ಕೆಆರ್‌ಎಸ್‌ಗೆ ಭಾರಿ ನೀರು; 100 ಅಡಿ ತಲುಪಿದ ನೀರಿನ ಮಟ್ಟ
ಮಂಡ್ಯ, ಆಗಸ್ಟ್ 09 : ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆ. ಆರ್. ಎಸ್. ಜಲಾಶಯಕ್ಕೆ ಭಾರಿ ಪ್ರಮಾಣ ನೀರು ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟ 100 ಅಡಿ ತಲುಪಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಕೇವಲ ಒಂದೂವರೆ ದಿನದಲ್ಲಿ ಕೆ.ಆರ್. ಎಸ್. ಜಲಾಶಯದ ನೀರಿನ ಮಟ್ಟ 10 ಅಡಿ ಏರಿಕೆಯಾಗಿದೆ. ಜಲಾಶಯದಿಂದ ಸದ್ಯ 443 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಕೆ. ಆರ್. ಎಸ್. ಜಲಾಶಯದ ಗರಿಷ್ಟ ಮಟ್ಟ 124.80 ಅಡಿ. ಶುಕ್ರವಾರ ಸಂಜೆ ಜಲಾಶಯದಲ್ಲಿ 100.30 ಅಡಿ ನೀರಿನ ಸಂಗ್ರಹವಿದೆ. ಗುರುವಾರ 91 ಅಡಿ ಇದ್ದ ನೀರಿನ ಮಟ್ಟ, ಇಂದು ನೂರಕ್ಕೆ ಏರಿಕೆಯಾಗಿದೆ.

ಕೊಡಗಿನಲ್ಲಿ ಭಾರಿ ಮಳೆಯಾಗುತ್ತಿದೆ. ಹಾಸನದ ಗೊರೂರಿನಲ್ಲಿರುವ ಹೇಮಾವತಿ ಜಲಾಶಯದಿಂದ ನೀರನ್ನು ಹೊರಬಿಡಲಾಗಿದೆ. ಇದರಿಂದಾಗಿ ಜಲಾಶಯಕ್ಕೆ ಶುಕ್ರವಾರ ಮಧ್ಯಾಹ್ನ 63, 211 ಕ್ಯುಸೆಕ್ ನೀರು ಹರಿದು ಬರುತ್ತಿತ್ತು.
ಹಾರಂಗಿ ಜಲಾಶಯದಿಂದ 30 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗಿದೆ. ಆದ್ದರಿಂದ, ಸಂಜೆಯ ವೇಳೆಗೆ ಕೆ. ಆರ್. ಎಸ್. ಜಲಾಶಯದ ಒಳ ಹರಿವಿನ ಪ್ರಮಾಣ 80 ಸಾವಿರಕ್ಕೆ ಏರಿಕೆಯಾಗುವ ನಿರೀಕ್ಷೆ ಇತ್ತು.
ಕಾವೇರಿ ಕೊಳ್ಳದ ಜಲಾಶಯಗಳ ಪೈಕಿ ಕೆ. ಆರ್. ಎಸ್. ಪ್ರಮುಖವಾದದ್ದು. ಮಂಡ್ಯ, ಮೈಸೂರು ಮತ್ತು ಬೆಂಗಳೂರು ಜಲಾಶಯದ ಮೇಲೆ ಅವಲಂಬಿತವಾಗಿವೆ. ಬೆಂಗಳೂರಿಗೆ ಕುಡಿಯುವ ನೀರನ್ನು ಸಹ ಇಲ್ಲಿಂದಲೇ ಪೂರೈಕೆ ಮಾಡಲಾಗುತ್ತದೆ.












Click it and Unblock the Notifications