ಮಂಡ್ಯ ಜೆಡಿಎಸ್ ಟಿಕೆಟ್ ವಂಚಿತೆ ಡಾ.ಲಕ್ಷ್ಮಿ ಕೊನೆಗೂ ಮೌನ ಮುರಿದರು
Recommended Video

ಮಂಡ್ಯ, ಅಕ್ಟೋಬರ್ 18: ಮಂಡ್ಯ ಜಿಲ್ಲೆ ಲೋಕಸಭೆ ಉಪಚುನಾವಣೆ ಟಿಕೆಟ್ ಗೆ ಪ್ರಬಲ ಆಕಾಂಕ್ಷಿ ಆಗಿದ್ದ ಡಾ.ಲಕ್ಷ್ಮಿ ಅಶ್ವಿನ್ ಗೌಡ ಕೊನೆಗೂ ಮೌನ ಮುರಿದಿದ್ದಾರೆ.
'ನಾನು ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತೆ, ದೇವೇಗೌಡ ಹಾಗೂ ಕುಮಾರಸ್ವಾಮಿ ಮಾತಿಗೆ ಬದ್ಧ' ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಆದರೆ ಆ ಪೋಸ್ಟ್‌ನಲ್ಲೂ ಅವರಲ್ಲಿನ ಅಸಮಾಧಾನ ಇಣುಕುತ್ತಿರುವುದು ಸ್ಪಷ್ಟ.
ವೈದ್ಯೆ ಆಗಿದ್ದ ಆ ನಂತರ ಯುಪಿಎಸ್‌ಸಿ ಪರೀಕ್ಷೆ ಮುಗಿಸಿ ಐಎಎಸ್ ಅಧಿಕಾರಿಯೂ ಆಗಿದ್ದ ಲಕ್ಷ್ಮಿ ಅಶ್ವಿನ್ ಗೌಡ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಇದೇ ವರ್ಷಾರಂಭದಲ್ಲಿ ಜೆಡಿಎಸ್ ಸೇರಿದ್ದರು.
ವಿಧಾನಸಭೆ ಚುನಾವಣೆಯಲ್ಲಿಯೇ ಟಿಕೆಟ್ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು, ಆದರೆ ಸಿಗಲಿಲ್ಲ. ಲೋಕಸಭೆ ಉಪಚುನಾವಣೆಗಾದರೂ ಟಿಕೆಟ್ ಸಿಗಲೆಂಬ ಅವರ ಆಸೆಗೆ ತಣ್ಣೀರು ಬಿದ್ದಿದೆ.

ವಿಧಾನಸಭೆ ಚುನಾವಣೆ ಸಮಯದಲ್ಲಿ ಭರ್ಜರಿ ಪ್ರಚಾರ
ವಿಧಾನಸಭೆ ಚುನಾವಣೆ ವೇಳೆ ಎಲ್ಲಡೆ ಕುಮಾರಸ್ವಾಮಿ ಅವರೊಂದಿಗೆ ಪ್ರಚಾರದಲ್ಲಿ ಕಾಣಿಸಿಕೊಂಡ ಅವರಿಗೆ ವಿಧಾನಸಭೆ ಟಿಕೆಟ್ ದೊರಕಬಹುದು ಎಂದು ಎಣಿಸಲಾಗಿತ್ತು. ಆದರೆ ಅದು ಆಗಲಿಲ್ಲ ಹಾಗಾಗಿ ಅವರು ಮಂಡ್ಯ ಲೋಕಸಭೆ ಉಪಚುನಾವಣೆ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದರು ಆದರೆ ಅದೂ ಸಹ ಅವರ ಪಾಲಾಗಲಿಲ್ಲ.

ಬಂಡಾಯದ ಬಾವುಟ ಹಾರಿಸಲು ಸಜ್ಜಾಗಿದ್ದರು
ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡಿದ್ದ ಅವರು ಬಂಡಾಯದ ಬಾವುಟ ಹಾರಿಸುವ ಸೂಚನೆಗಳನ್ನು ನೀಡಿದ್ದರು, ಆದರೆ ವರಿಷ್ಠರ ಸಂಧಾನದ ಬಳಿಕ ಬಂಡಾಯವನ್ನು ಬಿಟ್ಟು ಜೆಡಿಎಸ್ ಜೊತೆ ಇರುವುದಾಗಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಲಕ್ಷ್ಮಿ ಅವರನ್ನು ಬಿಜೆಪಿ ಆಹ್ವಾನಿಸಿದ ಕಾರ್ಯಕರ್ತರು
ಲಕ್ಷ್ಮಿ ಅಶ್ವಿನ್ ಗೌಡ ಅವರ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಹಲವರು, ಅವರನ್ನು ಬಿಜೆಪಿಗೆ ಆಹ್ವಾನಿಸಿದ್ದಾರೆ ಇನ್ನು ಕೆಲವರು ಅವರ ನಿರ್ಣಯ ಬೆಂಬಲಿಸಿದ್ದರೆ ಇನ್ನು ಕೆಲವರು ಲಕ್ಷ್ಮಿ ಅಶ್ವಿನ್ ಗೌಡ ಅವರನ್ನು ಟ್ರಾಲ್ ಮಾಡಿದ್ದಾರೆ.

ಎಲ್.ಆರ್.ಶಿವರಾಮೇಗೌಡಗೆ ಜೆಡಿಎಸ್ ಟಿಕೆಟ್
ಮಂಡ್ಯ ಲೋಕಸಭೆ ಉಪಚುನಾವಣೆಗೆ ಜೆಡಿಎಸ್ ಟಿಕೆಟ್ ಎಲ್.ಆರ್.ಶಿವರಾಮೇಗೌಡ ಅವರ ಪಾಲಾಗಿದೆ. ಅಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಡಾ.ಸಿದ್ದರಾಮಯ್ಯ ಅವರು ಸ್ಪರ್ಧಿಸುತ್ತಿದ್ದಾರೆ.

ಹಳ್ಳಿ ಹುಡುಗಿಯ ಅಪೂರ್ವ ಸಾಧನೆ
ಮಳವಳ್ಳಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಹುಟ್ಟಿ ಕನ್ನಡ ಮಾಧ್ಯಮದಲ್ಲಿ ಓದಿ ಎಂಬಿಬಿಎಸ್, ಐಎಎಸ್ ನಂತಹಾ ಸಾಧನೆಗಳನ್ನು ಮಾಡಿದ ಲಕ್ಷ್ಮಿ ಅವರಿಗೆ ಜನ ಸೇವೆ ಮಾಡುವ ತುಡಿತ ಹೆಚ್ಚಾದ ಕಾರಣಕ್ಕೆ ರಾಜಕೀಯಕ್ಕೆ ಧುಮುಕಿದರು ಆದರೆ ಇಲ್ಲಿ ರಾಜಕೀಯ ಕಾರಣಗಳಿಂದ ಟಿಕೆಟ್ ದೊರೆಯದೆ ವ್ಯಥೆ ಪಡುತ್ತಿದ್ದಾರೆ.












Click it and Unblock the Notifications