Karnataka Budget 2023 Expectations: ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ನಿರೀಕ್ಷೆಗಳೇನು?
ಫೆಬ್ರವರಿ 10ರಂದು ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಫೆಬ್ರವರಿ 17ರಂದು ಮುಖ್ಯಮಂತ್ರಿ ರಾಜ್ಯ ಬಜೆಟ್ ಮಂಡನೆ ಆಗಲಿದೆ. ಕರ್ನಾಟಕ ಬಜೆಟ್ 2023ರ ಮೇಲಿನ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಜನತೆಯ ನಿರೀಕ್ಷೆಗಳೇನು ಎನ್ನುವುದು ಇಲ್ಲಿದೆ.
ಇದೇ ಫೆಬ್ರವರಿ 17ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರು 2023ರಂದು ಬಜೆಟ್ ಮಂಡಿಸಲಿದ್ದಾರೆ. ಹಾಗೆಯೇ ಮಂಡ್ಯ ಜನರು ರಾಜ್ಯ ಬಜೆಟ್‌ನಲ್ಲಿ ಹಲವು ಅನುದಾನಗಳನ್ನು ಘೋಷಿಸುವ ನಿರೀಕ್ಷೆಯಲ್ಲಿದ್ದಾರೆ. ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಜನರು ಯಾವೆಲ್ಲ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ ಅನ್ನುವುದನ್ನು ನೋಡೋಣ ಬನ್ನಿ.
ಕೃಷಿ, ಕೈಗಾರಿಕೆ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶ ಕಲ್ಪಿಸುವುದರ ಜೊತೆಗೆ ಆತ್ಮನಿರ್ಭರ ಭಾರತ ಯೋಜನೆಯಲ್ಲಿ ಬೆಲ್ಲ ತಯಾರಿಕೆಗೆ ಒತ್ತು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಾವಯವ ಬೆಲ್ಲ ನಿರ್ಮಾಣ ಘಟಕಗಳಿಗೆ ಸಬ್ಸಿಡಿ, ಪಶು ಆಹಾರ ತಯಾರಿಕಾ ಘಟಕ, ತೋಟಗಾರಿಕೆ ಕಾಲೇಜು, ಮಳೆ ನೀರು ಕೊಯ್ಲಿಗೆ ಸಬ್ಸಿಡಿ, ಕೆರೆಗಳ ಹೂಳು ತೆಗೆಯಲು ಅನುದಾನ, ಮೈಶುಗರ್ ಹೊಸ ಕಾರ್ಖಾನೆ ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳನ್ನು ಪ್ರಸಕ್ತ ಬಜೆಟ್‌ನಲ್ಲಿ ಘೋಷಿಬೇಕು ಎನ್ನುವುದು ಸಕ್ಕರೆ ನಾಡಿನ ನಿರೀಕ್ಷೆಯಾಗಿದೆ.
ಜಿಲ್ಲೆಯ ಜನರು ಮತ್ತು ರೈತರಿಗಾಗಿ ಅಗತ್ಯವಿರುವ ಯೋಜನೆಗಳನ್ನು ಘೋಷಣೆ ಮಾಡಬೇಕಿದ್ದು, ಅಕ್ಕ ಪಕ್ಕದ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಮಂಡ್ಯ ಜಿಲ್ಲೆ ತೀರಾ ಹಿಂದುಳಿದಿದೆ. ಮೂಲಭೂತ ಸಮಸ್ಯೆ, ರಸ್ತೆಗಳು ಸೇರಿದಂತೆ ಅಗತ್ಯ ಸೌಲಭ್ಯಗಳ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಬೇಕಾಗಿದೆ. ಇತ್ತೀಚಿನ ವರ್ಷಗಳಲ್ಲಿ ರೈತರು ತುಂಡು ಭೂಮಿಯಲ್ಲಿ ಕೃಷಿ ಮಾಡದೆ ವಿಮುಖರಾಗಿ, ನಗರ ಮತ್ತು ಪಟ್ಟಣ ಪ್ರದೇಶಗಳತ್ತ ವಲಸೆ ಹೋಗಿ ಹೋಟೆಲ್ ಸೇರಿದಂತೆ ಇತರೆಡೆಗಳಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.

ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಬೇಕು
ಮಹಿಳೆಯರೂ ಸಹ ಬೆಂಗಳೂರು ಸೇರಿದಂತೆ ದೂರದ ಊರುಗಳಿಗೆ ಕೆಲಸಕ್ಕಾಗಿ ನಿತ್ಯ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಜಿಲ್ಲಾ ಕೇಂದ್ರವಾಗಿರುವ ಮಂಡ್ಯ ಸುತ್ತಮುತ್ತ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಬೇಕಾಗಿದೆ. ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಬ್ಬು, ರೇಷ್ಮೆ, ತೋಟಗಾರಿಕೆ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುವುದು, ಕೋಲ್ಡ್ ಸ್ಟೋರೇಜ್ ಘಟಕಗಳ ಸ್ಥಾಪನೆ, ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಫಿಜಿಯೋಥೆರಪಿ ಕಾಲೇಜುಗಳ ಸ್ಥಾಪನೆ ಸೇರಿದಂತೆ ಇತರೆ ಸೌಲಭ್ಯಗಳ ಬಗ್ಗೆ ಘೋಷಣೆ ಮಾಡಬೇಕಿದೆ.
ಕೋಲ್ಡ್ ಸ್ಟೋರೇಜ್ ನಿರ್ಮಾಣ ಒತ್ತಾಯ
ಮಂಡ್ಯ ಜಿಲ್ಲೆಯಲ್ಲಿ ರೈತರು ಬೆಳೆಯುವ ಹಣ್ಣು ಮತ್ತು ತರಕಾರಿಗಳನ್ನು ಸಂರಕ್ಷಣೆ ಮಾಡಲು ಹಾಗೂ ಬೆಲೆ ಕುಸಿತದ ಸಂದರ್ಭದಲ್ಲಿ ದಾಸ್ತಾನು ಮಾಡಲು ಎರಡು ಕಡೆ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಬೇಕು. ಅಂದರೆ ಕೆ.ಆರ್.ಪೇಟೆ ಮತ್ತು ಪಾಂಡವಪುರದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಬೇಕು ಎನ್ನುವುದು ನಿರೀಕ್ಷೆಯಾಗಿದೆ.
ಸಬ್ಸಿಡಿ ಘೋಷಿಸಲು ಒತ್ತಾಯ
ಮಂಡ್ಯ ಜಿಲ್ಲೆಯಲ್ಲಿ ರೈತರು ಹೆಚ್ಚು ಕಬ್ಬನ್ನು ಬೆಳೆಯುತ್ತಿದ್ದು, ಸಾವಯವ ಬೆಲ್ಲ ನಿರ್ಮಾಣದ ಘಟಕಗಳಿಗೆ ಉತ್ತೇಜನ ನೀಡಲು ಸಬ್ಸಿಡಿಯನ್ನು ಘೋಷಿಸಬೇಕು. ಜನರ ಆರೋಗ್ಯದ ದೃಷ್ಟಿಯಿಂದ ಕಲಬೆರಕೆಯಿಲ್ಲದ ಅಡುಗೆ ಎಣ್ಣೆ ತಯಾರಿಕಾ ಘಟಕ ಹಾಗೂ ಸ್ಥಳೀಯವಾಗಿ ಮಾರುಕಟ್ಟೆಯನ್ನು ಪ್ರೋತ್ಸಾಹಿಸಲು ಘಟಕ ತೆರೆಯುವ ಮೂಲಕ ನಿರುದ್ಯೋಗಿ ಯುವಕರಿಗೆ ಸಬ್ಸಿಡಿ ನೀಡಬೇಕು.
ಮಂಡ್ಯ ಜಿಲ್ಲೆಯ ಹಾಲು ಒಕ್ಕೂಟಕ್ಕೆ ಪ್ರತಿದಿನ ಎಂಟೂವರೆ ಲಕ್ಷ ಲೀಟರ್ ಹಾಲನ್ನು ರೈತರು ಸರಬರಾಜು ಮಾಡುತ್ತಾರೆ. ಒಂದು ಲಕ್ಷದ ಐದು ಸಾವಿರ ಕುಟುಂಬಗಳು, 1,277 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಜಿಲ್ಲೆಯಲ್ಲಿ 4 ಲಕ್ಷಕ್ಕೂ ಹೆಚ್ಚು ಜಾನುವಾರುಗಳು ಇವೆ. ಈ ಕಾರಣದಿಂದಾಗಿ ಮಂಡ್ಯ ಜಿಲ್ಲೆಯಲ್ಲಿ ಪಶು ಆಹಾರ ತಯಾರಿಕಾ ಘಟಕವನ್ನು ಮಂಜೂರು ಮಾಡಬೇಕು.
ಕೃಷಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು
ಮಂಡ್ಯ ಕೃಷಿ ಪ್ರಧಾನ ಜಿಲ್ಲೆಯಾಗಿರುವುದರಿಂದ ಕೃಷಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು. ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಮರುಜೀವ ನೀಡಬೇಕು. ಗಗನಚುಕ್ಕಿ ಜಲಪಾತ ಪ್ರದೇಶವನ್ನು ಅಭಿವೃದ್ಧಿಪಡಿಸಿ, ರೋಪ್‌ವೇ ನಿರ್ಮಿಸುವುದು. ಶ್ರೀರಂಗಪಟ್ಟಣದ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಮಾಡಬೇಕು.
ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು
ಶ್ರೀರಂಗಪಟ್ಟಣ ಕಾವೇರಿ ನದಿಯುದ್ದಕ್ಕೂ ಸೋಪಾನಕಟ್ಟೆ ನಿರ್ಮಾಣ, ನದಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ರವಾಸೋದ್ಯಮಕ್ಕೆ ಪೂರಕವಾಗಿ ಹುಲಿಕೆರೆ ಸುರಂಗ ನಾಲೆ ಅಭಿವೃದ್ದಿಯಾಗಬೇಕು. ಕೃಷ್ಣರಾಜಸಾಗರ ಬೃಂದಾವನ (ಕೆಆರ್‌ಎಸ್) ಅಭಿವೃದ್ಧಿ, ರಂಗನತಿಟ್ಟು, ಗೆಂಡೆಹೊಸಹಳ್ಳಿ, ಕೊಕ್ಕರೆ ಬೆಳ್ಳೂರು ಪಕ್ಷಿಧಾಮಗಳ ಅಭಿವೃದ್ಧಿ, ಮಳವಳ್ಳಿ ತಾಲೂಕು ಧನಗೂರು ಬಳಿಯ ಶಿಂಷಾ ಜಲಪಾತ ಅಭಿವೃದ್ಧಿ, ಕೆರೆತೊಣ್ಣೂರು ಕೆರೆಯಲ್ಲಿ ಬೋಟಿಂಗ್, ಪ್ರವಾಸಿ ಸೌಲಭ್ಯಗಳನ್ನು ಕಲ್ಪಿಸಬೇಕು.
ಅರೆತಿಪ್ಪೂರು ಸೇರಿದಂತೆ ಜಿಲ್ಲೆಯಲ್ಲಿನ ಜೈನ ಸ್ಮಾರಕಗಳ ಅಭಿವೃದ್ಧಿಗೆ ಅನುದಾನ ನೀಡಬೇಕು. ಮುತ್ತತ್ತಿ, ಬಲಮುರಿ, ಎಡಮುರಿ ಪ್ರದೇಶಗಳಲ್ಲಿ ಪ್ರವಾಸಿ ಸೌಕರ್ಯಗಳು, ಶ್ರೀರಂಗಪಟ್ಟಣದ ಕರಿಘಟ್ಟ, ಪಾಂಡವಪುರದ ಕುಂತಿಬೆಟ್ಟ, ಮಳವಳ್ಳಿ ತಾಲೂಕು ಬಸವನಬೆಟ್ಟದಲ್ಲಿ ಚಾರಣಕ್ಕೆ ಪೂರಕ ಸವಲತ್ತುಗಳು ಕಲ್ಪಿಸಬೇಕು ಎನ್ನುವುದು ಇಲ್ಲಿನ ಜನರ ನಿರೀಕ್ಷೆಯಾಗಿದೆ.












Click it and Unblock the Notifications