Star Chandru: ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಮತ್ತು ಪತ್ನಿ ಬಳಿ ಇರುವ ಆಸ್ತಿ ಎಷ್ಟು ಗೊತ್ತೆ?
ಮಂಡ್ಯ, ಏಪ್ರಿಲ್. 01: ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಎಂದೇ ಖ್ಯಾತರಾಗಿರುವ ವೆಂಕಟರಮಣೇಗೌಡ ಅವರು ತಮ್ಮ ಹೆಸರಿನಲ್ಲಿ 237.11 ಕೋಟಿ ಆಸ್ತಿಯ ಜೊತೆಗೆ ಪತ್ನಿ ಹೆಸರಿನಲ್ಲಿ 146.99 ಕೋಟಿ ಆಸ್ತಿಯಿದೆ ಎಂದು ಘೋಷಿಸಿಕೊಂಡಿದ್ದಾರೆ.
ಏಪ್ರಿಲ್. 01ರ ಸೋಮವಾರ ನಾಮಪತ್ರ ಸಲ್ಲಿಸುವ ವೇಳೆ ಮಂಡ್ಯ ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ 59 ವರ್ಷ ವಯಸ್ಸಿನ ವೆಂಕಟರಮಣೇಗೌಡ ಅವರು 29.94 ಕೋಟಿ ರೂ. ಮೌಲ್ಯದ ಚರ ಆಸ್ತಿಯನ್ನು ತೋರಿಸಿದ್ದಾರೆ. ಅವರ ಹೆಸರಿನಲ್ಲಿ ಮೂರು ಟ್ರ್ಯಾಕ್ಟರ್‌ಗಳು ಇವೆ. ಪತ್ನಿ ಕುಸುಮಾ ಹೆಸರಿನಲ್ಲಿ 146.99 ಕೋಟಿ ಆಸ್ತಿಯಿದೆ. 4.2 ಕೆಜಿ ಚಿನ್ನಾಭರಣ, 25.6 ಕೆಜಿ ಬೆಳ್ಳಿ ವಸ್ತುಗಳು ಮತ್ತು 15.08 ಲಕ್ಷ ಮೌಲ್ಯದ ವಜ್ರಗಳು ಇವೆ ಎಂದು ತಿಳಿಸಲಾಗಿದೆ.

ಸ್ಥಿರಾಸ್ತಿಗಳ ವಿವರಗಳನ್ನು ಹಂಚಿಕೊಂಡಿರುವ ವೆಂಕಟರಮಣೇಗೌಡ ಅವರು ಒಟ್ಟು 49 ಕೃಷಿ ಭೂಮಿಯನ್ನು ತೋರಿಸಿದ್ದು, ಅದರ ಮಾರುಕಟ್ಟೆ ಮೌಲ್ಯ 26.08 ಕೋಟಿ, ಅವರ ಕೃಷಿಯೇತರ ಭೂಮಿಯ ಮಾರುಕಟ್ಟೆ ಮೌಲ್ಯ 99.36 ಕೋಟಿ. ಅವರ ವಾಣಿಜ್ಯ ಕಟ್ಟಡಗಳ ಮಾರುಕಟ್ಟೆ ಮೊತ್ತ 80.72 ಕೋಟಿ.
ಅವರ ಪತ್ನಿ ಹೆಸರಲ್ಲಿರುವ ಸ್ಥಿರಾಸ್ತಿಗಳಲ್ಲಿ 4.2 ಕೋಟಿ ಮಾರುಕಟ್ಟೆ ಮೌಲ್ಯದ ಐದು ನಿವೇಶನಗಳು, 90.29 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಹಾಗೂ 36.39 ಕೋಟಿ ಮೌಲ್ಯದ ವಾಣಿಜ್ಯ ಕಟ್ಟಡಗಳು ಸೇರಿವೆ. ವೆಂಕಟರಮಣೇಗೌಡ ಅವರು ತಮ್ಮ ಹೆಸರಿನಲ್ಲಿ 15.71 ಕೋಟಿ ಮತ್ತು ಅವರ ಪತ್ನಿ ಹೆಸರಿನಲ್ಲಿ 2.21 ಕೋಟಿ ಮೊತ್ತದ ಸಾಲವನ್ನು ತೋರಿಸಿದ್ದಾರೆ.

ಇದೇ ವೇಳೆ ಸೋಮವಾರ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯೂ ಆದ ಮಂಡ್ಯ ಜಿಲ್ಲಾಧಿಕಾರಿಗಳಿಗೆ ವೆಂಕಟರಮಣೇಗೌಡ ಮೂರು ಸೆಟ್‌ಗಳ ನಾಮಪತ್ರ ಸಲ್ಲಿಸಿದ್ದಾರೆ. ವೆಂಕಟರಮಣೇಗೌಡ ಅವರಿಗೆ ಬೆಂಬಲವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ, ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ, ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಉಪಸ್ಥಿತರಿದ್ದರು.
ವೆಂಕಟರಮಣೇಗೌಡ ನಾಮಪತ್ರ ಸಲ್ಲಿಕೆ ವೇಳೆ ಅಪಾರ ಸಂಖ್ಯೆಯ ಬೆಂಬಲಿಗರು ಶಕ್ತಿ ಪ್ರದರ್ಶನ ಮಾಡಿದ್ದಾರೆ. ತೆರೆದ ವಾಹನದಲ್ಲಿ ಕಾಳಿಕಾಂಬಾ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮಾಡಿದ್ದಾರೆ. ಮೆರವಣಿಗೆಯಲ್ಲಿ ಜಾನಪದ ಕಲಾವಿದರು ಮತ್ತು ಡೋಲು ತಂಡ ಭಾಗಿಯಾಗಿದ್ದವು.
ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಮೆರವಣಿಗೆಯಲ್ಲಿ ಮಂಡ್ಯ ಶಾಸಕ ಗಾಣಿಗ ರವಿ, ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಮದ್ದೂರು ಶಾಸಕ ಉದಯ್, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಎಂಎಲ್ಸಿಗಳಾದ ದಿನೇಶ್ ಗೂಳಿಗೌಡ, ಮಧು ಮಾದೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಮಂಡ್ಯ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಭಾಗಿಯಾಗಿದ್ದ ಡಿಸಿಎಂ ಡಿಕೆ ಶಿವಕುಮಾರ್, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಜೊತೆಗೆ, "ಸಕ್ಕರೆ ನಗರಿ ಮಂಡ್ಯ ಜನರ ಮನಸ್ಸು ತುಂಬಾನೇ ಸಿಹಿ. ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲ್ಗೊಂಡು ಅದ್ಧೂರಿ ಸ್ವಾಗತ ನೀಡಿದರು. ಮಂಡ್ಯ ಜನರು ಬುದ್ಧಿವಂತರಿದ್ದಾರೆ. ಅವರು ಈ ಬಾರಿ ಯೋಚಿಸಿ ಮತದಾನ ಮಾಡಿ ನಮ್ಮ ಅಭ್ಯರ್ಥಿಯನ್ನು ಖಂಡಿತವಾಗಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ ವಿಶ್ವಾಸವಿದೆ" ಎಂದು ಬರೆದುಕೊಂಡಿದ್ದಾರೆ.
(ಆಸ್ತಿ ವರದಿ ಮಾಹಿತಿ - ದಿ ಹಿಂದೂ)












Click it and Unblock the Notifications