ಮಂಡ್ಯದಲ್ಲಿ ಸಿದ್ದರಾಮಯ್ಯನವರ ಒಂದೇ ಪ್ರಶ್ನೆಗೆ ಮೊಳಗಿತು "ಹೌದು ಹುಲಿಯಾ" ಘೋಷಣೆ!
ಮಂಡ್ಯ, ನವೆಂಬರ್ 8: ಕರ್ನಾಟಕದಲ್ಲಿ ಬಡವರ ಪರ ಯೋಜನೆಗಳು ಬೇಕಾದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಮಂಡ್ಯದ ಕನಕ ಭವನದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ವರಸಿದ್ಧಿ ವಿನಾಯಕ ದೇವಾಲಯ ಹಾಗೂ ಅತಿಥಿ ಗೃಹ ಉದ್ಘಾಟನೆ ಕಾರ್ಯಕ್ರಮ ಉದ್ದೇಶಿಸಿ ಸಿದ್ದರಾಮಯ್ಯ ಮಾತನಾಡಿದರು.
ಕರ್ನಾಟಕದಲ್ಲಿ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಗಾಳಿ ಬೀಸುತ್ತಿದೆ. ಬಡವರ ಯೋಜನೆಗಳು ಬರಬೇಕಾದಲ್ಲಿ ಕಾಂಗ್ರೆಸ್ ಪಕ್ಷವೇ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಈ ಹಿನ್ನೆಲೆ ಎಲ್ಲರೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಬೇಕು. ಮಂಡ್ಯ ಜಿಲ್ಲೆಯಲ್ಕಿ ಕಾಂಗ್ರೆಸ್ ಗೆಲ್ಲಬೇಕು, ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು. ಕೇವಲ ಘೋಷಣೆ ಕೂಗಿದರೆ ಸಾಕಾಗುವುದಿಲ್ಲ, ಕಾಂಗ್ರೆಸ್ ಪರವಾಗಿ ಮತದಾನ ಮಾಡಿ ಗೆಲ್ಲಿಸಬೇಕು ಎಂದು ಸಿದ್ದರಾಮಯ್ಯ ಕರೆ ಕೊಟ್ಟರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆಯೋ ಇಲ್ಲವೋ ಎಂಬ ಬಗ್ಗೆ ಸಭಿಕರ ಎದುರು ಸಿದ್ದರಾಮಯ್ಯ ಪ್ರಶ್ನೆಯಿಟ್ಟರು. ಈ ವೇಳೆ ಕಾರ್ಯಕ್ರಮದಲ್ಲಿ 'ಹೌದು ಹುಲಿಯಾ' ಎಂಬ ಘೋಷಣೆಗಳು ಮೊಳಗಿದ್ದು ಮತ್ತಷ್ಟು ವಿಶೇಷವಾಗಿತ್ತು.

"ಬಿಜೆಪಿ ನಾಯಕರಿಂದ ಕೊಳಕು ರಾಜಕಾರಣ"
"ಬಿಜೆಪಿಯವರಂತಹ ಕೊಳಕರು, ಜಾತಿವಾದಿಗಳು ಮತ್ತೊಬ್ಬರಿಲ್ಲ. ಸಂವಿಧಾನ ಬದಲಾವಣೆ ಮಾಡುತ್ತೇನೆ ಎಂದು ಹೇಳಿದವರ ಪಕ್ಷಕ್ಕೆ ಹಲವರು ಹೋಗುತ್ತಿದ್ದಾರೆ ಎಂದು ನಾನು ಈ ಹಿಂದೆ ಭಾಷಣ ಮಾಡಿದ್ದೆನು. ಆದರೆ ಅದನ್ನೇ ಬಿಜೆಪಿಯವರು ತಿರುಚಿದ್ದಾರೆ. ನನ್ನ ಹೇಳಿಕೆ ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನೇ ಕೆಟ್ಟದ್ದಾಗಿ ಹೇಳಿಕೊಂಡು ನನ್ನ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ ನೀವು ಅವರ ಬಗ್ಗೆ ಹುಷಾರಾಗಿರಬೇಕು,"ಎಂದುಸಿದ್ದರಾಮಯ್ಯ ಹೇಳಿದರು.

ಪ್ರತಿಕೃತಿ ಸುಟ್ಟಾಕ್ಷಣ ನನ್ನ ಪ್ರೀತಿಸುವ ಜನರು ಸುಟ್ಟು ಹೋಗಲ್ಲ
ನನ್ನ ಪ್ರತಿಕೃತಿಯನ್ನು ಸುಟ್ಟ ತಕ್ಷಣ ನಾನು ಸುಟ್ಟು ಹೋಗುವುದಿಲ್ಲ. ನನ್ನ ಜನ, ನನ್ನ ಪ್ರೀತಿಸುವವರು ಸುಟ್ಟು ಹೋಗುವುದಿಲ್ಲ. ಎಲ್ಲರೂ ಸಮಾನವಾಗಿರಬೇಕು. ಜಾತಿ ವ್ಯವಸ್ಥೆ ಸಮಾಜದಿಂದ ದೂರವಾಗಬೇಕು. ಮನುಷ್ಯರಾಗಿ, ಸಮಾನರಾಗಿ ಬದುಕುವಂತಾಗಬೇಕು. ಬಹಳ ಜನ ಬುದ್ಧಿಹೀನರು ಟೀಕೆ ಮಾಡುತ್ತಾರೆ. ಸಿದ್ದರಾಮಯ್ಯ ಕುರುಬ ಸಮಾಜಕ್ಕೆ ಏನು ಕೊಟ್ಟ ಅಂತಾರೆ. ಒಂದು ಜಾತಿಯಲ್ಲಿ ಮಾತ್ರ ಬಡವ, ಶ್ರೀಮಂತರು ಇರುವುದಿಲ್ಲ. ಎಲ್ಲಾ ಜಾತಿಯಲ್ಲೂ ಬಡವರಿದ್ದಾರೆ. ಮುಖ್ಯಮಂತ್ರಿಯಾಗಿ ಒಂದು ಸಮಾಜದ ಅಭಿವೃದ್ಧಿ ಬಯಸಲು ಸಾಧ್ಯವೇ?. ಹೀಗಾಗಿ ಎಲ್ಲಾ ಜಾತಿಯ ಬಡವರ ಅಭಿವೃದ್ಧಿ ಆಗಬೇಕು. ನಾನು ಕೊಟ್ಟ ಯೋಜನೆಗಳು ಒಂದು ಜಾತಿಗೆ ಸೀಮಿತವಾಗಿಲ್ಲ ಎಂದು ಸಿದ್ದರಾಮಯ್ಯ ತಿರುಗೇಟು ಕೊಟ್ಟರು.

ನನ್ನ ವಿರುದ್ಧ ಕೊಳಕು ಮನಸಿನವರಿಂದ ಸುಳ್ಳು ಆರೋಪ
"ರಾಜ್ಯದಲ್ಲಿ ಅವಕಾಶ ವಂಚಿತರ ಪರ ನಾನು ಕೆಲಸ ಮಾಡಿದ್ದೇನೆ. ಆದರೂ ಸಿದ್ದರಾಮಯ್ಯ ಜಾತಿ ಮಾಡುತ್ತಾನೆ ಅಂತಾರೆ. ಕೆಂಪೇಗೌಡ, ಕಿತ್ತೂರು ರಾಣಿ ಚೆನ್ನಮ್ಮ, ಟಿಪ್ಪು, ಭಗೀರಥ, ಕೃಷ್ಣ, ವೇಮನ ಮತ್ತಿತರರ ಜಯಂತಿ ಮಾಡಿದ್ದು ನಾನು. ಆದರೂ ಜಾತಿ ಜಾತಿ ಅಂತಾರೆ. ಈ ಜಾತಿ ಮಾಡುವ ಕೊಳಕು ಮನಸ್ಸಿನವರು ನನ್ನ ವಿರುದ್ಧ ಆರೋಪ ಮಾಡುತ್ತಾರೆ. ರಾಜ್ಯದಲ್ಲಿ ಅರಸು ನಂತರ 5 ವರ್ಷ ಪೂರ್ಣಾವಧಿ ಆಡಳಿತ ನಡೆಸಿದ್ದು ನಾನು. ಹೀಗಾಗಿ ಹೊಟ್ಟೆ ಕಿಚ್ಚಿಗಾಗಿ ಈ ರೀತಿ ಆರೋಪ ಮಾಡುತ್ತಾರೆ," ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಗಂಭೀರ ಆರೋಪ
ಹಿಂದುಳಿದ ವರ್ಗಗಳಿಗೆ ನಾವು ರಾಜಕೀಯ ಮೀಸಲಾತಿ ಕೊಟ್ಟಿದ್ದೇವೆ. 1994ರಲ್ಲಿ ರಾಜಕೀಯ ಮೀಸಲಾತಿ ಕೊಟ್ಟಿದ್ದೇವೆ. ಹಾಗಾಗಿ ಇವತ್ತು ಬಿಸಿಎಂ-ಎ, ಬಿ ಮೀಸಲಾತಿಯಿಂದ ಹಲವರು ಗೆದ್ದಿದ್ದಾರೆ. ಆದರೆ ಬಿಜೆಪಿಯವರು ಹಿಂದುಳಿದ ಜಾತಿಗಳ ವಿರೋಧಿಗಳು. ನಾವು ಕೊಟ್ಟ ಮೀಸಲಾತಿ ವಿರುದ್ಧ ಬಿಜೆಪಿಯವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಬಿಜೆಪಿಯವರ ಮನವಿ ವಿರುದ್ಧ ತೀರ್ಪು ಕೊಟ್ಟಿತು.












Click it and Unblock the Notifications