Mandya: ಕೆರಗೋಡು ಗ್ರಾಮದಲ್ಲಿ ಪೊಲೀಸ್ ಸರ್ಪಗಾವಲಲ್ಲಿ ಹನುಮಧ್ವಜ ಇಳಿಸಿದ ಅಧಿಕಾರಿಗಳು
ಮಂಡ್ಯ: ತಾಲೂಕಿನ ಕೆರಗೋಡು ಗ್ರಾಮದಲ್ಲಿ ಅಳವಡಿಸಲಾಗಿದ್ದ 108 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಹಾರಿಸಲಾಗಿದ್ದ ಶ್ರೀ ಆಂಜನೇಯ ಅರ್ಜುನ ಧ್ವಜವನ್ನು ಪೊಲೀಸ್ ಸರ್ಪಗಾವಲಿನಲ್ಲಿ ಭಾನುವಾರ ಗ್ರಾಮಸ್ಥರ ವಿರೋಧದ ನಡುವೆ ಅಧಿಕಾರಿಗಳು ತೆರವು ಮಾಡಿದರು.
ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಹಾಗೂ ಹಿಂದೂ ಕಾರ್ಯಕರ್ತರು ಪೊಲೀಸರು, ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕ ಪಿ. ರವಿಕುಮಾರ್ ವಿರುದ್ಧ ಘೋಷಣೆ ಕೂಗಿದರು. ಶನಿವಾರದಿಂದಲೇ ಕೇಸರಿ ಧ್ವಜ ತೆರವುಗೊಳಿಸುವ ವಿಚಾರದಲ್ಲಿ ಗೊಂದಲ ಉಂಟಾಗಿತ್ತು. ಭಾನುವಾರ ಮುಂಜಾನೆ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯ ತುಕಡಿಗಳು ಮತ್ತು ಹೆಚ್ಚಿನ ಪೊಲೀಸರೊಂದಿಗೆ ಎಎಸ್ಪಿ ತಿಮ್ಮಯ್ಯ ಹಾಗೂ ಉಪ ವಿಭಾಗಾಧಿಕಾರಿ ಶಿವಮೂರ್ತಿ ಸ್ಥಳಕ್ಕೆ ಆಗಮಿಸಿದರು. ಈ ವೇಳೆ ಧ್ವಜ ತೆರವು ಮಾಡಲು ಮುಂದಾದಾಗ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಉಂಟಾಯಿತು.

ಪೊಲೀಸರು ಮನವೊಲಿಸಲು ಯತ್ನಿಸಿದರಾದರೂ ಗ್ರಾಮಸ್ಥರು ಒಪ್ಪಲಿದ್ದರು. ಧ್ವಜ ಇಳಿಸಲು ಬಂದ ಪೊಲೀಸರು ಮತ್ತು ಅಧಿಕಾರಿಗಳ ವಿರುದ್ಧ ಅಧಿಕಾರಿಗಳೇ ಗೋಬ್ಯಾಕ್ ಎಂದು ಘೋಷಣೆ ಕೂಗಿದರು. ಪೊಲೀಸರ ಸರ್ಪಗಾವಲಿನಲ್ಲಿ ಧ್ವಜ ಇಳಿಸಲು ಅಧಿಕಾರಿಗಳು ನಿರ್ಧರಿಸಿದರು. ಗ್ಯಾಸ್ ಕಟ್ಟರ್‌ನಿಂದ ಧ್ವಜಸ್ತಂಭವನ್ನೇ ತುಂಡರಿಸಿ ತೆರವುಗೊಳಿಸಲು ಪೊಲೀಸರು ಮುಂದಾದರೂ. ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ನಂತರ ಆ ನಿರ್ಧಾರವನ್ನು ಕೈಬಿಟ್ಟರು.
ಲಘು ಲಾಠಿ ಪ್ರಹಾರ
ಪೊಲೀಸರು ಧ್ವಜವನ್ನು ಇಳಿಸಲು ಮುಂದಾದರು. ಈ ವೇಳೆ ನೂಕು ನುಗ್ಗಲು ಉಂಟಾಯಿತು. ಬಳಿಕ ಲಘು ಲಾಠಿ ಪ್ರಹಾರ ನಡೆಸಿ ಧ್ವಜ ಸ್ತಂಭದಿಂದ ಗ್ರಾಮಸ್ಥರು ಮತ್ತು ಯುವಜನರನ್ನು ಚದುರಿಸಿ ನಂತರ ಧ್ವಜವನ್ನು ಇಳಿಸಲಾಯಿತು. ಈ ಸಂದರ್ಭದಲ್ಲಿ ಮಹಿಳೆಯರು ಸೇರಿದಂತೆ ಹಲವಾರು ಮಂದಿ ಬಾಯಿ ಬಡಿದುಕೊಂಡು ಕಣ್ಣೀರು ಹಾಕಿದರು. ಕೆಲವರು ಪೊಲೀಸರು ಮತ್ತು ಅಧಿಕಾರಿಗಳತ್ತ ಮಣ್ಣು ತೂರಿ ಹಿಡಿಶಾಪ ಹಾಕಿದರು.

ಇಳಿಸಿದ ಧ್ವಜವನ್ನು ಪೊಲೀಸರೇ ಕೊಂಡೊಯ್ಯಲು ಯತ್ನಿಸಿದರು. ಆದರೆ ಧ್ವಜವನ್ನು ನಮಗೇ ಕೊಡುವಂತೆ ಗ್ರಾಮಸ್ಥರು ಪಟ್ಟು ಹಿಡಿದರು. ನಂತರ ಅದನ್ನು ಗ್ರಾಮಸ್ಥರ ವಶಕ್ಕೆ ಒಪ್ಪಿಸಿದರು. ಸುದ್ಧಿ ತಿಳಿಯುತ್ತಿದ್ದಂತೆ ಸುತ್ತಮುತ್ತಲ ಗ್ರಾಮಸ್ಥರು ಕೆರಗೋಡು ಗ್ರಾಮಕ್ಕೆ ಆಗಮಿಸಿ ಪೊಲೀಸರು, ಜನಪ್ರತಿನಿಧಿಗಳು, ಸಚಿವರು, ಜಿಲ್ಲಾಡಳಿತದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಬ್ಯಾರಿಕೇಡ್‌ಗಳನ್ನು ಕಿತ್ತೆಸೆದರು.
ಗ್ರಾಮವನ್ನು ಬಂದ್ ಮಾಡಿ ಆಕ್ರೋಶ
ಪೊಲೀಸರು ಮತ್ತು ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ಗ್ರಾಮಸ್ಥರು ಮತ್ತು ವ್ಯಾಪಾರಿಗಳು ಕೆರಗೋಡು ಬಂದ್ ಮಾಡಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.
ಸುದ್ಧಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್ ಹೆಚ್ಚಿನ ಪೊಲೀಸರೊಂದಿಗೆ ಸ್ಥಳಕ್ಕೆ ಧಾವಿಸಿದರು. ಧ್ವಜಸ್ತಂಭವನ್ನು ಸುತ್ತುವರಿದ್ದ ಗ್ರಾಮಸ್ಥರು ಮತ್ತು ಹಿಂದೂ ಕಾರ್ಯಕರ್ತರನ್ನು ದೂರ ಸರಿಸಿ ರಾಷ್ಟ್ರಧ್ವಜ ಹಾರಿಸಲು ಮುಂದಾದರು. ಇದಕ್ಕೆ ಅಡ್ಡಿಪಡಿಸಿದ ಕಾರಣ ಎಸ್ಪಿ ಸೂಚನೆ ಮೇರೆಗೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದರು. ಈ ವೇಳೆ ಕೆಲ ಕಾರ್ಯಕರ್ತರು ಮತ್ತು ಗ್ರಾಮಸ್ಥರಿಗೆ ಗಾಯಗಳಾದವು.
ಬಳಿಕ ಜಿಲ್ಲಾ ಪೊಲೀಸ್ ಅಧೀಕ್ಷಕ ಸಮಕ್ಷಮದಲ್ಲಿ ಸ್ತಂಭದಲ್ಲಿ ರಾಷ್ಟ್ರಧ್ವಜವನ್ನು ಮಧ್ಯಾಹ್ನದ ವೇಳೆ ಹಾರಿಸಲಾಯಿತು. ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, 144ನೇ ಕಲಂ ಅನ್ವಯ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.












Click it and Unblock the Notifications