5 ವರ್ಷದ ಬಳಿಕ ಕೆಆರ್‌ಎಸ್ ಭರ್ತಿ, ನೀರು ಬಿಡುಗಡೆ, ಪ್ರವಾಹ ಮುನ್ಸೂಚನೆ
Recommended Video

ಮಂಡ್ಯ, ಜುಲೈ 14 : ಐದು ವರ್ಷಗಳ ಬಳಿಕ ಕೆಆರ್‌ಎಸ್ ಜಲಾಶಯ ಭರ್ತಿಯಾಗುತ್ತಿದೆ. ಜಲಾಶಯದಿಂದ 20 ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗುತ್ತದೆ. ಆದ್ದರಿಂದ, ಕಾವೇರಿ ನೀರಾವರಿ ನಿಗಮ ಪ್ರವಾಹದ ಮುನ್ನೆಚ್ಚರಿಕೆ ನೀಡಿದೆ.
ಕಾವೇರಿ ನದಿ ಪಾತ್ರದಲ್ಲಿ ಭಾರೀ ಮಳೆಯಾಗುತ್ತಿದೆ. ಆದ್ದರಿಂದ, ಕೆಆರ್‌ಎಸ್ ಜಲಾಶಯಕ್ಕೆ ಒಳ ಹರಿವು ಹೆಚ್ಚಿದೆ. ಶನಿವಾರ ಬೆಳಗ್ಗೆ ಜಲಾಶಯದಲ್ಲಿ 122.70 ಅಡಿ ನೀರಿನ ಸಂಗ್ರಹವಿದೆ. ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳು.
ಜಲಾಶಯಕ್ಕೆ 41,961 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಶನಿವಾರ ಪೂಜೆ ಸಲ್ಲಿಸಿದ ಬಳಿಕ ಜಲಾಶಯದಿಂದ 20 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಹಾಸನದ ಹೇಮಾವತಿ ಜಲಾಶಯದಿಂದಲೂ ನೀರು ಹೊರಬಿಡಲಾಗಿದ್ದು, ಅದು ಬಂದು ಕೆಆರ್‌ಎಸ್ ಸೇರಲಿದೆ.

ಪ್ರವಾಹದ ಮುನ್ಸೂಚನೆ : ಕೃಷ್ಣರಾಜಸಾಗರ ಜಲಾಶಯಕ್ಕೆ ಹೆಚ್ಚಿನ ಒಳಹರಿವು ಬರುತ್ತಿದ್ದು, ಜಲಾಶಯದಿಂದ ಹೆಚ್ಚುವರಿ ನೀರಿನ್ನು ಕಾವೇರಿ ನದಿಗೆ ಬಿಡಲಾಗುತ್ತಿದೆ. ಆದ್ದರಿಂದ, ಪ್ರವಾಹದ ಮುನ್ಸೂಚನೆ ನೀಡಲಾಗಿದೆ.

ಕಾವೇರಿ ನದಿಯ ಎರಡೂ ದಂಡೆಗಳಲ್ಲಿ ಸಾರ್ವಜನಿಕರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರು ರಕ್ಷಣೆಗೆ ಎಚ್ಚರಿಕೆ ವಹಿಸಿ ಸೂಕ್ತ ಮುಂಜಾಗ್ರತೆ ಕೈಗೊಳ್ಳಬೇಕು. ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಕಾವೇರಿ ನೀರಾವರಿ ನಿಗಮ ಮನವಿ ಮಾಡಿದೆ.

ಕಳೆದ ವರ್ಷ ಇದೇ ಸಮಯದಲ್ಲಿ ಜಲಾಶಯದಲ್ಲಿ 78.45 ಅಡಿ ನೀರಿತ್ತು. ಈ ವರ್ಷ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ಜೂನ್ ತಿಂಗಳಿನಲ್ಲಿಯೇ ಜಲಾಶಯದ ನೀರಿನ ಮಟ್ಟ 100 ಅಡಿ ದಾಟಿತ್ತು.











Click it and Unblock the Notifications