HD Kumaraswamy: ಎಚ್‌ಡಿಕೆ ಮಂಡ್ಯ ಸ್ಪರ್ಧೆ: ಒಂದೆಡೆ ಒತ್ತಾಯ ಇನ್ನೊಂದೆಡೆ ವಿರೋಧ!
ಮಂಡ್ಯ ಮಾರ್ಚ್ 25: ಕರ್ನಾಟಕ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಆದರಿನ್ನೂ ಮಂಡ್ಯದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಹೆಸರು ಘೋಷಣೆಯಾಗಿಲ್ಲ. ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧಿಸುವುದು ಖಚಿತವಾಗಿದ್ದರೂ ಇದಕ್ಕೆ ಕಾರ್ಯಕರ್ತರು ಅಪಸ್ವರ ಎತ್ತಿದ್ದಾರೆ.
ಹೌದು... ಎಚ್‌ಡಿ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧಿಸಲು ಒಂದೆಡೆ ಒತ್ತಾಯ ಕೇಳಿ ಬಂದಿದೆ, ಇನ್ನೊಂದೆಡೆ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಮಂಡ್ಯದಿಂದ ಸ್ಪರ್ಧಿಸುವುದು ಎಚ್‌ಡಿಕೆಗೆ ಇಕ್ಕಟ್ಟಿಗೆ ಸಿಲುಕಿಸಿದೆ. ಮತ್ತೊಂದೆಡೆ ಮಂಡ್ಯ ಟಿಕೆಟ್ ಕೈತಪ್ಪಿದ್ದರಿಂದ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರಾ ಎನ್ನುವ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ.

ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡಿವೆ. ಮೈತ್ರಿ ಒಪ್ಪಂದಂತೆ ಜೆಡಿಎಸ್‌ಗೆ ಮೂರು ಕ್ಷೇತ್ರಗಳನ್ನು ಸ್ಪರ್ಧಿಸಲು ಬಿಟ್ಟುಕೊಡಲಾಗಿದೆ. ಹೀಗಾಗಿ ಮಂಡ್ಯ ಹಾಲಿ ಸಂಸದೆ ಸುಮಲತಾಗೂ ಬಿಜೆಪಿ ಟಿಕೆಟ ಕೈತಪ್ಪಿದೆ.
ಆದರೆ ಮಂಡ್ಯದಿಂದ ಸ್ಪರ್ಧಿಸಲು ಎಚ್‌ಡಿ ಕುಮಾರಸ್ವಾಮಿಗೆ ಹೊಸ ಬಿಕ್ಕಟ್ಟು ಎದುರಾಗಿದೆ. ಮಂಡ್ಯ ಅಖಾಡಕ್ಕಿಳಿಯಲು ಮಂಡ್ಯದ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಭಾನುವಾರ ಬೆಂಗಳೂರು ಜೆಪಿ ನಗರ ನಿವಾಸಕ್ಕೆ ತೆರಳಿದ ಮಂಡ್ಯ ಕಾರ್ಯಕರ್ತರು ಎಚ್ಡಿಕೆ ಸ್ಪರ್ಧೆಗೆ ಒತ್ತಾಯಿಸಿದ್ದಾರೆ. ಆದರೆ ಈ ವೇಳೆ ಚನ್ನಪ್ಪಟ್ಟ ಮುಖಂಡರನ್ನು ಸಂಪರ್ಕಿಸಿ ನಿರ್ಧಾರ ತಿಳಿಸುವುದಾಗಿ ಹೇಳಿದ್ದರು. ಆದರೆ ಚನ್ನಪಟ್ಟಣ ಕಾರ್ಯಕರ್ತರು ಸ್ಪರ್ಧಿಸಬಾರದೆಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಎಚ್‌ಡಿ ಕುಮಾರಸ್ವಾಮಿಗೆ ಇದೊಂದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಚೆನ್ನೈನಲ್ಲಿ ಹೇದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಎಚ್‌ಡಿ ಕುಮಾರಸ್ವಾಮಿ ಭಾನುವಾರ ತಮ್ಮ ಬೆಂಗಳೂರು ನಿವಾಸಕ್ಕೆ ಹಿಂದುರುಗಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮಂಡ್ಯದಲ್ಲಿ ನನಗೆ ವಿಶೇಷ ಪ್ರೀತಿ ವಿಶ್ವಾಸ ಸಿಕ್ಕಿದೆ. ನಾನು ಈ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ. ನನಗೆ ಈವರೆಗೆ ಮೂರು ಬಾರಿ ಹೃದಯದ ಶಸ್ತ್ರಚಿಕಿತ್ಸೆ ಆಗಿದೆ. ಆರೋಗ್ಯದ ಜೊತೆಗೆ ಪಕ್ಷದ ಕೆಲಸ, ಜನರ ಸೇವೆ ಮಾಡಬೇಕಿದೆ. ನಿಮಗೆ ನಿರಾಶೆ ಮಾಡುವುದಿಲ್ಲ' ಎಂದರು.
ಆದರೆ ಇತ್ತ ಚನ್ನಪಟ್ಟಣ ಬೆಂಬಲಿಗರು ಮಾತ್ರ ಮಂಡ್ಯದಿಂದ ಸ್ಪರ್ಧಿಸಬೇಡಿ ಎಂದು ಪಟ್ಟು ಹಿಡಿದಿದ್ದಾರೆ. ನೀವು ಚನ್ನಪಟ್ಟಣ ಬಿಟ್ಟು ಲೋಕಸಭೆಗೆ ಸ್ಪರ್ಧೆ ಮಾಡಿದರೆ, ರಾಮನಗರ ಕ್ಷೇತ್ರ ನಮ್ಮ ಕೈತಪ್ಪಿ ಹೋಗುತ್ತದೆ ಎಂದು ಚನ್ನಪಟ್ಟಣ ಕಾರ್ಯಕರ್ತರು ಕುಮಾರಸ್ವಾಮಿ ಬಳಿ ಮನವಿ ಮಾಡಿದ್ದಾರೆ.
ಮಂಡ್ಯದಿಂದ ನೀವು ಸ್ಪರ್ಧಿಸಿದರೆ ರಾಮನಗರ ಕಾರ್ಯಕರ್ತರಲ್ಲಿ ಉತ್ಸಾಹ ಕಡಿಮೆಯಾಗುತ್ತದೆ. ಜೊತೆಗೆ ಚನ್ನಪ್ಪಟ್ಟಣವನ್ನು ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳುವುದು ಕಷ್ಟ ಎಂದು ಬೆಂಬಲಿಗರು ಒತ್ತಾಯಿಸಿದ್ದಾರೆ. ಅದಾಗ್ಯೂ ದಳ ಪತಿಗಳು ಚನ್ನಪಟ್ಟಣ ಕಾರ್ಯಕರ್ತರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಮಂಡ್ಯ ಹಾಗೂ ರಾಮನಗರ ಕಾರ್ಯಕರ್ತರನ್ನು ಮನವೊಲಿಸಲಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಇತ್ತ ಸುಮಲತಾ ಅವರ ಮುಂದಿನ ನಡೆ ಏನು ಎನ್ನುವುದು ಕುತೂಹಲ ಮೂಡಿಸಿದೆ. ಈ ಹಿಂದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದ ಅವರು ಈಗ ಬಿಜೆಪಿಗೆ ಬೆಂಬಲ ಸೂಚಿಸಿದರು. ಆದರೆ ಕಮಲ ದಳ ಮಂಡ್ಯ ಮನೆ ಮಗಳ ಕೈ ಹಿಡಿಯಲಿಲ್ಲ. ಸಮಾಧಾನಕ್ಕಾಗಿ ಯಾವೊಂದು ಸ್ಥಾನ ಕೊಡುವುದಾಗಿಯೂ ಬಿಜೆಪಿ ಹೇಳಿದಂತೆ ಕಾಣಿಸುತ್ತಿಲ್ಲ. ಹೀಗಾಗಿ ಸುಮಲತಾ ಮುಂದಿನ ನಡೆ ಏನು ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.












Click it and Unblock the Notifications