ಮಂಡ್ಯ; ಸಾರಂಗಿ ಹಳ್ಳದಲ್ಲಿ ಸಂಚರಿಸುವುದೇ ಸಾಹಸ!
ಮಂಡ್ಯ, ಡಿಸೆಂಬರ್ 19; ಇದೊಂದು ರಸ್ತೆಯಲ್ಲಿ ಸಂಚರಿಸುವುದೆಂದರೆ ಅದೊಂದು ಭೀತಿಯ ಅನುಭವವಾಗುತ್ತದೆ. ಅಷ್ಟೇ ಅಲ್ಲ ಜೀವವನ್ನು ಕೈಯ್ಯಲ್ಲಿಡಿದುಕೊಂಡು ಹೋಗುತ್ತಿದ್ದೇವೆನೋ ಎಂಬ ಭಾವ ಮೂಡುತ್ತದೆ. ಆದರೂ ಆ ರಸ್ತೆಯಲ್ಲಿಯೇ ಜನ ಸಾಗುತ್ತಾರೆ. ಅದು ಅವರಿಗೆ ಅನಿವಾರ್ಯವೂ ಹೌದು.
ಹಾಗಾದರೆ ಇಂತಹ ಭೀತಿ ಹುಟ್ಟಿಸುವ ಆ ರಸ್ತೆ ಯಾವುದು ಎಂಬ ಕುತೂಹಲ ನಿಮ್ಮಲ್ಲಿ ಮೂಡಬಹುದು. ಸಾಮಾನ್ಯವಾಗಿ ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ತಾಲೂಕಿನ ಸಾರಂಗಿ ಗ್ರಾಮದ ಮೂಲಕ ತೆರಳಿದವರಿಗೆ ಅದರ ಅನುಭವವಾಗಿರುತ್ತದೆ. ಅಷ್ಟೇ ಅಲ್ಲ ಭಯದ ಸಂಚಾರಕ್ಕೆ ಅಂತ್ಯ ಹಾಡಿ ಎನ್ನುತ್ತಲೇ ಬರುತ್ತಿದ್ದಾರೆ ಈ ವ್ಯಾಪ್ತಿಯ ಜನರು.
ಕೆ. ಆರ್. ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಗೆ ಸೇರಿದ ಸಾರಂಗಿ ಗ್ರಾಮದ ಬಳಿ ದೊಡ್ಡ ಹಳ್ಳವೊಂದಿದೆ. ಈ ಹಳ್ಳದಲ್ಲಿಯೇ ರಸ್ತೆಯಿದೆ. ಮಳೆಗಾಲದಲ್ಲಿ ಹಳ್ಳ ತುಂಬಿ ಹರಿಯುತ್ತದೆ. ಹಳ್ಳದ ಮೇಲ್ಬಾಗದಲ್ಲಿ ಹೇಮಾವತಿ ಯೋಜನೆಯ ಮುಖ್ಯ ಕಾಲುವೆಗೆ ಮೇಲ್ಗಾಲುವೆ ನಿರ್ಮಿಸಲಾಗಿದೆ. ಮೇಲ್ಗಾಲುವೆಯ ಕೆಳಗೆ ಹಳ್ಳದ ನೀರು ಹರಿಯುತ್ತದೆ.

ಈ ಹಳ್ಳದ ನೀರು ಹರಿದು ಹೋಗುವ ಮಾರ್ಗದಲ್ಲಿಯೇ ಪ್ರಮುಖವಾದ ಗ್ರಾಮೀಣ ರಸ್ತೆಯಿದೆ. ಈ ರಸ್ತೆಯು ಗೊರವಿ, ಎತ್ತುಗೋನಹಳ್ಳಿ, ಮಲ್ಲೇನಹಳ್ಳಿ, ಶ್ಯಾರಹಳ್ಳಿ ಕಡೆಯಿಂದ ಸಾರಂಗಿ, ಕೈಗೋನಹಳ್ಳಿ ಮಾರ್ಗವಾಗಿ ಕೆ. ಆರ್. ಪೇಟೆ ಪಟ್ಟಣಕ್ಕೆ ಸಂಪರ್ಕವನ್ನು ಕಲ್ಪಿಸುತ್ತದೆ.
ಈ ರಸ್ತೆಯ ಮೂಲಕವೇ ಪ್ರತಿದಿನವೂ ಬಸ್ ಸಂಚರಿಸುತ್ತದೆ. ಗೊರವಿ ಭಾಗದ ಗ್ರಾಮೀಣ ವಿದ್ಯಾರ್ಥಿಗಳು ಸೇರಿದಂತೆ ನಿತ್ಯ ನೂರಾರು ಜನರು ಈ ಹಳ್ಳವನ್ನು ದಾಟಿಕೊಂಡೇ ಕೆ. ಆರ್. ಪೇಟೆ ಪಟ್ಟಣಕ್ಕೆ ಪ್ರಯಾಣ ಬೆಳೆಸಬೇಕಿದೆ.
ಅಪಾಯಕ್ಕೆಆಹ್ವಾನ ಈ ರಸ್ತೆ; ಬೇಸಿಗೆಯಲ್ಲಿ ಹಳ್ಳದಲ್ಲಿ ನೀರು ಹರಿಯದ ಕಾರಣ ತೊಂದರೆಯಾಗುವುದಿಲ್ಲ. ಕಳೆದ ಕೆಲವು ವರ್ಷಗಳ ಹಿಂದೆ ಬರ ಕಾಣಿಸಿಕೊಂಡಿದ್ದರಿಂದ ಹಳ್ಳದಲ್ಲಿ ನೀರು ಹರಿದಿರಲಿಲ್ಲ. ಆದರೆ ಕಳೆದ ಕೆಲವು ವರ್ಷಗಳಿಂದ ಮಳೆ ಚೆನ್ನಾಗಿ ಸುರಿದ ಕಾರಣ ಹಳ್ಳದಲ್ಲಿ ನೀರು ಹರಿಯುತ್ತಿದೆ.

ಅದರಲ್ಲೂ ಈ ಬಾರಿ ಅಕಾಲಿಕ ಮಳೆ ಸುರಿದಿದ್ದರಿಂದ ಈಗಲೂ ರಸ್ತೆ ಮೇಲೆಯೇ ನೀರು ಹರಿಯುತ್ತಿದ್ದು, ನೀರನ್ನು ಸೀಳಿಕೊಂಡೇ ವಾಹನಗಳು ಸಂಚರಿಸ ಬೇಕಾಗಿದೆ. ಇದು ಒಂದು ರೀತಿಯಲ್ಲಿ ಅಪಾಯಕ್ಕೆ ಆಹ್ವಾನ ಎಂದರೂ ತಪ್ಪಾಗಲಾರದು. ಈ ಮಾರ್ಗದಲ್ಲಿ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು, ಖಾಸಗಿ ವಾಹನಗಳು ಮತ್ತು ಪ್ರಯಾಣಿಕರನ್ನು ತುಂಬಿಕೊಂಡು ಬರುವ ಆಟೋಗಳು ನಿತ್ಯವೂ ಈ ಹಳ್ಳದ ಮೇಲೆ ಸಂಚರಿಸುತ್ತವೆ.
ಹಳ್ಳದ ಮೇಲ್ಭಾಗದಲ್ಲಿ ಸ್ವಲ್ಪ ಮಳೆಯಾದರೆ ಸಾಕು ಕೆಳಭಾಗದ ಜನರ ಅರಿವಿಗೆ ಬರದೆ ಹಳ್ಳದಲ್ಲಿ ನೀರಿನ ಹರಿಯುವಿಕೆಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ. ಹಳ್ಳದ ಮೇಲೆ ಮೇಲ್ಗಾಲುವೆ ನಿರ್ಮಿಸಿದ ನೀರಾವರಿ ಇಲಾಖೆಯವರಿಗೆ ಹಳ್ಳಕ್ಕೆ ಸಮಾನಾಂತರವಾಗಿರುವ ರಸ್ತೆಯ ಸೇತುವೆಯನ್ನು ಎತ್ತರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆನ್ನುವ ಕನಿಷ್ಠ ಪ್ರಜ್ಞೆ ಮೂಡಲಿಲ್ಲ.
ಹೀಗಾಗಿಯೇ ಈ ಹಿಂದೆ 2004ರ ಅಕ್ಟೋಬರ್ ತಿಂಗಳಲ್ಲಿ ಬಿದ್ದ ಭಾರೀ ಮಳೆಗೆ ಹಳ್ಳದ ಮೇಲ್ಬಾಗದಲ್ಲಿನ ಹೇಮಾವತಿ ಕಾಲುವೆಯ ಮಣ್ಣಿನ ಏರಿ ಕೊಚ್ಚಿಹೋಗಿತ್ತು. ಕಾಲುವೆ ಏರಿ ಪುನರ್ ನಿರ್ಮಾಣ ಸಂದರ್ಭದಲ್ಲಿಯಾದರೂ ನೀರಾವರಿ ಇಲಾಖೆ ತನ್ನ ಕಾಳಜಿ ಪ್ರದರ್ಶಿಸಿ ಹಳ್ಳದ ಸೇತುವೆಯನ್ನು ಎತ್ತರಿಸುವ ಕೆಲಸ ಮಾಡಲಿಲ್ಲ.
ಈಗಲೂ ನೀರಾವರಿ ಇಲಾಖೆ ಅನಗತ್ಯ ಕಾಮಗಾರಿ ಯೋಜನೆಗಳನ್ನು ರೂಪಿಸಿ ಸರ್ಕಾರದ ಹಣ ವ್ಯಯ ಮಾಡಿದೆ. ಆದರೆ ಸಾರಂಗಿ ಹಳ್ಳಕ್ಕೊಂದು ಮೇಲು ಸೇತುವೆ ನಿರ್ಮಿಸಬೇಕೆನ್ನುವ ಆಲೋಚನೆ ನೀರಾವರಿ ಇಲಾಖೆಗಾಗಲೀ, ಲೋಕೋಪಯೋಗಿ ಇಲಾಖೆಗಾಗಲಿ ಬಂದಿಲ್ಲ. ಸಾರಂಗಿ ಹಳ್ಳಕ್ಕೆ ಮೇಲು ಸೇತುವೆಯಿಲ್ಲದ ಕಾರಣ ಜನ ಹಳ್ಳದ ನೀರಿನ ನಡುವೆಯೇ ಜೀವ ಭಯದಲ್ಲಿ ಸಂಚರಿಸುತ್ತಿದ್ದಾರೆ.
ವ್ಯಕ್ತಿ ಕೊಚ್ಚಿ ಹೋದ; ಕಳೆದ ನಾಲ್ಕು ದಶಕಗಳಿಂದ ಈ ಭಾಗದ ಜನ ಹಳ್ಳಕ್ಕೆ ಎತ್ತರದ ಸೇತುವೆ ನಿರ್ಮಿಸುವಂತೆ ಒತ್ತಾಯಿಸುತ್ತಿದ್ದರೂ ಯಾವುದೇ ಜನಪ್ರತಿನಿಧಿಗಳು ನಮ್ಮ ಸಮಸ್ಯೆಯ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎನ್ನುವುದು ಸಾರಂಗಿ ಗ್ರಾಮದ ಜನರ ಆರೋಪವಾಗಿದೆ. ಈ ಹಿಂದೆ ಕೈಗೋನಹಳ್ಳಿಯ ಯುವಕ ಉದಯಕುಮಾರ್ ದಿಢೀರ್ ಸುರಿದ ಮಳೆಗೆ ನೀರಿನ ರಭಸ ಹೆಚ್ಚಾದ ಪರಿಣಾಮ ಇದೇ ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದನ್ನು ಸ್ಮರಿಸಬಹುದಾಗಿದೆ.
ಇದೀಗ ಸಚಿವ ಕೆ. ಸಿ. ನಾರಾಯಣಗೌಡ ಸಾರಂಗಿ ಪಕ್ಕದ ಕೈಗೋನಹಳ್ಳಿ ಗ್ರಾಮದವರಾಗಿದ್ದು ಅವರು ಕಳೆದ ಎಂಟೂವರೆ ವರ್ಷದಿಂದ ಕ್ಷೇತ್ರದ ಶಾಸಕರಾಗಿದ್ದಾರೆ. ಇದೀಗ ರಾಜ್ಯದ ಪ್ರಭಾವಿ ಸಚಿವರೂ ಆಗಿದ್ದು, ಅವರು ಇನ್ನಾದರೂ ಇತ್ತ ಗಮನಹರಿಸಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುತ್ತಾರಾ? ಕಾದು ನೋಡಬೇಕಿದೆ.











Click it and Unblock the Notifications