Mahakumbha Mela : ಮಂಡ್ಯ: ಮಹಾಕುಂಭಮೇಳಕ್ಕೆ ಸರ್ವ ಸಿದ್ಧತೆ ಹೇಗಿದೆ? ಇಲ್ಲಿದೆ ವಿವರ
ಮಂಡ್ಯ, ಅಕ್ಟೋಬರ್, 10: ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಅಂಬಿಗರಹಳ್ಳಿ- ಪುರ- ಸಂಗಾಪುರ ಗ್ರಾಮಗಳ ಕಾವೇರಿ ನದಿ ಪಾತ್ರದಲ್ಲಿ ಅಕ್ಟೋಬರ್ 13 ರಿಂದ 16 ರವರೆಗೆ ಅರ್ಥಪೂರ್ಣವಾಗಿ ಮಹಾಕುಂಭಮೇಳ ನಡೆಯಲಿದೆ. ಮಹಾಕುಂಭ ಮೇಳ ಆಚರಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಚಿವ ಡಾ.ಕೆ.ಸಿ ನಾರಾಯಣಗೌಡ ತಿಳಿಸಿದರು.
ಇಂದು ಕೆ.ಆರ್.ಪೇಟೆಯ ಭೂ ವರಹನಾಥ ಸ್ವಾಮಿ ದೇವಸ್ಥಾನದ ಹತ್ತಿರ ಜಲ ಸಾಹಸ ಕ್ರೀಡಾ ಚಟುವಟಿಕೆಗೆ ಚಾಲನೆ ನೀಡಲಾಗಿತ್ತು. ನಂತರ ಮಾತನಾಡಿದ ಅವರು ದಕ್ಷಿಣ ಕರ್ನಾಟಕದಲ್ಲಿ ಮಹಾ ಕುಂಭಮೇಳವನ್ನು ಮಾಡಬೇಕು ಎನ್ನುವ ತೀರ್ಮಾನವನ್ನು ಮಾಡಲಾಯಿತು. ಶ್ರೀ ಡಾ.ನಿರ್ಮಲಾನಂದ ಮಹಾಸ್ವಾಮಿಗಳು, ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಸಮುಖದಲ್ಲಿ ಸಭೆ ನಡೆಸಿ ಇದನ್ನು ತೀರ್ಮಾನಿಸಲಾಯಿತು. ಮಹಾ ಕುಂಭಮೇಳವನ್ನು ಯಶಸ್ವಿಯಾಗಿ ಆಚರಣೆ ಮಾಡಲು ಎಲ್ಲರ ಸಹಕಾರ ಹೆಚ್ಚಿನ ರೀತಿಯಲ್ಲಿ ದೊರೆಯುತ್ತಿದೆ ಎಂದು ಹೇಳಿದರು.
ವಾರಾಣಸಿಗೆ ಹೋದ ಸಂದರ್ಭದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಕುಂಭಮೇಳ ಆಚರಿಸುವ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಅವರಿಗೆ ತಿಳಿಸಲಾಯಿತು. ಅವರು ಕೂಡ ಕುಂಭಮೇಳದಲ್ಲಿ ಭಾಗವಹಿಸುವುದಾಗಿ ತುಂಬು ಹೃದಯದಿಂದ ತಿಳಿಸಿದ್ದಾರೆ. ಕುಂಭಮೇಳ ಆಯೋಜನೆ ಸಂಬಂಧ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಗಿದ್ದು, ದಾನಿಗಳು ಈಗಾಗಲೇ 600 ಕ್ವಿಂಟಲ್ ಅಕ್ಕಿ, 25,000 ತೆಂಗಿನಕಾಯಿ ಸೇರಿದಂತೆ ಎಣ್ಣೆ, ತುಪ್ಪ, ತರಕಾರಿ ಇನ್ನಿತರೆ ಆಹಾರ ಪದಾರ್ಥಗಳನ್ನು ಸಹ ನೀಡಿದ್ದಾರೆ ಎಂದರು.

ಅಕ್ಟೋಬರ್ 15ರಂದು ಸಾಧು, ಸಂತರ ಸಂಗಮ
ಮಹಾಕುಂಭ ಮೇಳವನ್ನು ಆಚರಣೆ ಕುರಿತು ಮಾನ್ಯ ಮುಖ್ಯ ಮಂತ್ರಿಗಳಿಗೆ ತಿಳಿಸಿದಾಗ ಬಹಳ ಖುಷಿಯಿಂದ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡಿದ್ದಾರೆ. ಅಕ್ಟೋಬರ್ 14ರಂದು ಧರ್ಮಸ್ಥಳದ ಧರ್ಮಾಕಾರಿಗಳಾದ ವಿರೇಂದ್ರ ಹೆಗ್ಗಡೆ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅಕ್ಟೋಬರ್ 15ರಂದು ಸಾಧು, ಸಂತರ ಸಂಗಮ ನಡೆಯಲಿದೆ.

ಮೆರಗು ತರುವ ಬಗೆ ಬಗೆಯ ಕಾರ್ಯಕ್ರಮಗಳು
ಅಕ್ಟೋಬರ್ 16ರಂದು ಕುಂಭ ಸ್ನಾನ, ವೇದಿಕೆ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಕುಂಭಮೇಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಕುಂಭಸ್ನಾನ, ಸಾಧು ಸಂತರ ಸಮಾವೇಶ, ವೇದಿಕೆ ಕಾರ್ಯಕ್ರಮ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸಂಗಮೇಶ್ವರರು ತಪಸ್ಸು ಮಾಡಿದ ಸ್ಥಳ ಇದು
ಶ್ರೀ ಕ್ಷೇತ್ರ ಚಂದ್ರವನಾಶ್ರಮದ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಬಹಳಷ್ಟು ಸ್ಥಳಗಳಲ್ಲಿ ಗುಪ್ತಗಾಮಿನಿ ನದಿಯಿಂದ ತ್ರಿವೇಣಿ ಸಂಗಮ ಇದೆ. ಆದರೆ ಅಂಬಿಗರಹಳ್ಳಿಯಲ್ಲಿ ಮೂರು ನದಿಗಳು ಸೇರುವುದನ್ನು ನೋಡಬಹುದಾಗಿದ್ದು, ಇದು ವಿಶೇಷ ಆಗಿದೆ. ಸಂಗಮೇಶ್ವರರು ಈ ಸ್ಥಳದಲ್ಲಿ ತಪಸ್ಸು ಮಾಡಿದ್ದಾರೆ. ಸಿದ್ಧಲಿಂಗೇಶ್ವರ ಯತಿಗಳು ಹಾಗೂ ಮಹದೇಶ್ವರರು ಬಂದು ಹೋಗಿರುವ ಪವಿತ್ರ ಸ್ಥಳವಿದು. 2013ರಲ್ಲಿ ಸಣ್ಣ ಪ್ರಮಾಣದಲ್ಲಿ ಕುಂಭ ಮೇಳ ನಡೆಸಲಾಗಿತ್ತು. ಈ ಬಾರಿ ವಿಜೃಂಬಣೆಯಿಂದ ಆಚರಿಸಿ, ದೇಶಕ್ಕೆ ತ್ರಿವೇಣಿ ಸಂಗಮ ಪರಿಚಯಿಸಲಾಗುತ್ತಿದೆ ಎಂದರು.

3 ದಿನಗಳ ಕಾರ್ಯಕ್ರಮಗಳ ಪಟ್ಟಿ
ಕುಂಭ ಇಡುವುದಕ್ಕೆ ಕುಂಬೇಶ್ವರ ಅಂತ ಕರೆಯಲಾಗುತ್ತದೆ. ವಿವಿಧ ಕಡೆಯಿಂದ ಸಾಧು ಸಂತರರು ಸೇರಿದಂತೆ ಬಹಳಷ್ಟು ಜನರು ಬರುತ್ತಿದ್ದಾರೆ. ಈ ಭಾಗದಲ್ಲಿ ಎಲ್ಲಾ ಸಾಧು ಸಂತರಿಗೆ ಆಹ್ವಾನ ನೀಡಲಾಗಿದೆ. ನಾಡು, ದೇಶಕ್ಕಾಗಿ, ವಿಶ್ವದ ಸುಖ, ಶಾಂತಿ ಸಮೃದ್ಧಿಯಾಗಲಿ ಎಂಬುವುದೇ ಇದರ ಉದ್ದೇಶ ಆಗಿದೆ. ಮಹದೇಶ್ವರನನ್ನು ಪ್ರತಿಷ್ಠಾಪನೆ ಮಾಡಿ, ಅಕ್ಟೋಬರ್ 14ರಂದು ಸಂಜೆಯಿಂದ, ಅಕ್ಟೋಬರ್ 15, 16ರ ಬೆಳಗ್ಗೆವರೆಗೂ ಕುಂಭಮೇಳ ಸಂಬಂಧಪಟ್ಟಂತೆ ಕಳಸ ಪೂಜೆಗಳು ನಡೆಯುತ್ತವೆ. ಅಲ್ಲದೆ ಹೋಮಗಳು ಮತ್ತು ಪ್ರತಿಯೊಂದು ಪೂಜೆಗಳನ್ನು ಮಾಡುವಂತಹ ಕಾರ್ಯಕ್ರಮಗಳು ಕೂಡ ನಡೆಯಲಿವೆ ಎಂದರು
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಶೀಲ್ದಾರ್ ರೂಪಾ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications