Dasara 2024: ಶ್ರೀರಂಗಪಟ್ಟಣದಲ್ಲಿ ನಡೆಯುವ ದಸರಾದ ವಿಶೇಷತೆಗಳೇನು?
Srirangapatna Dasara 2024: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ದಸರಾ ಸಂಭ್ರಮ ಇಂದಿನಿಂದ (ಅಕ್ಟೋಬರ್ 04) ಆರಂಭವಾಗಿದ್ದು, 7ಕ್ಕೆ ಮುಕ್ತಾಯವಾಗಲಿದೆ. ಹಾಗಾದರೆ ಯಾವೆಲ್ಲ ಕಾರ್ಯಗಳು ಇರಲಿವೆ ಹಾಗೂ ಎಷ್ಟು ವರ್ಷಗಳಿಂದ ಈ ದಸರಾವನ್ನು ಮಾಡಿಕೊಂಡು ಬರಲಾಗುತ್ತಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಅದ್ಧೂರಿ ಚಾಲನೆ ಸಿಗಲಿದ್ದು, ಇದರೊಂದಿಗೆ ಇತಿಹಾಸದ ಮೆಲುಕಿಗೆ ಸಾಕ್ಷಿಯಾಗಲಿದೆ. ಇಲ್ಲಿಯೂ ಅಂಬಾರಿಯ ಮೆರವಣಿಗೆ ನಡೆಯಲಿದ್ದು, ಮೈಸೂರು ದಸರಾವನ್ನು ನೆನಪಿಸಲಿದೆ.

ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಕಿರಂಗೂರು ಬಳಿಯ ಬನ್ನಿ ಮಂಟಪದಲ್ಲಿಟ್ಟು ಸಾಂಪ್ರದಾಯಿಕ ಗಣಪತಿ ಪೂಜೆ, ಪುಣ್ಯಾಹ ವಾಚನ, ಗಂಗಾ, ಭಾಗೀರತಿ ಪೂಜೆ, ಶೋಡಷೋಪಚಾರ, ಬನ್ನಿ ವೃಕ್ಷ ಪೂಜೆ, ನಂದಿ ಧ್ವಜ ಪೂಜೆ, ಗಜ, ಅಶ್ವಪೂಜೆ ಮತ್ತು ಅಷ್ಟ ದಿಕ್ಪಾಲಕ ಬಲಿ ಕೈಂಕರ್ಯಗಳು ನಡೆಯುತ್ತವೆ.
ಬಳಿಕ ಮಧ್ಯಾಹ್ನ 12:30ಕ್ಕೆ ನಂದಿ ಧ್ವಜ ಪೂಜೆ ನಡೆಸಿ 2:30ರಿಂದ 3ರ ವರೆಗೆ ಜಂಬೂ ಸವಾರಿಗೆ ಚಾಲನೆ ನೀಡಲಾಗುತ್ತದೆ. ಅದರಂತೆಯೇ ಮೆರವಣಿಗೆಯಲ್ಲಿ ಪಟ್ಟಣದ ಚಾಮುಂಡೇಶ್ವರಿ ದೇವಾಲಯದಲ್ಲಿರುವ 250 ಕೆ.ಜಿ. ಭಾರದ ಪಂಚ ಲೋಹದ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಮರದ ಅಂಬಾರಿಯಲ್ಲಿ ಮಹೇಂದ್ರ ಆನೆ ಹೊತ್ತು ಸಾಗಲಿದ್ದು, ಇದಕ್ಕೆ ಹಿರಣ್ಯ ಮತ್ತು ಲಕ್ಷ್ಮಿ ಆನೆಗಳು ಸಾಥ್ ನೀಡಲಿವೆ.
ಈ ಬಾರಿಯ ದಸರಾದಲ್ಲಿ ಮೈಸೂರಿನಂತೆಯೇ ಯೋಗ ದಸರಾ, ಕ್ರೀಡಾ ದಸರಾ, ಯುವ ದಸರಾ, ಮಹಿಳಾ ದಸರಾ, ಮಕ್ಕಳ ದಸರಾ, ಸ್ಟಾರ್ ನೈಟ್, ಜಲ ಸಹಾಸ ಕ್ರೀಡೆಗಳು, ಗಂಗಾರತಿ, ಕವಿ ಗೋಷ್ಠಿ, ಚರ್ಚಾ ಗೋಷ್ಠಿ, ಉದ್ಯೋಗ ಮೇಳ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಶ್ರೀರಂಗಪಟ್ಟಣ ದಸರಾ ಆರಂಭಕ್ಕೆ ನಾಂದಿ ಹಾಡಿದ್ದರೂ ಹಲವು ಕಾರಣಗಳಿಂದಾಗಿ ಈ ಹಿಂದೆ ಇಲ್ಲಿ ದಸರಾ ಕಳೆಗುಂದಿತ್ತು. ಆದರೆ, 2008ರಲ್ಲಿ ದಸರಾ ಉತ್ಸವ ಮತ್ತೆ ಆರಂಭಗೊಳಿಸಲಾಗಿದ್ದು, ಇದೀಗ ಪ್ರತಿವರ್ಷವೂ ಅದ್ಧೂರಿಯಾಗಿ ಮಂಡ್ಯ ಜಿಲ್ಲಾಡಳಿತ ನಡೆಸುತ್ತಿದೆ.
ಶ್ರೀರಂಗಪಟ್ಟಣದ ಇತಿಹಾಸ ಮೆಲುಕು: ಇನ್ನು ಶ್ರೀರಂಗಪಟ್ಟಣದ ಇತಿಹಾಸವನ್ನು ಮೆಲುಕು ಹಾಕಿದ್ದೇ ಆದರೆ ಇವತ್ತಿನ ಶ್ರೀರಂಗಪಟ್ಟಣ ಪೌರಾಣಿಕ ಯುಗದಲ್ಲಿ "ಆದಿರಂಗ"ವಾಗಿ ಚಾರಿತ್ರಿಕವಾಗಿ "ಅಷ್ಟಗ್ರಾಮ"ವಾಗಿ ಕರೆಯಲ್ಪಡುತ್ತಿತ್ತು. ಕಾವೇರಿ ನದಿ ಸುತ್ತುವರೆದು ಸೃಷ್ಠಿಯಾದ ಈ ಪಟ್ಟಣವು ಪಶ್ಚಿಮದಿಂದ ಪೂರ್ವಕ್ಕೆ ಸುಮಾರು 3 ಮೈಲಿಗಳಷ್ಟು ಉದ್ದ ಮತ್ತು ಉತ್ತರ-ದಕ್ಷಿಣವಾಗಿ ಒಂದು ಮೈಲಿಯಷ್ಟು ಅಗಲವನ್ನು ಹೊಂದಿರುವುದು ವಿಶೇಷವಾಗಿದೆ.
ಶ್ರೀರಂಗಪಟ್ಟಣವನ್ನು ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನನ ಸಹೋದರ ಉದಯಾದಿತ್ಯನು ಕ್ರಿ.ಶ. 1120ರಲ್ಲಿ ನಿರ್ಮಿಸಿದ್ದರೆ, ಕ್ರಿ.ಶ. 1454ರಲ್ಲಿ ನಾಗಮಂಗಲದ ದೊರೆ ತಿಮ್ಮಣ್ಣನೆಂಬುವನು ಶ್ರೀರಂಗಪಟ್ಟಣಕ್ಕೆ ಸುತ್ತಲೂ ಕೋಟೆಯನ್ನು ಕಟ್ಟಿಸಿದ್ದಾನೆ. ನಾಲ್ಕು ದ್ವಾರಗಳಿಂದ ಪಟ್ಟಣವನ್ನು ಸುತ್ತುವರೆದಿರುವ ಈ ಬಲವಾದ ಕೋಟೆ ಭಾರತದ ಎರಡನೇ ಅತ್ಯಂತ ಬಲಿಷ್ಟ ಕೋಟೆಯೆಂದು ಪರಿಗಣಿತವಾಗಿದೆ.
ಶ್ರೀರಂಗರಾಯನ ಕಾಲದಲ್ಲಿ ನವರಾತ್ರಿ ಆಚರಣೆ: ಶ್ರೀರಂಗಪಟ್ಟಣ ವಿಜಯನಗರದರಸರ ಆಳ್ವಿಕೆಗೂ ಒಳಪಟ್ಟಿತ್ತು. ಆಗ ಅವರ ಸಾಮಂತ ಶ್ರೀರಂಗರಾಯನ ಇಲ್ಲಿ ಆಡಳಿತ ನಡೆಸುತ್ತಿದ್ದನು. ಆತನ ಕಾಲದಲ್ಲಿಯೇ ನವರಾತ್ರಿ ಆಚರಣೆ ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿತ್ತು ಎನ್ನಲಾಗಿದೆ.
ಆದರೆ 1610ರಲ್ಲಿ ಶ್ರೀರಂಗಪಟ್ಟಣಕ್ಕೆ ದಂಡೆತ್ತಿ ಹೋದ ಮೈಸೂರು ರಾಜರಾದ ಯದುವಂಶದ ರಾಜಒಡೆಯರ್ ಶ್ರೀರಂಗಪಟ್ಟಣವನ್ನು ವಶಕ್ಕೆ ಪಡೆದುಕೊಂಡರು. ಆ ನಂತರ ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿಸಿಕೊಂಡು ರಾಜ್ಯಭಾರ ಮಾಡುವ ವೇಳೆ ವಿಜಯನಗರ ಅರಸರಂತೆ ತಮ್ಮ ಅರಮನೆಯಲ್ಲಿಯೂ ದಸರಾ ಆಚರಣೆ ಮಾಡಲು ಆರಂಭಿಸಿದರು ಎಂಬುದು ಇತಿಹಾಸ.
ಶ್ರೀರಂಗಪಟ್ಟಣವು ಮೈಸೂರಿಗೆ ಹದಿನಾರು ಕಿ.ಮೀ.ದೂರದಲ್ಲಿದ್ದು, ಮಂಡ್ಯ ಜಿಲ್ಲೆಗೆ ಸೇರಿದ್ದು ತಾಲೂಕು ಕೇಂದ್ರವಾಗಿದೆ. ಮಂಡ್ಯದಿಂದ 30 ಕಿ.ಮೀ. ಬೆಂಗಳೂರಿನಿಂದ 122 ಕಿ.ಮೀ. ದೂರದಲ್ಲಿದೆ. ಕೊಡಗಿನಿಂದ ಹರಿದು ಬರುವ ಕಾವೇರಿ ನದಿ ಇಲ್ಲಿ ಎರಡು ಕವಲಾಗಿ ಹರಿಯುವುದರೊಂದಿಗೆ ಶ್ರೀರಂಗಪಟ್ಟಣವನ್ನು ದ್ವೀಪವಾಗಿಸಿದ್ದು ವಿಶೇಷ.












Click it and Unblock the Notifications