Kaveri Water: ತಮಿಳುನಾಡಿಗೆ ನೀರು ಹರಿಸುವ ಆದೇಶದ ವಿರುದ್ಧ ರೊಚ್ಚಿಗೆದ್ದ ರೈತರು

ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಪ್ರತಿನಿತ್ಯ ಒಂದು ಟಿಎಂಸಿ ನೀರು ಹರಿಸಲು ಆದೇಶಿಸಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ವಿರುದ್ಧ ರೈತ ಸಂಘದ ಕಾರ್ಯಕರ್ತರು ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಕನ್ನಡಪರ, ಪ್ರಗತಿಪರ ಹಾಗೂ ರೈತ ಸಂಘಟನೆಗಳ ಕಾರ್ಯಕರ್ತರು ನಗರದ ಜೆ.ಸಿ. ವೃತ್ತದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಕಾವೇರಿ ನೀರು ನಿಯಂತ್ರಣ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Mandya Farmers Protest CWRC s kaveri Water Release Order to Tamil Nadu

ಕಾವೇರಿ ನೀರು ನಿಯಂತ್ರಣ ಸಮಿತಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಪ್ರತಿ ಬಾರಿ ಸಮಿತಿಯು ಕಾವೇರಿಕೊಳ್ಳದ ರೈತರಿಗೆ ಮರಣ ಶಾಸನ ಬರೆದು ರೈತರ ಬಾಳಿಗೆ ಬೆಂಕಿ ಇಡುತ್ತಿದೆ ಎಂದು ಕಿಡಿಕಾರಿದರು.

ರಾಜ್ಯದ ರೈತರ ಗತಿ ಏನು?

ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಕಳೆದ ವರ್ಷ ಮುಂಗಾರು ಕೈ ಕೊಟ್ಟ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಎದುರಾಗಿ ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಲಿಲ್ಲ, ಇದರಿಂದ ರೈತರು ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ, ಈಗಲೂ ಸಹ ಎರಡನೇ ಬೆಳೆ ಹಾಕಿಲ್ಲ, ಇದ್ದ ನೀರನ್ನು ಎಲ್ಲ ತಮಿಳುನಾಡಿಗೆ ನಿರಂತರವಾಗಿ ಹರಿಸಲಾಯಿತು. ಇದೀಗ ಜಲಾಶಯಕ್ಕೆ ಸ್ವಲ್ಪ ಪ್ರಮಾಣದ ನೀರು ಹರಿದು ಬಂದಿದ್ದು, ಬೆಳೆ ಬೆಳೆಯಲು ನೀರು ನೀಡಿಲ್ಲ. ಕೇವಲ ಕೆರೆ ಕಟ್ಟೆಗಳಿಗೆ ಮಾತ್ರ ನೀರು ಹರಿಸಲಾಗಿದೆ. ಇಂತಹ ಪರಿಸ್ಥಿತಿ ಇರುವಾಗ ಕಾವೇರಿ ನೀರು ನಿಯಂತ್ರಣ ಸಮಿತಿ ತಮಿಳುನಾಡಿಗೆ ಪ್ರತಿನಿತ್ಯ ಒಂದು ಟಿಎಂಸಿ ನೀರು ಬಿಡಲು ಆದೇಶ ಮಾಡಿರುವುದು ಅವೈಜ್ಞಾನಿಕ ಎಂದರು.

ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಸಮಿತಿಯ ಆದೇಶವನ್ನು ಪಾಲನೆ ಮಾಡಬಾರದು, ಜಲಾಶಯದಲ್ಲಿ 26 ಟಿಎಂಸಿ ನೀರು ಸಂಗ್ರಹವಾಗಿದೆ, ನೆರೆ ರಾಜ್ಯಕ್ಕೆ 19 ಟಿಎಂಸಿ ನೀರು ಬಿಟ್ಟರೆ ಕಾವೇರಿ ಕೊಳ್ಳದ ರೈತರ ಗತಿ ಏನು ಎಂದು ಆತಂಕ ವ್ಯಕ್ತಪಡಿಸಿದರು.

ಎಚ್‌ಡಿಕೆ ನ್ಯಾಯ ದೊರಕಿಸಿಕೊಡಲಿ

ಕೇಂದ್ರ ಸಚಿವರಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ವಾಸ್ತವ ಪರಿಸ್ಥಿತಿ ಗೊತ್ತಿದೆ. ಇಲ್ಲಿನ ರೈತರ ಬವಣೆಯನ್ನು ಕಣ್ಣಾರೆ ಕಂಡಿದ್ದಾರೆ, ರೈತರು ಬೆಳೆ ಹಾಕದ ಪರಿಸ್ಥಿತಿಯಲ್ಲಿದ್ದಾರೆ. ಆ ಹಿನ್ನೆಲೆಯಲ್ಲಿ ಕಾವೇರಿ ಕೊಳ್ಳದ ರೈತರಿಗೆ ಸಂಕಷ್ಟ ಪರಿಸ್ಥಿತಿಯಲ್ಲಿ ನ್ಯಾಯ ದೊರಕಿಸಿಕೊಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ ಮಾತನಾಡಿ, ಕರ್ನಾಟಕದ ಕಾವೇರಿ ಕೊಳ್ಳ ಜಲಾಶಯಗಳಿಂದ ತಮಿಳುನಾಡಿಗೆ ಪ್ರತಿನಿತ್ಯ ಒಂದು ಟಿಎಂಸಿ ನೀರನ್ನು ಜುಲೈ 31ರವರೆಗೆ ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಮಾಡಿರುವುದು ಅವೈಜ್ಞಾನಿಕ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಇಂತಹ ರೈತ ವಿರೋಧಿ ಆದೇಶವನ್ನು ಒಪ್ಪಬಾರದು ಎಂದು ಆಗ್ರಹಿಸಿದರು.

ಅದೇ ರೀತಿ ಗೋದಾವರಿ-ಕೃಷ್ಣ, ಕಾವೇರಿ - ಪೆನ್ನಾರ್ ನದಿ ಜೋಡಣೆಯಿಂದ ಕರ್ನಾಟಕ ರಾಜ್ಯದ ನೀರಿನ ಪಾಲು ಕೇವಲ 2.19 ಟಿಎಂಸಿ. ಆದರೆ ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಿಗೆ 40 ರಿಂದ 50 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಕರ್ನಾಟಕ ರಾಜ್ಯಕ್ಕೆ ದೊಡ್ಡ ಮಟ್ಟದ ಅನ್ಯಾಯ ಆಗುತ್ತಿರುವುದರಿಂದ ಇಂತಹ ಯೋಜನೆಯನ್ನು ರಾಜ್ಯ ಸರ್ಕಾರ ಒಪ್ಪಬಾರದು ಎಂದು ಒತ್ತಾಯಿಸಿದರು.

ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ. ಮಂಜುನಾಥ್ ಮಾತನಾಡಿ, ತಮಿಳುನಾಡಿಗೆ ನೀರು ಹರಿಸಿ ರಾಜ್ಯ ಸರ್ಕಾರ ಕಾವೇರಿ ಕೊಳ್ಳದ ರೈತರಿಗೆ ದ್ರೋಹ ಮಾಡುವ ಮುನ್ನ 'ವಿಷ ಭಾಗ್ಯ' ಕೊಟ್ಟು ಬಿಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಕಾವೇರಿ ಕೊಳ್ಳದ ಪ್ರದೇಶದ ವಾಸ್ತವ ಸ್ಥಿತಿ ಅರಿಯಲು ಪ್ರವಾಸ ಕೈಗೊಳ್ಳಬೇಕು. ರಾಜ್ಯದ ಸಂಸದರ ಸಭೆ ಕರೆದು ಚರ್ಚಿಸಬೇಕು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಒತ್ತಾಯಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+