ಹೋಮ ಕುಂಡದ ಬೆಂಕಿಯಿಂದ ಅನಾಹುತ: ಶ್ರೀರಂಗಪಟ್ಟಣದಲ್ಲಿ ಜೇನು ದಾಳಿಯಿಂದ ಪ್ರವಾಸಿಗರ ಸ್ಥಿತಿ ಗಂಭೀರ
ಮಂಡ್ಯ, ಮೇ 23: ಶ್ರೀರಂಗಪಟ್ಟಣ ಸಮೀಪದ ಕಾವೇರಿ ಸಂಗಮ ಬಳಿಯ ಕಾವೇರಿ ನದಿ ದಡದಲ್ಲಿ ಪ್ರವಾಸಿಗರು ಪೂಜೆ ಸಲ್ಲಿಸುವ ವೇಳೆ ಜೇನುಹುಳು ದಾಳಿ ನಡೆಸಿದೆ. ಘಟನೆಯಲ್ಲಿ ಮೂರು ಮಂದಿ ವೃದ್ಧರ ಸ್ಥಿತಿ ಗಂಭೀರವಾಗಿದ್ದು ಸುಮಾರು 10 ಮಂದಿ ಗಾಯಗೊಂಡಿದ್ದಾರೆ.
ಬೆಂಗಳೂರು ಮೂಲದ ಸುಮಾರು 15ಕ್ಕೂ ಹೆಚ್ಚು ಮಂದಿ ಟೆಂಪೋ ಟ್ರಾವೆಲರ್‌ನಲ್ಲಿ ಆಗಮಿಸಿ ಕಾವೇರಿ ನದಿ ತಟದಲ್ಲಿ ಪೂಜಾಕೈಂಕರ್ಯಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ವೇಳೆ ಹೋಮ ಕುಂಡಕ್ಕೆ ಬೆಂಕಿ ಹಾಕಲಾಗಿದೆ. ಹೆಚ್ಚಿನ ಪ್ರಮಾಣದ ಹೊಗೆಯಿಂದಾಗಿ ಮರದಲ್ಲಿ ಕಟ್ಟಿದ್ದ ಜೇನುಗೂಡಿನಿಂದ ಜೇನು ಹುಳುಗಳು ಎದ್ದು ಜನರಿಗೆ ಕಚ್ಚಲು ಆರಂಭಿಸಿದೆ. ಎಲ್ಲರೂ ಮುಸುಕು ಹಾಕಿಕೊಂಡು ಸಂಗಮದಲ್ಲಿ ದಿಕ್ಕಾಪಾಲಾಗಿ ಓಡಿದರೂ ಬಿಡದೇ ಜೇನುಹುಳುಗಳು ಸಿಕ್ಕ ಸಿಕ್ಕವರಿಗೆ ಕಚ್ಚಿ ಗಾಯಗೊಳಿಸಿವೆ.

ನೀರಲ್ಲಿ ಅವಿತರು ಬಿಡದ ಜೇನು
ಕೆಲವರು ಜೇನುಹುಳುಗಳಿಂದ ರಕ್ಷಣೆಗಾಗಿ ಕಾವೇರಿ ನದಿಗಿಳಿದು ನೀರಲ್ಲಿ ಮುಳುಗಿ ಅವಿತುಕೊಂಡಿದ್ದರು. ಆದರೂ ಬಿಡದ ಜೇನುಹುಳುಗಳ ದಾಳಿ ನಡೆಸಿದವು. ಹೀಗಾಗಿ ಪ್ರವಾಸಿಗರು ಸ್ಥಳದಿಂದ ಪರಾರಿಯಾಗಲು ಆಲೋಚಿಸಿ ಹುಳುಗಳಿಂದ ಕಚ್ಚಿಸಿಕೊಳ್ಳುತ್ತಲೇ ತಮ್ಮ ವಾಹನದ ಮೂಲಕ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬಂದು ಸೇರಿದ್ದಾರೆ.
ಜೇನುಹುಳುಗಳ ದಾಳಿಯಿಂದ ತಲೆ, ಕೈಕಾಲುಗಳು ಊದಿಸಿಕೊಂಡು ಬಂದ ರೋಗಿಗಳಿಗೆ ಶ್ರೀರಂಗಪಟ್ಟಣ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮಾರುತಿ ನೇತೃತ್ವದಲ್ಲಿ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಬೆಂಗಳೂರಿನ ಮೂಲದ ಸಂತೋಷ್ ಕುಮಾರ್, ರಾಜೇಶ್, ಭದ್ರಿನಾಥ್, ಭರಣಿ, ಲಕ್ಷ್ಮಿನಾರಾಯಣ್, ಸಂತೋಷ್ ಕುಮಾರ್, ಪ್ರಸಾದ್, ದೀಪಕ್, ಅಶೋಕ್, ರಾಮಾನುಜ ಸೇರಿದಂತೆ ಮೂರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸುಮಾರು 10 ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಪೂಜೆ ಮಾಡಲು ಬಂದಿದ್ದ ಅರ್ಚಕರಿಗೂ ಜೇನುಹುಳುಗಳ ದಾಳಿಗೆ ಒಳಗಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಎಲ್ಲರಿಗೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆತಿರುವುದರಿಂದ ಹೆಚ್ಚಿನ ಅನಾಹುತ ತಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.












Click it and Unblock the Notifications