ಮೂಡಾ ಹಗರಣ: ಪ್ರಕರಣ ರದ್ದು ಕೋರಿದ್ದ ಪುಟ್ಟರಾಜು ಅರ್ಜಿ ವಜಾ
ಬೆಂಗಳೂರು ಫೆ.1: ದಶಕದ ಹಿಂದಿನ ಮೂಡಾ ಹಗರಣ ಇನ್ನೂ ಶಾಸಕ ಸಿ.ಎಸ್.ಪುಟ್ಟರಾಜು ಅವರನ್ನು ಕಾಡುತ್ತಿದೆ. ಒಮ್ಮೆ ಶಾಸಕರ ಅವಧಿ ಪೂರ್ಣಗೊಳಿಸಿ ನಂತರ ಸಂಸದರಾಗಿ ಇದೀಗ ಮತ್ತೆ ಶಾಸಕರಾಗಿದ್ದರೂ ಸಹ 2011ರಲ್ಲಿ ನಡೆದ ಅಕ್ರಮ ನಿವೇಶನ ಪಡೆದಿದ್ದಾರೆ ಎಂಬ ಆರೋಪದಿಂದ ಹೊರಬರಲು ಸಾಧ್ಯವಾಗಿಲ್ಲ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣ ರದ್ದು ಕೋರಿ ಸಿ.ಎಸ್. ಪುಟ್ಟ ರಾಜು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಹಾಗಾಗಿ ಅವರಿಗೆ ಕಾನೂನು ಹೋರಾಟದಲ್ಲಿ ಹಿನ್ನೆಡೆಯಾಗಿದ್ದು, ವಿಚಾರಣೆಯನ್ನು ಎದುರಿಸಲೇಬೇಕಿದೆ.
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿಯಮಬಾಹಿರವಾಗಿ ನಿವೇಶನ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ದೂರನ್ನು ವಿಚಾರಣೆಗೆ ಪರಿಗಣಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ರದ್ದು ಕೋರಿ ಶಾಸಕ ಸಿ.ಎಸ್.ಪುಟ್ಟರಾಜು ಸಲ್ಲಿಸಿದ್ದ ಅರ್ಜಿ ಆಲಿಸಿದ ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

ಸಿಬಿಐ ಪರ ವಕೀಲರು ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ಪ್ರಕಾರ ಸಾರ್ಜಜನಿಕ ಸೇವೆಯ ಚುನಾಯಿತ ಜನಪ್ರತಿನಿಧಿಗೆ ಆತನ ಸದಸ್ಯತ್ವ ಅವಧಿ ಮುಗಿದ ನಂತರ ತನಿಖೆಗೆ ಪೂರ್ವಾನುಮತಿ ಬೇಕಿಲ್ಲ. ತಿದ್ದುಪಡಿಯಲ್ಲಿ ಪೂರ್ವಾನುಮತಿ ಅವಶ್ಯಕತೆ ಇದೆ. ಆದರೆ, ಇದು 2018ಕ್ಕೂ ಹಿಂದೆ ನಡೆದ ಅಪರಾಧಕ್ಕೆ ಅನ್ವಯವಾಗುವುದಿಲ್ಲ ಎಂದು ವಾದಿಸಿದ್ದರು.
ಆ ವಾದವನ್ನು ನ್ಯಾಯಾಲಯ ಪುರಸ್ಕರಿಸಿ ಅರ್ಜಿ ವಜಾಗೊಳಿಸಿದೆ, ಇದರಿಂದಾಗಿ ವಿಶೇಷ ಕೋರ್ಟ್ ವಿಚಾರಣೆ ಮುಂದುವರಿಸಲು ಅವಕಾಶ ದೊರೆತಿದೆ.
ಪ್ರಕರಣದ ಹಿನ್ನೆಲೆ
ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಹಾಗೂ ಕೆಪಿಸಿಸಿ ಸದಸ್ಯ ಟಿ.ಎಸ್.ಸತ್ಯಾನಂದ 2011ರಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರವು ಸುಮಾರು 107 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಸರ್ಕಾರ ಆ ಬಗ್ಗೆ ಸಿಬಿಐ ತನಿಖೆಗೆ ವಹಿಸಿತ್ತು.
ಪುಟ್ಟರಾಜು ಪತ್ನಿ ಮೊದಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಪಡೆದಿದ್ದರೂ ಸಹ ಆ ಮಾಹಿತಿ ಮರೆಮಾಚಿ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಿಂದಲೂ ನಿವೇಶನ ಪಡೆದಿದ್ದಾರೆ' ಎಂದು ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿತ್ತು.












Click it and Unblock the Notifications