MP Sumalatha Nomination: ಕೆಲವೇ ಹೊತ್ತಿನಲ್ಲಿ ಮಂಡ್ಯದಲ್ಲಿ ಸುಮಲತಾ ನಾಮಪತ್ರ ಸಲ್ಲಿಕೆ?
ಮಂಡ್ಯ: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೇ ದಿನವಾದ ಇಂದು ಸಾಕಷ್ಟು ಬೆಳವಣಿಗೆ ನಡೆಯುತ್ತಿವೆ. ಸಂಸದೆ ಸುಮಲತಾ ಮಂಡ್ಯದಿಂದ ವಿಧಾನಸಭೆ ಅಖಾಡಕ್ಕೆ ಎಂಟ್ರಿ ಕೊಡಲಿದ್ದಾರೆಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ಇತ್ತೀಚೆಗೆ ಬಿಜೆಪಿಗೆ ಅಧಿಕೃತವಾಗಿ ಬೆಂಬಲ ಘೋಷಿಸಿದ್ದ ಸುಮಲತಾ ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಡಲಿದ್ದಾರಂತೆ.
2019ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಿಜೆಪಿಯ ಪರೋಕ್ಷ ಬೆಂಬಲ ಕೂಡ ಅವರಿಗೆ ವರವಾಗಿತ್ತು. ಇನ್ನು ಕೆಲ ತಿಂಗಳ ಹಿಂದೆ ಸುಮಲತಾ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಹಬ್ಬಿದಾಗ, ದಿಢೀರ್ ಮಂಡ್ಯದಲ್ಲೇ ಸುದ್ದಿಗೋಷ್ಠಿ ಕರೆದು ಬಿಜೆಪಿಗೆ ಬೆಂಬಲ ಘೋಷಿಸಿದ್ದರು. ಆದರೆ ಈಗ ಬರುತ್ತಿರುವ ಸುದ್ದಿ ನೋಡಿದರೆ ಮಂಡ್ಯದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಕದನ ಫಿಕ್ಸ್ ಎಂಬ ಮಾತು ಕೇಳಿಬರುತ್ತಿವೆ. ಆದರೆ ಅಧಿಕೃತವಾಗಿ ಸಂಸದೆ ಸುಮಲತಾ ಚುನಾವಣೆಗೆ ನಿಲ್ಲುವ ಬಗ್ಗೆ ಹೇಳಿಕೆ ನೀಡಿಲ್ಲ.

ಸುಮಲತಾ ಸ್ಪರ್ಧಿಸಿದರೆ ಜೆಡಿಎಸ್‌ಗೆ ಹಿನ್ನಡೆ?
ಜೆಡಿಎಸ್ ನಾಯಕರ ವಿರುದ್ಧ ಪದೇಪದೆ ವಾಗ್ದಾಳಿ ನಡೆಸುತ್ತಿರುವ ಸುಮಲತಾ ಅಂಬರೀಶ್ ಮಂಡ್ಯದಿಂದ ಸ್ಪರ್ಧೆ ಮಾಡಿದರೆ ಅದು ದಳಪತಿಗಳ ಕೋಟೆಗೆ ನೇರಪೆಟ್ಟು ನೀಡುವ ಸಾಧ್ಯತೆ ಹೆಚ್ಚು. ಹೀಗಾಗಿಯೇ ಕಮಲ ಪಡೆ ನಾಯಕರು ರಣತಂತ್ರ ರೂಪಿಸಿ ಸುಮಲತಾ ಸ್ಪರ್ಧೆಗೆ ಪ್ಲ್ಯಾನ್ ಹಾಕಿದ್ದಾರೆ ಎನ್ನಲಾಗಿದೆ. ಮತ್ತೊಂದು ಕಡೆ ಈಗಾಗಲೇ ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್‌ನಲ್ಲೇ ಭಾರಿ ಗೊಂದಲ ಏರ್ಪಟ್ಟಿದ್ದು, ಜೆಡಿಎಸ್ ಟಿಕೆಟ್ ಅನ್ನ ದಿಢೀರ್ ಬದಲಾವಣೆ ಮಾಡಲಾಗಿದೆ. ಶಾಸಕ ಎಂ.ಶ್ರೀನಿವಾಸ್‌ಗೆ ನೀಡಿದ್ದ ಟಿಕೆಟ್ ಹಿಂಪಡೆದು, ಮನ್ಮುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರುಗೆ ಟಿಕೆಟ್ ನೀಡಿದೆ ಜೆಡಿಎಸ್.
ಜೆಡಿಎಸ್ ಭಿನ್ನಮತದ ಲಾಭ ಸಿಗತ್ತಾ?
ತಮಗೆ ಜೆಡಿಎಸ್ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಶ್ರೀನಿವಾಸ್ ಜೆಡಿಎಸ್ ಸದಸ್ಯತ್ವ ತೊರೆದು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಜೆಡಿಎಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹೀಗೆ ಜೆಡಿಎಸ್ ಭಿನ್ನಮತದ ಲಾಭವನ್ನೂ ಪಡೆಯಲು ಕಮಲ ಪಾಳಯ ಮಾಸ್ಟರ್ ಪ್ಲ್ಯಾನ್ ರೂಪಿಸಿರಬಹುದು. ಸುಮಲತಾ ಸ್ಪರ್ಧೆಯಿಂದ ಮಾತ್ರ ಇದೆಲ್ಲಾ ಸಾಧ್ಯ. ಹೀಗಾಗಿ ಇನ್ನು ಕೆಲವೇ ಕ್ಷಣಗಳಲ್ಲಿ ಸುಮಲತಾ ಮಂಡ್ಯ ಕ್ಷೇತ್ರದಿಂದ ವಿಧಾನಸಭೆ ಚುನಾವಣೆ ಅಖಾಡಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ.

ಲೋಕಸಭೆ ಗೆಲುವು ಮರುಕಳಿಸುತ್ತಾ?
ಹೌದು, 2019ರಲ್ಲೂ ಹೀಗೆ ಸುಮಲತಾ ಅಂಬರೀಶ್ ದಿಢೀರ್ ರಾಜಕೀಯ ರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಸಂಸದ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸುಮಲತಾ ಅವರಿಗೆ ಬಿಜೆಪಿ ಪರೋಕ್ಷ ಬೆಂಬಲ ಸೂಚಿಸಿತ್ತು. ಅಲ್ಲದೆ ಆಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ವಿರುದ್ಧ ಬಿಜೆಪಿ ನಾಯಕರು ಭರ್ಜರಿ ಪ್ರಚಾರ ನಡೆಸಿದ್ದರು. ಇಷ್ಟೆಲ್ಲದರ ಪರಿಣಾಮ ಸುಮಲತಾ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ದಿಗ್ವಿಜಯ ಸಾಧಿಸಿದ್ದರು. ಇದೀಗ ವಿಧಾನಸಭೆ ಚುನಾವಣೆಗೂ ನಿಲ್ಲಲು ತಯಾರಿ ನಡೆಸಿದ್ದಾರೆ. ಹಾಗಾದರೆ ಲೋಕಸಭೆ ಗೆಲುವು ಮರುಕಳಿಸುತ್ತಾ? ಎಂಬ ಪ್ರಶ್ನೆ ಮೂಡಿದೆ.
ಒಟ್ನಲ್ಲಿ ಮಂಡ್ಯ ರಣಕಣ ರಂಗೇರಿದೆ. ಜೆಡಿಎಸ್ ಭದ್ರಕೋಟೆ ನಡುಗಿಸಲು ಬಿಜೆಪಿ ವರಿಷ್ಠರು ಭರ್ಜರಿ ರಣತಂತ್ರ ರೂಪಿಸಿರುವಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ಸುಮಲತಾ ಅವರ ಸ್ಪರ್ಧೆ ವಿಚಾರವನ್ನೂ ಗುಟ್ಟಾಗಿ ಸಿದ್ಧಪಡಿಸಿ, ನಾಮಪತ್ರ ಸಲ್ಲಿಯ ಕೊನೆಯ ದಿನ ಸುಮಲತಾ ಅಖಾಡ ಪ್ರವೇಶಕ್ಕೆ ಅವಕಾಶ ಮಾಡಿದ್ದಾರೆ ಎನ್ನಲಾಗಿದೆ. ಇನ್ನೇನು ಕೆಲವೇ ಕ್ಷಣದಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ. ಅಕಸ್ಮಾತ್ ಸುಮಲತಾ ಅಂಬರೀಶ್ ಅಖಾಡ ಪ್ರವೇಶ ಮಾಡಿದರೆ ಮಂಡ್ಯ ಕ್ಷೇತ್ರ ಮತ್ತೊಮ್ಮೆ ದೇಶದ ಗಮನ ಸೆಳೆಯುವುದು ಪಕ್ಕಾ.











Click it and Unblock the Notifications