ಮಂಡ್ಯದಲ್ಲಿ ಭ್ರೂಣ ಪತ್ತೆ ಹಾಗೂ ಹತ್ಯೆ ಕೇಸ್: ಕಿಂಗ್‌ಪಿನ್ ಅಭಿಷೇಕ್ ಬಂಧನ
ಮಂಡ್ಯ, ಸೆಪ್ಟೆಂಬರ್ 05: ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಕಿಂಗ್‌ಪಿನ್ ಅಭಿಷೇಕ್ ಎಂಬಾತನನ್ನು ಮಂಡ್ಯ ಜಿಲ್ಲೆಯ ವಿಶೇಷ ಪೊಲೀಸ್ ತಂಡ ಬಂಧಿಸಿದ್ದಾರೆ. ಪಾಂಡವಪುರ ತಾಲೂಕಿನ ಎಂ ಶೆಟ್ಟಿಹಳ್ಳಿ ನಿವಾಸಿ ಅಭಿಷೇಕ್ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆಯನ್ನೇ ಕಸುಬು ಮಾಡಿಕೊಂಡಿದ್ದ. ಸದ್ಯ ಈತನನ್ನು ಬಂಧಿಸಲಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ವೈದ್ಯರ ಬಂಧನಕ್ಕೂ ಪೊಲೀಸರು ಮುಂದಾಗಿದ್ದಾರೆ.
ತನ್ನದೇ ಜಾಲದ ಮೂಲಕ ಹಳೇ ಮೈಸೂರು ಭಾಗದಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಅಭಿಷೇಕ್ ಪೊಲೀಸರಿಗೆ ಯಾಮಾರಿಸಲು ಮೊಬೈಲ್ ಬದಲು ಇಂಟರ್ನೆಟ್ ಕಾಲ್ ಬಳಕೆ ಮಾಡುತ್ತಿದ್ದ. ಹುಳ್ಳೇನಹಳ್ಳಿಯ ಆಲೆಮನೆಯಲ್ಲಿ ಭ್ರೂಣ ಹತ್ಯೆ ಪ್ರಕರಣದಲ್ಲಿಯೂ ಐಡಿ ಕೈಗೂ ಸಿಗದೆ ದಂಧೆ ವಿಸ್ತರಣೆ ಮಾಡಿಕೊಂಡಿದ್ದ.

ವೈದ್ಯರೊಬ್ಬರಿಂದ 5 ಸ್ಕ್ಯಾನಿಂಗ್ ಮೆಷಿನ್ ಖರೀದಿಸಿ ತಾನೇ ಸ್ಕ್ಯಾನಿಂಗ್ ಮಾಡಿ ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದ ಆರೋಪಿ ಒಂದು ಹೆಣ್ಣು ಭ್ರೂಣ ಹತ್ಯೆಗೆ 25 ಸಾವಿರದಿಂದ 1 ಲಕ್ಷವರೆಗೆ ಹಣ ಪಡೆಯುತ್ತಿದ್ದ ಸ್ಕ್ಯಾನಿಂಗ್‌ನಲ್ಲಿ ಹೆಣ್ಣು ಭ್ರೂಣ ಪತ್ತೆಯಾದರೆ ಮಾತ್ರೆ ಬಳಸಿ ಭ್ರೂಣ ಹತ್ಯೆ ಮಾಡುತ್ತಿದ್ದ. ಮೆಡಿಕಲ್ ವೇಸ್ಟ್ ಜೊತೆಗೆ ಭ್ರೂಣವನ್ನೂ ಕೂಡ ಎಸೆಯುತ್ತಿದ್ದ ಎನ್ನಲಾಗಿದೆ.
ಆಲೆಮನೆ, ಪಾಂಡವಪುರ ಹೆಲ್ತ್ ಕ್ವಾಟರ್ಸ್ ಪ್ರಕರಣ ಸೇರಿದಂತೆ 5 ಕೇಸ್‌ನಲ್ಲಿ ಕಿಂಗ್‌ಪಿನ್ ಆಗಿರುವ ಅಭಿಷೇಕ್‌ನನ್ನು ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಡಕಾಯಿ ಆಪರೇಷನ್ ಮೂಲಕ ದಂಧೆ ಪತ್ತೆ ಹಚ್ಚಿದ್ದ ಡಿಎಚ್‌ಒ ಡಾ.ಮೋಹನ್ ಎಎಸ್‌ಪಿ ತಿಮ್ಮಯ್ಯ, ಗಂಗಾಧರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಅಭಿಷೇಕ್ ಜೊತೆ ವಿರೇಶ್ ಸೇರಿ 12 ಆರೋಪಿಗಳನ್ನು ಬಂಧಿಸಿದ್ದಾರೆ. 2 ಸ್ಕ್ಯಾನಿಂಗ್ ಮಷಿನ್, 3 ಕಾರು, ಮೊಬೈಲ್ ಸೇರಿ 23 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.












Click it and Unblock the Notifications