Mandya Kamegowda : ಮೋದಿ ಮೆಚ್ಚಿದ್ದ ಮಂಡ್ಯದ ಕಾಮೇಗೌಡರು ವಿಧಿವಶ
ಮಂಡ್ಯ, ಅಕ್ಟೋಬರ್ 17; ಪರಿಸರ ಸಂರಕ್ಷಕ, ಪ್ರಧಾನಿ ನರೇಂದ್ರ ಮೋದಿ ಮೆಚ್ಚಿದ್ದ ಮಂಡ್ಯದ ಕಾಮೇಗೌಡರು ವಿಧಿವಶರಾದರು. ನರೇಂದ್ರ ಮೋದಿ ಭೇಟಿ ಮಾಡುವ ಕಾಮೇಗೌಡರು ಇಚ್ಛೆ ಕೊನೆಗೂ ಈಡೇರಲಿಲ್ಲ.
ಅನಾರೋಗ್ಯದಿಂದ ಬಳಲುತ್ತಿದ್ದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ಕೆರೆ ಕಾಮೇಗೌಡರು (84) ಸೋಮವಾರ ನಿಧನ ಹೊಂದಿದರು. ಆಧುನಿಕ ಭಗೀರಥ ಎಂದು ಕಾಮೇಗೌಡರು ಪ್ರಸಿದ್ಧರಾಗಿದ್ದರು.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕುಂದನಿ ಪರ್ವತದ ಮೇಲೆ ಕೆರೆ ಕಟ್ಟಿರುವ ಕಾಮೇಗೌಡರನ್ನು ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹೊಗಳಿದ್ದರು. ಬಳಿಕ ಆಗಿನ ಮಂಡ್ಯ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಕಾಮೇಗೌಡರನ್ನು ಭೇಟಿ ಮಾಡಿದ್ದರು. ರಾಜ್ಯೋತ್ಸವ ಪ್ರಶಸ್ತಿಯೂ ಕಾಮೇಗೌಡರಿಗೆ ಒಲಿದು ಬಂದಿತ್ತು.

ಭಾನುವಾರ ರಾತ್ರಿ ಕಾಮೇಗೌಡರಿಗೆ ವಾಂತಿಯಾಗಿತ್ತು. ಬಳಿಕ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಬಳಿಕ ಅವರು ಮನೆಯಲ್ಲಿಯೇ ಮೃತಪಟ್ಟಿದ್ದಾರೆ. ಸೋಮವಾರ ಸಂಜೆ ಕಾಮೇಗೌಡರ ಅಂತ್ಯಕ್ರಿಯೆ ನಡೆಯುವ ನಿರೀಕ್ಷೆ ಇದೆ.
ಶಾಲೆಯ ಮೆಟ್ಟಿಲು ಹತ್ತಿಲ್ಲ; ಕಾಮೇಗೌಡರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸರದೊಡ್ಡಿ ಗ್ರಾಮದವರು. ತಂದೆ ನೀಲಿ ವೆಂಕಟಗೌಡ, ತಾಯಿ ರಾಜಮ್ಮ. ಶಾಲೆಯ ಮೆಟ್ಟಿಲು ಹತ್ತಿ ಅಕ್ಷರ ಕಲಿಯದ ಕಾಮೇಗೌಡರು ತಮ್ಮ ಪರಿಸರ ಪ್ರೀತಿಯಿಂದಾಗಿಯೇ ಇತರರಿಗೆ ಮಾದರಿ. ಇಂದಿಗೂ ಚಿಕ್ಕಮನೆ, ತುಂಡು ಭೂಮಿ, ಒಂದಷ್ಟು ಕುರಿಗಳು ಕಾಮೇಗೌಡರ ಆಸ್ತಿಯಾಗಿದೆ.
ಪ್ರಾಣಿಗಳ ನೀರಿಹ ದಾಹ ತೀರಿಸಲು ಕಾಮೇಗೌಡರು ಗುಡ್ಡದಲ್ಲಿ ಕೆರೆಯನ್ನು ಕಟ್ಟುವ ಕಾಯಕ ಕೈಗೊಂಡರು. 12 ವರ್ಷಗಳ ಹಿಂದೆ ಕುಂದೂರು ಬೆಟ್ಟಕ್ಕೆ ಕುರಿಗಳನ್ನು ಮೇಯಿಸಲು ಕಾಮೇಗೌಡರು ಹೋದಾಗ ವಿಪರೀತ ದಾಹವಾಗಿತ್ತು. ಎಲ್ಲಿ ಹುಡುಕಿದರೂ ಒಂದು ಹನಿ ನೀರು ಸಿಗಲಿಲ್ಲ. ತುಸು ದೂರದಲ್ಲಿದ್ದ ಮನೆಗೆ ಹೋಗಿ ಅವರು ದಾಹ ಇಂಗಿಸಿಕೊಂಡರು. ಆಗ ಅವರು ನಮ್ಮ ದಾಹ ತೀರಿತು ಪ್ರಾಣಿಗಳ ಕಥೆ ಏನು ಎಂದು ಚಿಂತಿಸಿದರು.
ಬಳಿಕ ಪ್ರಾಣಿಗಳಿಗೆ ನೀರುಣಿಸಲು ಕೆರೆ ತೋಡುವ ಕಾರ್ಯ ಕೈಗೊಂಡರು. ಮೊದಲು ಊರಿನವರು ಕಾಮೇಗೌಡರು ಕೆರೆಗಳನ್ನು ತೋಡುವುದನ್ನು ಕಂಡು ಗೇಲಿ ಮಾಡಿದರು, ಇವರು ಹುಚ್ಚ ಎಂದು ಸಹ ಜರಿದರು. ಆದರೂ ಛಲ ಬಿಡದ ಗೌಡರು 14ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಾಣ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಕಾಮೇಗೌಡರ ಕಾರ್ಯವನ್ನು ಹೊಗಳಿದ್ದರು. ಆ ಮೂಲಕ ಕಾಮೇಗೌಡರು ರಾಷ್ಟ್ರಕ್ಕೆ ಪರಿಚಿತರಾದರು. ಬಳಿಕ ಕಾಮೇಗೌಡರು ಪ್ರಧಾನಿ ಭೇಟಿಯಾಗುವ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ ಅದು ಸಾಕಾರಗೊಳ್ಳಲಿಲ್ಲ.












Click it and Unblock the Notifications