ಮಂಡ್ಯ; ಐವರ ಕೊಲೆ ಪ್ರಕರಣಕ್ಕೆ ರೋಚಕ ತಿರುವು, ಆರೋಪಿ ಮಹಿಳೆ!
ಮಂಡ್ಯ, ಫೆಬ್ರವರಿ 09; ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಗ್ರಾಮದ ಮನೆಯಲ್ಲಿ ನಡೆದ ಐವರ ಕೊಲೆ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಕೊಲೆ ಆರೋಪಿ ಮಹಿಳೆಯಾಗಿದ್ದು, ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಬುಧವಾರ ಮಂಡ್ಯ ಎಸ್‌ಪಿ ಎನ್. ಯತೀಶ್ ಒಂದೇ ಕುಟುಂಬದ ಐವರ ಹತ್ಯೆ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು. ಕೊಲೆ ಆರೋಪಿ ಮೈಸೂರು ತಾಲೂಕು ಬೆಲವೆತ್ತ ಗ್ರಾಮದ ಸುನೀಲ್ ಪತ್ನಿ ಲಕ್ಷ್ಮೀ ಬಂಧಿಸಲಾಗಿದೆ ಎಂದು ಹೇಳಿದರು.
ಮಹಿಳೆ ಸೇರಿ ನಾಲ್ವರು ಮಕ್ಕಳನ್ನು ಶನಿವಾರ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಹತ್ಯೆಯಾದ ಲಕ್ಷ್ಮೀ (26) ಪತಿ ಗಂಗಾರಾಮ್ 10 ದಿನಗಳ ಹಿಂದೆ ವ್ಯಾಪಾರಕ್ಕೆ ತೆರಳಿದ್ದರು. ಆರೋಪಿ ಲಕ್ಷ್ಮೀ ಮನೆಯಲ್ಲಿದ್ದ ಗಂಗಾರಾಮ್ ಪತ್ನಿ ಲಕ್ಷ್ಮೀ, ರಾಜ್ (12) ಕೋಮಲ್ (7), ಕುನಾಲ್ (4) ಮತ್ತು ಗೋವಿಂದ (8) ಹತ್ಯೆ ಮಾಡಿದ್ದಳು.

ಅಕ್ರಮ ಸಂಬಂಧ ಕಾರಣ; ಕೊಲೆ ಪ್ರಕರಣದ ಆರೋಪಿ ಲಕ್ಷ್ಮೀ ಮತ್ತು ಹತ್ಯೆಯಾದ ಲಕ್ಷ್ಮೀ ಇಬ್ಬರು ಸಂಬಂಧಿಗಳು. ಆರೋಪಿ ಲಕ್ಷ್ಮೀ ಗಂಗಾರಾಮ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಇದಕ್ಕೆ ಅಡ್ಡಿಯಾಗಿದ್ದ ಲಕ್ಷ್ಮೀಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಳು.
ಶನಿವಾರ ಮೈಸೂರು ತಾಲೂಕು ಬೆಲವೆತ್ತ ಗ್ರಾಮದ ಕೋಳಿ ಅಂಗಡಿಯಲ್ಲಿ ಮಾಂಸ ಕತ್ತರಿಸುವ ಕತ್ತಿ, ಸುತ್ತಿಗೆಯೊಂದಿಗೆ ಆರೋಪಿ ಲಕ್ಷ್ಮೀ ಗಂಗಾರಾಮ್ ಮನೆಗೆ ಬಂದಿದ್ದಳು. ಗಂಗಾರಾಮ್ ಇಲ್ಲದ ಕಾರಣ ಆತನ ಪತ್ನಿ ಲಕ್ಷ್ಮೀ ಜೊತೆ ಜಗಳವಾಡಿದ್ದಳು.
ತಡರಾತ್ರಿ ಸುತ್ತಿಗೆಯಿಂದ ಲಕ್ಷ್ಮೀ ತಲೆಗೆ ಹೊಡೆದು ಕೊಲೆ ಮಾಡಿದ್ದಳು. ಆಗ ಮಕ್ಕಳು ಎಚ್ಚರಗೊಂಡಾಗ ಅವರು ತನ್ನನ್ನು ಗುರುತಿಸಬಹುದು ಎಂದು ನಾಲ್ವರು ಮಕ್ಕಳನ್ನು ಕೊಲೆ ಮಾಡಿದ್ದಳು. ಮುಂಜಾನೆ ಮೂರು ಗಂಟೆ ತನಕ ಅಲ್ಲಿಯೇ ಇದ್ದು ಶವಗಳಿಗೆ ಬೆಡ್ ಶೀಟ್ ಸುತ್ತಿದ್ದಳು, ಮನೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಕಳ್ಳತನಕ್ಕೆ ಬಂದವರ ಕೃತ್ಯ ಎಂದು ಬಿಂಬಿಸಲು ಪ್ರಯತ್ನ ನಡೆಸಿದ್ದಳು.
ಅಂತ್ಯಕ್ರಿಯೆಗೆ ಬಂದಿದ್ದಳು; ಮುಂಜಾನೆ 4.30ರ ಸುಮಾರಿಗೆ ಆರೋಪಿ ಲಕ್ಷ್ಮೀ ರಕ್ತಸಿಕ್ತವಾಗಿದ್ದ ತನ್ನ ಬಟ್ಟೆಯನ್ನು ಕಳಚಿ ಬೇರೆ ಬಟ್ಟೆ ಹಾಕಿಕೊಂಡು ಯಾರಿಗೂ ಕಾಣದಂತೆ ಮನೆಯಿಂದ ಪರಾರಿಯಾಗಿದ್ದಳು. ಹತ್ಯೆ ಪ್ರಕರಣದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾದಾಗ ಆರೋಪಿ ಲಕ್ಷ್ಮೀ ಅಲ್ಲಿಗೆ ಆಗಮಿಸಿದ್ದಳು. ಕಣ್ಣೀರು ಹಾಕಿದ್ದರು.
ಪ್ರಕರಣದ ತನಿಖೆಗೆ ಮಂಡ್ಯ ಪೊಲೀಸರು ಶ್ರೀರಂಗಪಟ್ಟಣ ಡಿವೈಎಸ್ಪಿ ಸಂದೇಶ ಕುಮಾರ್ ನೇತೃತ್ವದಲ್ಲಿ 6 ತಂಡಗಳನ್ನು ರಚನೆ ಮಾಡಲಾಗಿತ್ತು. ಮೂರೇ ದಿನದಲ್ಲಿ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸರಿಗೆ ಪ್ರಶಂಸೆ; ಐವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ. ಆರ್. ಸಾಗರ ಪೊಲೀಸ್ ಠಾಣೆಯಲ್ಲಿ ಮೊ. ಸಂ 30/2022 ಕಲಂ 302-201 ಐಪಿಸಿ ಪ್ರಕರಣದಲ್ಲಿ ಕೇಸು ದಾಖಲು ಮಾಡಲಾಗಿತ್ತು.
ಒಂದೇ ಕುಟುಂಬದ ಐದು ಜನರನ್ನು ಬರ್ಬರವಾಗಿ ಕೊಲೆ ಮಾಡಿದ್ದ ಆರೋಪಿಯ ಬಂಧನವಾಗಿದ್ದು, ಆರೋಪಿಯನ್ನು ಖಚಿತ ಮತ್ತು ಬಲವಾದ ಪುರಾವೆಯ ಆಧಾರದ ಪತ್ತೆ ಮಾಡಿ ಬಂಧಿಸಲು ಶ್ರಮಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಗಳನ್ನು ಮಂಡ್ಯ ಎಸ್‌ಪಿ ಶ್ಲಾಘಿಸಿದ್ದಾರೆ.
ಭಾನುವಾರ ಐವರ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಆಗ ಸ್ಥಳಕ್ಕೆ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ಕೊಟ್ಟಿದ್ದರು. ಕೃತ್ಯ ನಡೆದ ಸ್ಥಳ ಪರಿಶೀಲನೆ ನಡೆಸಿದ್ದರು. ಅಧಿಕಾರಿಗಳಿಗೆ ಪ್ರಕರಣದ ತನಿಖೆ ಹಾಗೂ ಆರೋಪಿಗಳ ಪತ್ತೆಯ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿದ್ದರು.
ಕೊಲೆಯಾದ ಲಕ್ಷ್ಮೀ ಪತಿ ಗಂಗಾರಾಮ್ ಮತ್ತು ಅವರ ಅಣ್ಣ, ಅತ್ತಿಗೆ ಜೊತೆ ವಾಸವಾಗಿದ್ದರು. ಗಂಗಾರಾಮ್ ಅಣ್ಣ, ಅತ್ತಿಗೆ ಜೊತೆ ಪ್ಲಾಸ್ಟಿಕ್ ಹೂವಿನ ವ್ಯಾಪಾರಕ್ಕೆ ತೆರಳಿದ್ದರು. ಆಗ ಈ ಕೊಲೆ ನಡೆದಿತ್ತು.












Click it and Unblock the Notifications