ಕೊರೊನಾ ಸೋಂಕಿನಿಂದ ಕಂಟೈನ್ಮೆಂಟ್ ವ್ಯಾಪ್ತಿಗೆ ಮೇಲುಕೋಟೆ
ಮಂಡ್ಯ, ಮೇ 3: ಮುಂಬೈನಿಂದ ಶವ ತಂದು ಮಂಡ್ಯದಲ್ಲಿ ಕೊರೊನಾ ಸೋಂಕು ಹೆಚ್ಚಲು ಕಾರಣವಾದ ಮೇಲುಕೋಟೆ ಸೇರಿದಂತೆ 7 ಕಿಮೀ ವ್ಯಾಪ್ತಿಯನ್ನು ಬಫರ್ ಝೋನ್ ವ್ಯಾಪ್ತಿಗೆ ಒಳಪಡಿಸಲಾಗಿದ್ದು, ಶವ ಸಂಸ್ಕಾರ ಮಾಡಿರುವ ಬಿ.ಕೊಡಗಹಳ್ಳಿಯನ್ನು ಕಂಟೈನ್ಮೆಂಟ್ ಪ್ರದೇಶವೆಂದು ಘೋಷಿಸಲಾಗಿದೆ.
ಮುಂಬೈನಲ್ಲಿ ವಾಸವಿದ್ದ ಬಿ.ಕೊಡಗಹಳ್ಳಿ ಮೂಲದ ಬೋರೇಗೌಡರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಕುಟುಂಬದ 7 ಮಂದಿಯಲ್ಲಿ 4 ಮಂದಿಗೆ ಕೊರೊನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಕೊಡಗಹಳ್ಳಿಯನ್ನು ನಿರ್ಬಂಧಿತ ವಲಯವನ್ನಾಗಿ ಮಾಡಲಾಗಿದೆ.
ಇದೀಗ ದಿನದ 24 ಗಂಟೆಯೂ ಸಹ ಸರದಿ ಮೇಲೆ ಪೊಲೀಸ್ ನಿಯೋಜನೆ ಮಾಡಲಾಗಿದ್ದು, ಗ್ರಾಮದಲ್ಲಿ ಯಾರೂ ಅನಗತ್ಯವಾಗಿ ಓಡಾಡುವಂತಿಲ್ಲ. ಬೇರೆ ಗ್ರಾಮದವರ ಪ್ರವೇಶವನ್ನೂ ಕೂಡ ನಿರ್ಬಂಧಿಸಲಾಗಿದೆ. ಕೃಷಿ ಚಟುವಟಿಕೆಗೆ ಮಾತ್ರ ವಿನಾಯಿತಿ ನೀಡಲಾಗಿದೆ.

ಮನೆಗಳಿಗೆ ಬೇಕಾದ ಅಗತ್ಯವಸ್ತುಗಳನ್ನು ಜಿಲ್ಲಾಡಳಿತ ನಿಯೋಜಿಸಿರುವ ತಂಡವು ಮನೆಮನೆಗೆ ಕೊಂಡೊಯ್ದು ನೀಡಲಿದೆ. ಬಫರ್ ಝೋನ್ ವ್ಯಾಪ್ತಿಗೆ ಮೇಲುಕೋಟೆ ಮತ್ತು 7 ಕಿ.ಮೀ ಸುತ್ತಲಿನ ಹಳ್ಳಿಗಳು ಸೇರುವುದರಿಂದ ಅಲ್ಲಿನ ಜನರ ಚಲನವಲನದ ಮೇಲೆ ಪೊಲೀಸರು ಕಣ್ಗಾವಲು ವಹಿಸಲಿದ್ದಾರೆ.
ನಾಗರೀಕರು ನಿಗದಿತ ಸಮಯದಲ್ಲಿ ಆಹಾರ ಧಾನ್ಯ ಮತ್ತು ತರಕಾರಿಗಳನ್ನು ಖರೀದಿಸಬಹುದು. ಕೆರೆತೊಣ್ಣೂರಿನ ಮೊರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ನಲ್ಲಿರಿಸಲಾಗಿದ್ದ ಎಲ್ಲರನ್ನೂ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಶಾಲೆಗೆ ಬೀಗ ಹಾಕಲಾಗಿದೆ. ಅಂತ್ಯಕ್ರಿಯೆ ವೇಳೆ ಮೃತರ ಕುಟುಂಬದೊಂದಿಗೆ ಸಂಪರ್ಕ ಪಡೆದರೆನ್ನಲಾದ ರಾಜಘಟ್ಟದ ಕೆಲವರನ್ನು ಪತ್ತೆ ಮಾಡಿ ಕ್ವಾರಂಟೈನ್ ಗೆ ಸೂಚಿಸಲಾಗಿದೆ.

ಇನ್ನು ಶವ ಸಂಸ್ಕಾರದಲ್ಲಿ ಭಾಗಿಯಾಗಿದ್ದ ಮೇಲುಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ ಸೇರಿದಂತೆ 23 ಮಂದಿ ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಇವರು ಸಾರ್ವಜನಿಕರ ಸಂಪರ್ಕ ಮಾಡದಂತೆ ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗಿದೆ.











Click it and Unblock the Notifications