ಮಂಡ್ಯ: ಮಾನಸಿಕ ಅಸ್ವಸ್ಥನಿಗೆ ಹೊಸ ರೂಪ ಕೊಟ್ಟ ಕೆ.ಎಂ.ದೊಡ್ಡಿ ಪೊಲೀಸರು
ಮಂಡ್ಯ, ಜುಲೈ 13: ಮಾನಸಿಕ ಅಸ್ವಸ್ಥನಾಗಿ ರಸ್ತೆಯಲ್ಲಿ ಓಡಾಡುತ್ತಿದ್ದ ಯುವಕನಿಗೆ ಪೊಲೀಸರು ಹೊಸ ಉಡುಪು ತೊಡಿಸಿ, ಉಪಚರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರಭುಸ್ವಾಮಿ ಮತ್ತು ಅರುಣ್ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಕೆ.ಎಂ.ದೊಡ್ಡಿ ಠಾಣಾ ವ್ಯಾಪ್ತಿಯ ಎಚ್.ಹೊಸಹಳ್ಳಿ ಗ್ರಾಮದ ಬಳಿ ಗಸ್ತಿನಲ್ಲಿದ್ದ ವೇಳೆ ಅದೇ ಗ್ರಾಮದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಗಮನಿಸಿದ್ದಾರೆ. ಈತನ ಬಗ್ಗೆ ಸ್ಥಳಿಯರನ್ನು ವಿಚಾರಣೆ ಮಾಡಿದಾಗ ಎಚ್.ಹೊಸಹಳ್ಳಿ ಗ್ರಾಮದ ಯುವಕನಾಗಿದ್ದು ಈತ ಹುಟ್ಟಿನಿಂದಲೇ ಮಾನಸಿಕ ಅಸ್ವಸ್ಥ ಎಂಬ ಕಾರಣಕ್ಕೆ ಆತನ ಕುಟುಂಬದವರು ಪೋಷಣೆ ಮಾಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಮಾಹಿತಿ ಸಿಕ್ಕಿತು.

ತಕ್ಷಣ ಪ್ರಭುಸ್ವಾಮಿ ಮತ್ತು ಅರುಣ್ ಅವರು ಆ ಯುವಕನಿಗೆ ಬಿಸ್ಕೇಟ್, ಊಟ, ನೀರು ಕೊಡಿಸಿ ಬಳಿಕ ಸಮಾಜ ಸೇವಕರಾದ ಹಲಗೂರಿನ ಲಿಂಗಪಟ್ಟಣ ಗ್ರಾಮದ ಮುಖ್ಯಶಿಕ್ಷಕ ಸುಂದ್ರಪ್ಪ ಮತ್ತು ಕ್ಷೌರಿಕ ನಾಗರಾಜು ಅವರನ್ನು ಕರೆಸಿ ತಲೆಕೂದಲು ತೆಗೆಯಲು ಮುಂದಾದರು. ಈ ವೇಳೆ ಕೆಲಕಾಲ ಆತ ವಿರೋಧ ಮಾಡಿದ್ದಾನೆ. ಆದರೆ ಎಸ್.ಐ.ಹಾಗಲಹಳ್ಳಿ ಮತ್ತು ಎಚ್.ಹೊಸಹಳ್ಳಿ ಗ್ರಾಮದ ಸಾರ್ವಜನಿಕರ ಸಹಾಯದೊಂದಿಗೆ ತಲೆ ಕೂದಲನ್ನು ತೆಗೆದು ನಾಲೆಯಲ್ಲಿ ಸ್ಥಾನ ಮಾಡಿಸಿ ಹೊಸಬಟ್ಟೆ ತೊಡಿಸಿ ಊಟ ಮಾಡಿಸಿದ ನಂತರ ಅವರ ಸಂಬಂಧಿಕರೊಡನೆ ಮನೆಗೆ ಕಳುಹಿಸಿದ್ದಾರೆ.
ಹೀಗೆ ಒಂದಲ್ಲ ಒಂದು ಸಮಾಜ ಸೇವೆಯಲ್ಲಿ ತೊಡಗುವ ಪ್ರಭುಸ್ವಾಮಿ ಪರಿಸರ ಸಂರಕ್ಷಣೆಯಲ್ಲಿ ಸದಾ ಮುಂದು. ಇವರು ರಕ್ತದಾನ ಶಿಬಿರ ಕಾರ್ಯಕ್ರಮಗಳಲ್ಲಿ ಮುಂಚೂಣಿಯಾಗಿರುತ್ತಾರೆ. ಕಾರ್ಯಕ್ರಮ ಆಯೋಜಕರಿಗೆ ಕೈಜೋಡಿಸುತ್ತಾ ಗಿಡ ನೆಡುವ ಮೂಲಕ ಗಿಡ ನೆಡು ಮರ ಮಾಡು ಎಂಬ ಆಂದೋಲನದ ಅಡಿಯಲ್ಲಿ ಪ್ರಕೃತಿಗೆ ತನ್ನದೇಯಾದ ಕೊಡುಗೆ ನೀಡುತ್ತಾ ಬಂದಿದ್ದಾರೆ. ಹೀಗೆ ಅನೇಕ ಸಮಾಜ ಮುಖಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಇವರ ಸಾಮಾಜಿಕ ಕಾರ್ಯಕ್ಕೆ ಸಾರ್ವಜನಿಕರು ಈಗ ಎಲ್ಲೆಡೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಇಲಾಖೆ ಮೇಲಾಧಿಕಾರಿಗಳು ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರಭುಸ್ವಾಮಿ 'ನಾನೊಬ್ಬ ಭಾರತೀಯ ಪ್ರಜೆ. ನನ್ನ ಕೈಲಾದ ಸೇವೆಗಳನ್ನು ಮಾಡಬೇಕೆಂಬುದೇ ನನ್ನ ಹಂಬಲ. ನನ್ನ ಪೊಲೀಸ್ ವೃತ್ತಿಯೊಂದಿಗೆ ನಾನು ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗುತ್ತೇನೆ' ಎಂದಿದ್ದಾರೆ.












Click it and Unblock the Notifications