ತಂದೆಯ ಕಾರ್ಯ ಮುಗಿಸಿ ಬರುವಾಗ ಎದುರಾದ ಯಮರಾಯ!
Recommended Video

ಮಂಡ್ಯ, ನವೆಂಬರ್ 24: ಮಂಡ್ಯದ ಗಿರೀಶ್ ಎಂಬುವವರು ವಿಧಿವಶರಾದ ತಂದೆಯ ಮಾಸಿಕ ಕಾರ್ಯಗಳನ್ನು ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಧುತ್ತೆಂದು ಎದುರಾಗಿದ್ದ ಯಮರಾಯ. ಆದರೆ ಗಿರೀಶ್ ಅವರ ಅದೃಷ್ಟ ಚೆನ್ನಾಗಿತ್ತು. ಆ ಮೃತ್ಯುಕೂಪದಿಂದ ಅದ್ಹೇಗೋ ಪಾರಾಗಿ ಹೊರಬಂದರು!
ಮಂಡ್ಯದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಮೃತ್ಯುಂಜಯ ಎಂಬಂತೆ ಬದುಕುಳಿದ ಗಿರೀಶ್ ಎಂಬ ವ್ಯಕ್ತಿ ಆ ಕರಾಳದ ಕ್ಷಣದ ಅನುಭವವನ್ನು ಚಾನೆಲ್ ಗಳಲ್ಲಿ ಹಂಚಿಕೊಂಡಿದ್ದಾರೆ.
ಆ ಘಟನೆ ಹೇಗೆ ನಡೆಯಿತು ಎಂಬುದು ಗಿರೀಶ್ ಅವರಿಗೂ ಸ್ಪಷ್ಟವಾಗಿ ಗೊತ್ತಿಲ್ಲ. ಏಕೆಂದರೆ ಏನಾಗುತ್ತಿದೆ ಎಂಬುದು ತಿಳಿಯುವಷ್ಟರಲ್ಲಿ ಬಸ್ಸು ನಾಲೆಯಲ್ಲಿ ಬಿದ್ದಿತ್ತು!

ಚೀರಾಟ, ನೋವು, ಆಕ್ರಂದನ
ಸುಮಾರು 50 ಕಿಮೀ.ವೇಗದಲ್ಲಿ ಚಲಿಸುತ್ತಿದ್ದ ಬಸ್ಸು ಏನಾಗುತ್ತಿದೆ ಎಂಬುದು ತಿಳಿಯುವಷ್ಟರಲ್ಲಿ ನೀರಿನಲ್ಲಿ ಬಿದ್ದಿತ್ತು. ಆಕ್ರಂದನ, ಚೀರಾಟ, ನೋವು.... ಅದಲ್ಲದೆ ಅಲ್ಲಿ ಬೇರೇನೂ ಕಾಣುತ್ತಿರಲಿಲ್ಲ. ಅದ್ಹೇಗೋ ಕಷ್ಟಪಟ್ಟು ಕಿಟಕಿಯ ಮುಲಕ ಹೊರಬಂದ ಗಿರೀಶ್ ಅವರಿಗೆ ಇನ್ನೋರ್ವ ಚಿಕ್ಕ ಬಾಲಕ ಸಹ ಪ್ರಾಣ ಉಳಿಸಿಕೊಳ್ಳಲು ಹವಣಿಸುತ್ತಿದುದು ತಿಳಿಯಿತು. ಆತನನ್ನೂ ಎದೆಗವಚಿಕೊಂಡು ಈಜಿ ದಡ ಸೇರಿದರು.

ಹಠಾತ್ತನೆ ಎದುರಾದ ಜವರಾಯ!
ಆ ಭೀಕರ ದೃಶ್ಯ ನೋಡಿ ಮೈ ನಡುಕಬಂದು ಅದಾಗಲೇ ಜ್ವರ ನೆತ್ತಿಗೇರಿತ್ತು. ಗಿರೀಶ್ ಅವರು ನಡುಗುತ್ತಲೇ ಮನೆಗೆ ಬಂದು ಸೇರಿದ್ದರು. ಇವೆಲ್ಲ ಕನಸೋ, ನನಸೋ ತಿಳಿಯದ ಸ್ಥಿತಿ. ತಂದೆಯ ಕಾರ್ಯಗಳನ್ನು ಮುಗಿಸಿ ಹಿಂದಿರುಗುವಾಗ ಯಮರಾಯ ಹಠಾತ್ತನೆ ಎದುರುಬಂದು ನಿಂತಿದ್ದ. ಆದರೆ ಗಿರೀಶ್ ಅವರ ಆಯಸ್ಸು ಗಟ್ಟಿಯಿತ್ತು. ಬದುಕಿಬಂದರು.

ಬದುಕುಳಿದ ಬಾಲಕ
ಗಿರೀಶ್ ಅವರು ನೆರವು ನೀಡಿದ್ದರಿಂದ ಇನ್ನೋರ್ವ ಆರು ವರ್ಷದ ಬಾಲಕನೂ ಬದುಕಿದ್ದಾನೆ. ಆದರೆ ಘಟನೆಯಲ್ಲಿ 25 ಕ್ಕೂ ಹೆಚ್ಚು ಜನ ಮೃತರಾಗಿದ್ದು, ಅವರಲ್ಲಿ ಐದಾರು ಮಕ್ಕಳೂ ಸೇರಿದ್ದಾರೆ ಎನ್ನಲಾಗಿದೆ.

ಸ್ಟೀರಿಂಗ್ ಲಾಕ್ ಆಗಿತ್ತಾ?
ಬಸ್ಸು ನಾಲೆಯೊಂದರ ಬಳಿ ಎಡಕ್ಕೆ ತಿರುಗುವಾಗ ಸ್ಟೀರಿಂಗ್ ಲಾಕ್ ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ಉರುಳಿದೆ ಎನ್ನಲಾಗಿದೆ. ಚಾಲಕ ಬದುಕಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ ಕಂಡಕ್ಟರ್ ಈಜಿ ಪರಾರಿಯಾಗಿದ್ದಾರೆ ಎಂದು ಬದುಕುಳಿದ ಗಿರೀಶ್ ಹೇಳಿದ್ದಾರೆ.












Click it and Unblock the Notifications