ಸಚಿವ ನಾರಾಯಣ ಗೌಡ ಕಾಂಗ್ರೆಸ್ ಸೇರ್ಪಡೆಗೆ ತೀವ್ರ ವಿರೋಧ: ಜಿಲ್ಲಾಧ್ಯಕ್ಷರ ಕಾರಿಗೆ ಮೊಟ್ಟೆ ಎಸೆದ ಕಾರ್ಯಕರ್ತರು
ಗೆದ್ದಲು ಕಟ್ಟಿದ ಹುತ್ತಕ್ಕೆ ಹಾವು ಸೇರುವಂತೆ ನಾರಾಯಣಗೌಡ ಮೊದಲು ಬಿಎಸ್‌ಪಿ, ಜೆಡಿಎಸ್, ಅನಂತರ ಬಿಜೆಪಿ ಸೇರಿ ಆ ಪಕ್ಷಗಳನ್ನು ಹಾಳುಗೆಡವಿ ಇದೀಗ ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಜಿಲ್ಲಾಧ್ಯಕ್ಷರ ವಿರುದ್ಧವೇ ಪ
ಮಂಡ್ಯ ಮಾರ್ಚ್ 6: ಸಚಿವ ನಾರಾಯಣ ಗೌಡ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನುವ ವಿಚಾರ ಚರ್ಚೆಯಲ್ಲಿರುವಾಗಲೇ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪಕ್ಷದ ಮುಖಂಡರ ವಿರುದ್ಧ ಸಿಡಿದೆದ್ದಿದ್ದಾರೆ.
ಮಾರ್ಚ್ 13 ರಂದು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮಂಡ್ಯ ಪಟ್ಟಣಕ್ಕೆ ಆಗಮಿಸಲಿರುವ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯ ಯಶಸ್ಸಿಗೆ ಸಂಬಂಧಿಸಿದಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಪಕ್ಷದ ಮುಖಂಡರು ಮತ್ತು ಪ್ರಮುಖ ಕಾರ್ಯಕರ್ತರ ಸಭೆ ಕರೆದಿದ್ದರು.

ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಶಾಸಕರಾದ ಕೆ.ಬಿ ಚಂದ್ರಶೇಖರ್, ಬಿ.ಪ್ರಕಾಶ್, ಭಾರತ್ ಜೋಡೋ ಉತ್ಸುವಾರಿ ವಿಜಯರಾಮೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕಿಕ್ಕೇರಿ ಸುರೇಶ್, ಬಿ.ನಾಗೇಂದ್ರ ಕುಮಾರ್ ಮತ್ತು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ದಿ ಮತ್ತು ಹಣಕಾಸು ನಿಗಮದ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ ಸೇರಿದಂತೆ ನೂರಾರು ಕಾರ್ಯಕರ್ತರು ಸಭೆಗೆ ಆಗಮಿಸಿದ್ದರು.
ಸಭೆಯ ಮೂಲ ಉದ್ದೇಶವನ್ನು ತಿಳಿಸಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಎದ್ದು ನಿಲ್ಲುತ್ತಿದ್ದಂತೆಯೇ ಏಕಾಏಕಿ ಸಿಡಿದೆದ್ದ ಕಾರ್ಯಕರ್ತರು ಸಚಿವ ಕೆ.ಸಿ.ನಾರಾಯಣಗೌಡರ ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದರಲ್ಲದೆ, ಟಿಕೆಟ್ ಆಕಾಂಕ್ಷಿತರಾಗಿ ಅರ್ಜಿ ಸಲ್ಲಿಸಿರುವ ಆರು ಜನರಲ್ಲಿ ಯಾರದರೂ ಒಬ್ಬರಿಗೆ ಇಲ್ಲಿಯೇ ಟಿಕೆಟ್ ಘೋಷಿಸುವಂತೆ ಪಟ್ಟು ಹಿಡಿದು ಗಲಭೆ ಎಬ್ಬಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಸಚಿವ ಕೆ.ಸಿ.ನಾರಾಯಣಗೌಡರ ಕೊಡುಗೆಯೇನು? ಟಿಕೆಟ್ ಆಕಾಂಕ್ಷಿತರಾಗಿ ಅರ್ಜಿ ಸಲ್ಲಿಸಿರುವ ಆರು ಜನರಿಗೆ ಟಿಕೆಟ್ ನಿರಾಕರಿಸಲು ಕಾರಣವೇನು? ಕಳೆದ 10 ವರ್ಷಗಳಿಂದ ಕ್ಷೇತ್ರದಲ್ಲಿ ನಮ್ಮ ಶಾಸಕರಿಲ್ಲದಿದ್ದರೂ ನಾವೆಲ್ಲ ಗಟ್ಟಿಯಾಗಿ ಕಾಂಗ್ರೆಸ್ ಪಕ್ಷದಲ್ಲಿ ಉಳಿದಿದ್ದೇವೆ.

ಗೆದ್ದಲು ಕಟ್ಟಿದ ಹುತ್ತಕ್ಕೆ ಹಾವು ಸೇರುವಂತೆ ನಾರಾಯಣಗೌಡ ಮೊದಲು ಬಿಎಸ್‌ಪಿ, ಜೆಡಿಎಸ್, ಅನಂತರ ಬಿಜೆಪಿ ಸೇರಿ ಆ ಪಕ್ಷಗಳನ್ನು ಹಾಳುಗೆಡವಿ ಇದೀಗ ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ. ಎರಡು ಅವಧಿಗೆ ತಮ್ಮನ್ನು ಶಾಸಕರನ್ನಾಗಿ ಮಾಡಿ ರಾಜಕೀಯ ಶಕ್ತಿ ನೀಡಿದ ಜೆಡಿಎಸ್ ಪಕ್ಷವನ್ನೇ ಕಾಲಿನಿಂದ ಒದ್ದವನು, ಪಕ್ಷಕ್ಕೆ ಕರೆತಂದು ಮಂತ್ರಿಯನ್ನಾಗಿ ಮಾಡಿದ ಬಿಜೆಪಿ ಪಕ್ಷವನ್ನೇ ಒದ್ದು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿರುವ ನಾರಾಯಣಗೌಡರಿಂದ ಕ್ರೇತದಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಲು ಸಾಧ್ಯವಿಲ್ಲ ಎಂದು ಕಾರ್ಯಕರ್ತರು ಪಟ್ಟು ಹಿಡಿದರು.
ಅಧಿಕಾರಕ್ಕಾಗಿ ಪಕ್ಷಕ್ಕೆ ಬರುತ್ತಿರುವ ಕೆ.ಸಿ.ನಾರಾಯಣಗೌಡ ನಾಳೆ ಕಾಂಗ್ರೆಸ್ ನಾಯಕತ್ವಕ್ಕೂ ಸೆಡ್ಡು ಹೊಡೆಯುತ್ತಾರೆ. ನಾರಾಯಣಗೌಡರ ಅಧಿಕಾರದ ಅವಧಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಳ್ಳಿ ಹಳ್ಳಿಗಳಲ್ಲಿಯೂ ಕಿರುಕುಳ ಅನುಭವಿಸಿದ್ದಾರೆ. ಎಷ್ಟೋ ಕಾರ್ಯಕರ್ತರ ಮೇಲೆ ಸುಳ್ಳು ಪಕ್ರರಣಗಳನ್ನು ದಾಖಲಿಸಿ ಕಿರುಕುಳ ನೀಡಲಾಗಿದೆ.
ಎಲ್ಲ ಪಕ್ಷಗಳಲ್ಲೂ ತಿಂದುಂಡು ಬಂದವರಿಗೆ ಮತ್ತೆ ಕಾಂಗ್ರೆಸ್ ಪಕ್ಷದಲ್ಲಿ ಬಂದು ತಿಂದುಣ್ಣಲು ಅವಕಾಶ ನೀಡುತ್ತಿರುವ ನಿಮಗೆ ನಾಚಿಕೆಯಾಗುತ್ತಿಲ್ಲವೆ?. ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರ ಸ್ವಾಭಿಮಾನವನ್ನು ಪಕ್ಷಾಂತರಿಗಳ ಪಾದಕ್ಕೆ ಅರ್ಪಿಸಿ ನಮ್ಮನ್ನು ಮಾರಾಟಕ್ಕಿಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಸಿ.ಡಿ.ಗಂಗಾಧರ್ ಮಾತಿಗೆ ಅಡ್ಡಿಪಡಿಸಿದರಲ್ಲದೆ ಪಕ್ಷದ ನಾಯಕರುಗಳ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಕಾರ್ಯಕರ್ತರ ದಿಢೀರ್ ಪ್ರತಿಭಟನೆಯಿಂದ ವಿಚಲಿತರಾದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ನಿಮ್ಮ ಅಭಿಪ್ರಾಯಕ್ಕೆ ನಮ್ಮ ಸಮ್ಮತಿಯಿದೆ. ಪಕ್ಷದ ಹೈಕಮಾಂಡಿಗೆ ಇಲ್ಲಿನ ಘಟನಾವಳಿಯ ದೃಶ್ಯಗಳನ್ನು ಚಿತ್ರಿಸಿ ಕಳುಹಿಸಿದ್ದೇನೆ. ನಾರಾಯಣಗೌಡರ ಕಾಂಗ್ರೆಸ್ ಸೇರ್ಪಡೆಗೆ ಜಿಲ್ಲಾ ಕಾಂಗ್ರೆಸ್ ಸಂಪೂರ್ಣ ವಿರೋಧವಿದೆ ಎಂದು ಹೇಳಿ ಕಾರ್ಯಕರ್ತರನ್ನು ಸಮಧಾನ ಪಡಿಸಲು ಯತ್ನಿಸಿದರೂ ಕಾರ್ಯಕರ್ತರ ಆಕ್ರೋಶ ತಣ್ಣಗಾಗಲಿಲ್ಲ.
ಕೆ.ಸಿ.ಎನ್ ಸ್ವಾಗತಿಸುತ್ತಿರುವ ನಾಯಕರಿಗೆ ನಮ್ಮ ಧಿಕ್ಕಾರವಿದೆ ಎಂದು ಹೇಳಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಕೈಗೆ ಬಳೆ ನೀಡಿ ಪ್ರತಿಭಟಿಸಿದರಲ್ಲದೆ ಸುಮಾರು ಎರಡು ಘಂಟೆಗಳ ಕಾಲ ಮುಖಂಡರುಗಳನ್ನು ದಿಗ್ಬಂಧನಕ್ಕೆ ಒಳಪಡಿಸಿ ಘೇರಾವ್ ಹಾಕಿದರು.
ಕಾರ್ಯಕರ್ತರ ಆಕ್ರೋಶಕ್ಕೆ ಮಣಿದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಸಭೆಯನ್ನು ರದ್ದು ಪಡಿಸಿ ಹೊರ ನಡೆದರು. ಆದರೂ ಕಾರ್ಯಕರ್ತರ ಆಕ್ರೋಶ ತಣ್ಣಗಾಗಲಿಲ್ಲ. ಕಾರು ಹತ್ತಿ ಹೊರಡಲು ಅನುವಾದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಾರಿನ ಮೇಲೆ ಮೊಟ್ಟೆಗಳನ್ನು ಎಸೆದು ಪಕ್ಷದ ನಾಯಕರುಗಳ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿದರಲ್ಲದೆ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿದ್ದ ಪಕ್ಷದ ಬಾವುಟಗಳನ್ನು, ಫ್ಲೆಕ್ಸ್, ಬ್ಯಾನರ್ ಮತ್ತು ಬಂಟಿಂಗ್ಸ್ ಗಳನ್ನು ಕಿತ್ತು ತಂದು ನಡು ರಸ್ತೆಯಲ್ಲಿಯೇ ಅವುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications