ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರ ಕಿವಿಮಾತಿಗೆ ಒಪ್ಪಿ ಒಂದಾದ ಮದ್ದೂರು ಜೋಡಿ
ಮಂಡ್ಯ, ನವೆಂಬರ್ 15 : ದಾಂಪತ್ಯ ಕಲಹದಿಂದ ವಿಚ್ಛೇಧನದ ದಾವೆ ಹೂಡಿದ್ದ ಯುವ ದಂಪತಿಗೆ ಮದ್ದೂರು ಪಟ್ಟಣದ ಜೆಎಂಎಸಿ ನ್ಯಾಯಾಲಯ ಹೊಸ ಬದುಕು ಕಟ್ಟಿಕೊಳ್ಳಲು ದಾರಿ ತೋರಿಸಿದೆ. ಇತ್ತೀಚಿಗೆ ನಡೆದ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರು ನೀಡಿದ ಹಿತವಚನಗಳಿಗೆ ತಲೆಬಾಗಿ ಮತ್ತೆ ಬಾಳ ಸಂಗಾತಿಗಳಾದ ಪ್ರಸಂಗ ನಡೆದಿದೆ.
ಮದ್ದೂರು ತಾಲೂಕು ಆತಗೂರು ಹೋಬಳಿಯ ನಿಲುಬಾಗಿಲು ಗ್ರಾಮದ ವೆಂಕಟೇಶ್ ದಂಪತಿ ಪ್ರೇಮ ವಿವಾಹವಾಗಿದ್ದರು. ನಂತರ ಕಳೆದ ಮೂರು ವರ್ಷದಳಿಂದ ದಾಂಪತ್ಯ ಕಲಹದಿಂದ ಬೇರೆ ಬೇರೆಯಾಗಿದ್ದರು. ಈ ಹಿನ್ನೆಲೆಯಲ್ಲಿ ದಂಪತಿ ವಿಚ್ಚೇದನ ಕೋರಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ನಡೆಸುತ್ತಿದ್ದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸರ್ಪರಾಜ್ ಹುಸೇನ್ ಕಿತ್ತೂರು ಅವರು ಅರ್ಜಿ ವಿಚಾರಣೆಗೆ ಅಂಗೀಕರಿಸಿದರು.
ನಂತರ ಲೋಕಅದಾಲತ್‌ನಲ್ಲಿ ಜೀವನದ ಮಹತ್ವ ಕುರಿತು ಹಿತವಚನ ನೀಡಿ ಒಂದಾಗಿ ಬಾಳ್ವೆ ನಡೆಸುವಂತೆ ನ್ಯಾಯಾಧೀಶ ಸರ್ಪರಾಜ್ ಹುಸೇನ್ ಕಿತ್ತೂರು ಅವರು ದೂರಾಗಬೇಕೆಂದಿದ್ದ ಜೋಡಿಗಳಿಗೆ ಕಿವಿಮಾತು ಹೇಳಿದ್ದರು. ನ್ಯಾಯಾಧೀಶರ ಮಾತಿಗೆ ತಲೆಬಾಗಿದ ವೆಂಕಟೇಶ್ ದಂಪತಿ ವಿಚ್ಚೇದನಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಹಿಂದಕ್ಕೆ ಪಡೆದು ಒಂದಾಗಿ ಬಾಳುವುದಾಗಿ ನ್ಯಾಯಾಧೀಶರಿಗೆ ಭರವಸೆ ನೀಡಿದ್ದಾರೆ.

ನಂತರ ನ್ಯಾಯಾಧೀಶರಾದ ಸರ್ಪರಾಜ್ ಹುಸೇನ್ ಹಾಗೂ ನೆರೆದಿದ್ದ ವಕೀಲರ ಸಮ್ಮುಖದಲ್ಲಿ ಪರಸ್ಪರ ಪುಷ್ಪಮಾಲೆ ಬದಲಾಯಿಸಿಕೊಂಡು ಸಿಹಿ ತಿನ್ನಿಸಿ ನ್ಯಾಯಾಲಯದ ಆವರಣದಿಂದ ಕೈ ಕೈ ಹಿಡಿದು ನ್ಯಾಯಾಲಯದ ಆವರಣದಿಂದ ಹೊರನಡೆದರು. ಅರ್ಜಿದಾರರ ಪರ ಗೆಜ್ಜಲಗೆರೆ ಶಿವಪ್ರಸಾದ್ ಹಾಗೂ ಆತಗೂರು ರಮೇಶ್ ವಾದಿಸಿದ್ದರು.
ಇನ್ನು ರಾಜ್ಯಾದ್ಯಂತ ನವೆಂಬರ್12ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ 14,77,285 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈವರೆಗೆ ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಂಡ ಪ್ರಕರಣಗಳಲ್ಲಿ ಈ ಬಾರಿಯ ಸಂಖ್ಯೆ ಹೊಸ ದಾಖಲೆ ಸೃಷ್ಟಿಸಿದೆ.












Click it and Unblock the Notifications