ಮಂಡ್ಯ : ನಿಖಿಲ್‌ಗೆ ಬೆಂಬಲ ಕೊಟ್ಟ ಕರ್ನಾಟಕ ರಾಜ್ಯ ರೈತ ಸಂಘ
ಮಂಡ್ಯ, ಏಪ್ರಿಲ್ 15 : ಮಂಡ್ಯ ಲೋಕಸಭಾ ಚುನಾವಣೆಗೆ ಮೂರು ದಿನಗಳು ಬಾಕಿ ಇದೆ. ಕರ್ನಾಟಕ ರಾಜ್ಯ ರೈತ ಸಂಘ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಬೆಂಬಲ ಘೋಷಣೆ ಮಾಡಿದೆ.
ಕರ್ನಾಟಕ ರಾಜ್ಯ ರೈತ ಸಂಘ (ರಿ)ದ ರಾಜ್ಯಾಧ್ಯಕ್ಷ ಎಂ.ಟಿ.ಗಿರೀಶ್ ಗೌಡ ಅವರು ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ರಾಜ್ಯ ಸಮಿತಿಯಿಂದ ನಿಖಿಲ್ ಕುಮಾರಸ್ವಾಮಿ ಬೆಂಬಲಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ 17 ಜಿಲ್ಲೆಗಳಲ್ಲಿ ಜಿಲ್ಲಾಧ್ಯಕ್ಷರನ್ನು ಹೊಂದಿದೆ. ಸಂಘದ ರಾಜ್ಯ, ಜಿಲ್ಲೆ ಮತ್ತು ತಾಲೂಕು ಪದಾಧಿಕಾರಿಗಳು ಮತ್ತು ಸಂಘದ ಸದಸ್ಯರು ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಮನೆ-ಮನೆ ಪ್ರಚಾರ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ.

ಏಪ್ರಿಲ್ 15, 16 ಮತ್ತು 17ರಂದು 500ಕ್ಕೂ ಹೆಚ್ಚು ಕರ್ನಾಟಕ ರಾಜ್ಯ ರೈತ ಸಂಘ ಕಾರ್ಯಕರ್ತರು ಮನೆ-ಮನೆಗೆ ತೆರಳಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಮತಯಾಚನೆ ಮಾಡಲಿದ್ದಾರೆ.
ಏಪ್ರಿಲ್ 18ರಂದು ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದೆ. ಚುನಾವಣೆ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ನಿಖಿಲ್ ಕುಮಾರಸ್ವಾಮಿ ಎದುರಾಳಿ. ಬಿಜೆಪಿ ಸುಮಲತಾ ಅವರಿಗೆ ಬೆಂಬಲ ಘೋಷಣೆ ಮಾಡಿದೆ.












Click it and Unblock the Notifications