Bengaluru Mysuru ರಸ್ತೆ ಬಗ್ಗೆ ಸುಳ್ಳು ಸುದ್ದಿ; ಪೊಲೀಸರ ಸ್ಪಷ್ಟನೆ
ಮಂಡ್ಯ, ಆಗಸ್ಟ್ 10; ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಮತ್ತೆ ಸುದ್ದಿಯಲ್ಲಿದೆ. ಈ ರಸ್ತೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಈ ಕುರಿತು ಮಂಡ್ಯ ಜಿಲ್ಲಾ ಪೊಲೀಸರು ಫೇಸ್‌ಬುಕ್ ಮೂಲಕ ಸ್ಪಷ್ಟನೆಯನ್ನು ಸಹ ನೀಡಿದ್ದಾರೆ.
ಈ ವರ್ಷದ ಮಾರ್ಚ್‌ನಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದರು. ಹಲವು ವಿಚಾರಗಳಿಗೆ ಈ ರಸ್ತೆ ಪದೇ ಪದೇ ಸುದ್ದಿಯಾಗುತ್ತಲೇ ಇದೆ.

ಮಂಡ್ಯ ಜಿಲ್ಲಾ ಪೊಲೀಸರು ಪ್ರಕಟಣೆಯಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಸಾರ್ವಜನಿಕರು ಈ ರೀತಿಯ ವದಂತಿಗೆ ಕಿವಿ ಕೊಡದಂತೆ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಹರಿದಾಡುತ್ತಿರುವ ಸುದ್ದಿ; ಫೇಸ್‌ಬುಕ್ ಪೋಸ್ಟ್ ಒಂದರಲ್ಲಿ ಬೆಂಗಳೂರಿಗೆ ಕುಟುಂಬ ಸಮೇತರಾಗಿ ಕಾರಿನಲ್ಲಿ ಬರುವವರು ಯಾವುದೇ ಸಂದರ್ಭದಲ್ಲೂ ರಾತ್ರಿ ಬರಲು ಪ್ರಯತ್ನಿಸಬೇಡಿ ಶ್ರೀರಂಗಪಟ್ಟಣದಿಂದ ಕೆಂಗೇರಿಗೆ ಒಂದೇ ಒಂದು ಅಂಗಡಿ ಅಥವಾ ಕಟ್ಟಡ ಕಾಣಿಸುವುದಿಲ್ಲ. ಸ್ತುತ ಎಕ್ಸ್‌ಪ್ರೆಸ್ ಹೈವೇ ಕಾರುಗಳಲ್ಲಿ ಪುಂಡರು ಮತ್ತು ದರೋಡೆಕೋರರು ತಿರುಗಾಡುತ್ತಿದ್ದಾರೆ.
ವಾಹನವನ್ನು ಎಲ್ಲೋ ನಿಲ್ಲಿಸಿದರೆ ಸಹಾಯ ಮಾಡುವ ನೆಪದಲ್ಲಿ ಹತ್ತಿರ ಬಂದು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಚಾಕು, ಕತ್ತಿಯಿಂದ ಕತ್ತರಿಸಿ ಗಾಯಗೊಳಿಸಿ ಎಲ್ಲವನ್ನೂ ದೋಚುತ್ತಾರೆ. ನೈಫ್‌ಪಾಯಿಂಟ್‌ನಲ್ಲಿ ATM ಕಾರ್ಡ್ ಅಥವಾ Google Pay ಇಂದಾನೂ ಒತ್ತಾಯವಾಗಿ ಹಣ ದೋಚುತ್ತಾರೆ. ನಾವು ಎಷ್ಟು ಕಿರುಚಿದರೂ ಯಾರೂ ಕೇಳುವುದಿಲ್ಲ.
ಒಂದು ವಾಹನವೂ ನಿಲ್ಲುವುದಿಲ್ಲ. ಶ್ರೀರಂಗಪಟ್ಟಣದಿಂದ ಕೆಂಗೇರಿಗೆ ಒಂದೇ ಒಂದು ಅಂಗಡಿ ಅಥವಾ ಕಟ್ಟಡ ಕಾಣಿಸುವುದಿಲ್ಲ. ಪೊಲೀಸರಿಗೆ ಏನಾದರೂ ಹೇಳಿದರೆ, ನಾವು ಪೊಲೀಸರಿಂದ ಪ್ರತಿಕ್ರಿಯೆ ಪಡೆಯುತ್ತೇವೆ ಅನ್ನುತ್ತಾರಷ್ಟೇ ಕಳೆದು ಹೋಗಿದೆ ಎಂದರೆ ಕೇಸ್‌ಗೆ ಬರುತ್ತಲೇ ಇರಬೇಕಾಗುತ್ತದೆ. ಈ ಕಳ್ಳರಿಗೆ ಹೈವೇ ಪೊಲೀಸರು ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಆದ್ದರಿಂದ ಎಲ್ಲರೂ ಗಮನಹರಿಸಿ. ನಿಮ್ಮ ಸ್ನೇಹಿತರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಿ. ಮದ್ದೂರು, ಮಂಡ್ಯ, ಬಿಡದಿ, ರಾಮನಗರ, ಚನ್ನಪಟ್ಟಣ, ಶ್ರಿರಂಗಪಟ್ಟಣ ತುಂಬಾ ಕೆಟ್ಟ ಪ್ರದೇಶಗಳು.
ದಿನನಿತ್ಯ ಕಾರು, ಲಾರಿ ದರೋಡೆ ನಡೆಯುತ್ತಿವೆ. ಆದರೆ ಸತ್ಯ ಯಾರಿಗೂ ಗೊತ್ತಿಲ್ಲ. ಲಾರಿ ಚಾಲಕರು ದಯವಿಟ್ಟು ರಸ್ತೆಯಲ್ಲಿ ನಿಲ್ಲಿಸಿ ಮಲಗಬೇಡಿ, ದರೋಡೆ ಮತ್ತು ಮಾರಣಾಂತಿಕ ಹಿಂಸೆಗೆ ಒಳಗಾಗುವುದನ್ನು ನೆನಪಿಡಿ ಎಂದು ಪೋಸ್ಟ್ ಹಾಕಲಾಗಿದೆ.
ಪೊಲೀಸರ ಸ್ಪಷ್ಟನೆಗಳು
ಮಂಡ್ಯ ಜಿಲ್ಲಾ ಪೊಲೀಸರು. ಬೆಂಗಳೂರು-ಮೈಸೂರು ಹೆದ್ದಾರಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಸಾರ್ವಜನಿಕರು ಈ ರೀತಿಯ ವದಂತಿಗೆ ಕಿವಿ ಕೊಡದಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
* ವರದಿಯಲ್ಲಿ ಲಗತ್ತಿಸಿರುವ ಫೋಟೋ ಬೆಂಗಳೂರು-ಮೈಸೂರು ಹೆದ್ದಾರಿಗೆ ಸಂಬಂಧಿಸಿರುವುದಿಲ್ಲ. ಇಲ್ಲಿ ತಿಳಿಸಿದ ರೀತಿಯಲ್ಲಿ ಯಾವುದೇ ಪ್ರಕರಣಗಳು ನಡೆದಿರುವುದಿಲ್ಲ.
* ಸಾರ್ವಜನಿಕರು ಎಲ್ಲಾ ಸಮಯದಲ್ಲೂ ಸುರಕ್ಷಿತವಾಗಿ ಪ್ರಯಾಣ ಮಾಡಬಹುದಾಗಿರುತ್ತದೆ.
* ಹೆದ್ದಾರಿಯಲ್ಲಿ ನಡೆಯುವ ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಲಾಗಿರುತ್ತದೆ. ಹಾಗೂ ಬೆಂ-ಮೈ ಹೆದ್ದಾರಿಯಲ್ಲಿ ಹೈವೆ ಪೆಟ್ರೋಲ್ ವಾಹನಗಳನ್ನು ನಿಯೋಜಿಸಿ ಭದ್ರತೆ ನಿರ್ವಹಣೆ ಮಾಡಲಾಗಿರುತ್ತದೆ.
* ಸಾರ್ವಜನಿಕರು ವದಂತಿಗೆ ಕಿವಿಗೊಡದೆ ಸಾಮಾಜಿಕ ಜಾಲತಾಣಗಳಲ್ಲಿ ವಿಷಯವನ್ನು ಹಂಚಿಕೊಳ್ಳುವ ಮುನ್ನ ಅದನ್ನು ಪರಾಮರ್ಶಿಸಲು ಕೋರಿದೆ ಎಂದು ಹೇಳಿದ್ದಾರೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಅವೈಜ್ಞಾನಿಕ ಎಂದು ಮೊದಲು ಸುದ್ದಿಯಾಗಿತ್ತು. ಬಳಿಕ ರಸ್ತೆ ಉದ್ಘಾಟನೆ, ಅದರ ಬಳಿಕ ರಸ್ತೆ ಅಪಘಾತಗಳ ವಿಚಾರದಲ್ಲಿ ರಸ್ತೆ ಸುದ್ದಿಯಾಗಿತ್ತು. ಈಗ ಹೆದ್ದಾರಿಯಲ್ಲಿ ದರೋಡೆ ನಡೆಯುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ- 275ರ ಒಂದು ಭಾಗವಾದ ಬೆಂಗಳೂರು-ಮೈಸೂರು ನಗರದ ನಡುವಿನ ಹೆದ್ದಾರಿ ಉಭಯ ನಗರಗಳ ನಡುವಿನ ಸಂಚಾರದ ಸಮಯ ಕಡಿಮೆ ಮಾಡಿದೆ. ಇದೊಂದು ಕರ್ನಾಟಕದ ಪ್ರಮುಖ ರಸ್ತೆ ಯೋಜನೆಯಾಗಿದ್ದು, ರಾಜ್ಯದ ಪ್ರಗತಿಗೆ ಮಹತ್ವದ ಕೊಡುಗೆಯನ್ನು ನೀಡಿದೆ.












Click it and Unblock the Notifications