ಮಂಡ್ಯದಲ್ಲಿ ಸರ್ಕಾರಿ ನೌಕರರ ಮುಷ್ಕರ, ಬೈಕ್ ರ್ಯಾಲಿ: ಸಾರ್ವಜನಿಕರ ಪರದಾಟ
ಸರ್ಕಾರಿ ನೌಕರರ ಮುಷ್ಕರದ ಬಗ್ಗೆ ತಿಳಿಯದೇ ಸರ್ಕಾರಿ ಕಚೇರಿಗಳಿಗೆ ಆಗಮಿಸಿದ್ದ ಮಂಡ್ಯ ಜಿಲ್ಲೆಯ ಸಾರ್ವಜನಿಕರು ನೌಕರರಿಲ್ಲದೆ ಪರದಾಡಿದರು. ತುರ್ತು ಕೆಲಸದ ಮೇಲೆ ಬಂದಿದ್ದವರು ನೌಕರರು ಸಿಗದೆ ಪರಿತಪಿಸಿದರು.
ಮಂಡ್ಯ, ಮಾರ್ಚ್ 1: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಹಾಗೂ ತಾಲೂಕು ಯೋಜನಾ ಶಾಖೆಗಳ ಚುನಾಯಿತ ಪ್ರತಿನಿಧಿಗಳು ಹಾಗೂ ವೃಂದ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳ ಕರೆಯ ಮೇರೆಗೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಯಿತು. ಈ ಸಮಯದಲ್ಲಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ, ತಾಲೂಕು ಕಚೇರಿ ಸೇರಿದಂತೆ ಬಹುತೇಕ ಎಲ್ಲಾ ಕಚೇರಿಗಳ ಬಾಗಿಲು ಮುಚ್ಚಿದ್ದವು.
ಸರ್ಕಾರಿ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಮನೆಯಲ್ಲೇ ಉಳಿದಿದ್ದವು. ನೌಕರರಿಲ್ಲದೆ ಕಚೇರಿಗಳು ಬಿಕೋ ಎನ್ನುತ್ತಿದ್ದವು. ಕಚೇರಿ ಕೆಲಸಗಳಿಗಾಗಿ ಆಗಮಿಸಿದ್ದ ಸಾರ್ವಜನಿಕರು ನೌಕರರಿಲ್ಲದೆ ಪರದಾಡಿದರು. ತುರ್ತು ಕೆಲಸದ ಮೇಲೆ ಬಂದಿದ್ದವರು ನೌಕರರು ಸಿಗದೆ ಪರಿತಪಿಸಿದರು. ಸರ್ಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರದ ಬಿಸಿ ಸ್ವಲ್ಪ ಜೋರಾಗಿಯೇ ಜನರನ್ನು ತಟ್ಟಿತ್ತು.

ರಾಜ್ಯಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಬೈಕ್ ರ್ಯಾಲಿ ಮೂಲಕ ಎಲ್ಲಾ ಕಚೇರಿಗಳ ಬಳಿಗೆ ಹೋಗಿ ಪರಿಶೀಲನೆ ನಡೆಸಿದರು. ಬಾಗಿಲು ತೆರೆದು ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರನ್ನು ಹೊರಗೆ ಕಳುಹಿಸಿ ಕಚೇರಿಗಳನ್ನು ಬಂದ್ ಮಾಡಿಸಿದರು.
ಮಿಮ್ಸ್ ಹೊರರೋಗಿಗಳ ವಿಭಾಗದಲ್ಲಿ ಎಂದಿನಂತೆ ಸೇವೆ
ಸರ್ಕಾರಿ ನೌಕರರ ಮುಷ್ಕರದ ನಡುವೆ ಮಿಮ್ಸ್ ಆಸ್ಪತ್ರೆಯ ಹೊರರೋಗಿಗಳ ವಿಭಾಗ ಎಂದಿನಂತೆ ಕಾರ್ಯಚಟುವಟಿಕೆ ನಡೆಸಿತ್ತು. ವೈದ್ಯರು ಸೇವೆಗೆ ಹಾಜರಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ನಗರ ಸೇರಿದಂತೆ ಗ್ರಾಮೀಣ ಭಾಗದಿಂದ ಚಿಕಿತ್ಸೆಗಾಗಿ ಬಂದ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಮುಷ್ಕರದ ನಡುವೆಯೂ ಮಾನವೀಯತೆ ಮೆರೆದರು. ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗದಲ್ಲಿ ಕೆಲಸ ನಿರ್ವಹಿಸುವವರು ಕಪ್ಪು ಪಟ್ಟಿ ಧರಿಸಿ ಕೆಲಸ ನಿರ್ವಹಿಸಿದರು.

ರಾಜ್ಯದಲ್ಲಿ ಶೇ.39ರಷ್ಟು ಸರ್ಕಾರಿ ನೌಕರರ ಹುದ್ದೆಗಳ ಖಾಲಿ ಇವೆ. ಸದ್ಯ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರೇ ಒತ್ತಡದ ನಡುವೆಯೂ ಎಲ್ಲ ಯೋಜನೆಗಳ ಅನುಷ್ಠಾನದ ಜವಾಬ್ದಾರಿ ಹೊತ್ತು ಕಾರ್ಯನಿರ್ವಹಿಸುತ್ತಿದ್ದೇವೆ. ಆದರೂ ರಾಜ್ಯ ಸರ್ಕಾರ ಸರ್ಕಾರ ನಮ್ಮ ಸಮಸ್ಯೆಗಳು, ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ವೇತನ ಪರಿಷ್ಕರಣೆ ಸಂಬಂಧ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್‌ರಾವ್ ನೇತೃತ್ವದ ಆಯೋಗದಿಂದ ವರದಿ ಪಡೆದು, ಶೇ.40ರಷ್ಟು ವೇತನ ಹೆಚ್ಚಳ ಸೌಲಭ್ಯವನ್ನು ಜಾರಿಗೊಳಿಸಿ ಆದೇಶಿಸಬೇಕೆಂದು ಒತ್ತಾಯಿಸಿದರು.
ಪಂಜಾಬ್, ರಾಜಸ್ತಾನ, ಛತ್ತೀಸ್‌ಘಡ್, ಜಾರ್ಖಂಡ್, ಹಿಮಾಚಲಪ್ರದೇಶ ರಾಜ್ಯಗಳ ಮಾದರಿಯಲ್ಲಿ ಕರ್ನಾಟಕದಲ್ಲೂ ಎನ್‌ಪಿಎಸ್‌ನ್ನು ರದ್ದುಗೊಳಿಸಿ, ಒಪಿಎ ಜಾರಿಗೊಳಿಸಬೇಕೆಂದು ಸರ್ಕಾರಿ ನೌಕಕರು ಆಗ್ರಹಿಸಿದರು.
ಬೈಕ್ ರ್ಯಾಲಿಯಲ್ಲಿ ಸರ್ಕಾರಿ ನೌಕರರ ಸಂಘ ಹಾಗೂ ವೃಂದ ಸಂಘಗಳ ಜಿಲ್ಲಾ ಘಟಕಗಳ ಪದಾಧಿಕಾರಿಗಳಾದ ಅಧ್ಯಕ್ಷ ಶಂಭುಗೌಡ, ತಮ್ಮಣ್ಣಗೌಡ, ಶ್ರೀನಿವಾಸ್, ಶಿವಲಿಂಗು, ಕೃಷ್ಣ, ನಾಗರಾಜು, ದೇವರಾಜು, ಶಿವಲಿಂಗೇಗೌಡ, ಮೂಗೂರೇಗೌಡ ಸೇರಿದಂತೆ ಇತರರು ಪಾಲ್ಗೊಂಡಿದ್ದರು.












Click it and Unblock the Notifications