡಿ ಸುಪ್ರೀಂ ಕೋರ್ಟ್ ಏನು ನಿರ್ಧಾರ ತೆಗೆದುಕೊಂಡಿದೆ ಎಂಬುದನ್ನು ನೋಡಬೇಕು. ಅದರ ಜೊತೆಗೆ ಸಮಸ್ಯೆ ಬಗೆಹರಿಸುವ ಬಗ್ಗೆ ರಾಜ್ಯ ಸರ್ಕಾರ ತಿರ್ಮಾನ ಮಾಡಬೇಕು. ಸಂಪೂರ್ಣವಾಗಿ ರಾಜ್ಯ ಹಾಗೂ ರೈತರ ಜೊತೆ ನಮ್ಮ ಬೆಂಬಲವಿದೆ. ಅಧಿಕಾರದಲ್ಲಿರುವವರನ್ನು ಪ್ರಶ್ನೆ ಮಾಡಿ, ನಾವು ರಾಜ್ಯದ ಜೊತೆ ಇರುತ್ತೇವೆ ಎಂದು ಭರವಸೆ ನೀಡಿದರು.
ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ, ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಜೆಡಿಎಸ್ ಬಿಜೆಪಿ ಹೊಂದಾಣಿಕೆಯ ರಾಜಕೀಯದಲ್ಲಿ ನಮ್ಮ ಪಾತ್ರ ಏನೂ ಇಲ್ಲ. ನಾವು ಸಮಾಜದ ಕಾರ್ಯಕ್ರಮದಲ್ಲಿ ಸದಾ ಭಾಗವಹಿಸುತ್ತೇವೆ. ಅದರ ಜೊತೆಗೆ ಸಮಾಜದ ಹಿತರಕ್ಷಣೆಗಾಗಿ ರಾಜಕೀಯದ ಮೂಲಕ ಮಾಡುವ ಅವಶ್ಯಕತೆ ಇಲ್ಲ. ಬೇರೆ ರೀತಿಯಲ್ಲೂ ಮಾಡಬಹುದು. ಅದನ್ನು ಮಾಡಲು ನಾವು ಪ್ರಯತ್ನ ಮಾಡುತ್ತೇನೆ ಎಂದರು.












Click it and Unblock the Notifications