ನಿಖಿಲ್ ನಾಮಪತ್ರ ಅಸಿಂಧುಗೊಳಿಸಲು ಚುನಾವಣಾ ಆಯೋಗಕ್ಕೆ ಮನವಿ
ಮಂಡ್ಯ, ಮಾರ್ಚ್ 28: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರ ಅಸಿಂಧುಗೊಳಿಸುವಂತೆ ಒತ್ತಾಯಿಸಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಬೆಂಬಲಿಗರು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಚುನಾವಣಾ ಆಯೋಗ ನಿಗದಿಪಡಿಸಿದ ಅವಧಿ ಮುಗಿದ ಬಳಿಕ ಕಾನೂನು ಬಾಹಿರವಾಗಿ ನಿಖಿಲ್ ಕುಮಾರಸ್ವಾಮಿ ಅವರ ಹೊಸ ಮಾದರಿಯ ನಾಮಪತ್ರವನ್ನು ಜಿಲ್ಲಾಧಿಕಾರಿ ಸ್ವೀಕರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ನಿಖಿಲ್ ಅವರು ಮೊದಲು ಸಲ್ಲಿಸಿದ್ದ ನಾಮಪತ್ರ ಹಳೆಯ ಮಾದರಿಯಲ್ಲಿತ್ತು. ಇದನ್ನು ಪರಿಶೀಲಿಸಿದ ಬಳಿಕ ಮಂಡ್ಯದ ಜಿಲ್ಲಾಧಿಕಾರಿಗಳೇ ಸ್ವತಃ ನಿಖಿಲ್ ಅವರನ್ನು ಕರೆಯಿಸಿ ಬುಧವಾರ ಹೊಸ ನಾಮಪತ್ರ ಸ್ವೀಕಾರ ಮಾಡಿದ್ದರು. ಇದಕ್ಕೆ ಸುಮಲತಾ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅವಧಿ ಮುಗಿದ ಬಳಿಕ ಕಾನೂನು ಬಾಹಿರವಾಗಿ ಪುನಃ ಹೊಸ ಮಾದರಿಯ ನಾಮಪತ್ರ ಸ್ವೀಕರಿಸಲಾಗಿದೆ. ಹೊಸ ಮಾದರಿಯಲ್ಲಿ ಎಂಟು ಕಾಲಂ ಅಫಿಡವಿಟ್ ಕಾಲಂ ಭರ್ತಿ ಮಾಡಬೇಕಿತ್ತು. ಆದರೆ, ನಿಖಿಲ್ ಹಳೆಯ ಮಾದರಿಯಂತೆ ಆರು ಕಾಲಂ ಭರ್ತಿ ಮಾಡಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಪರಿಶೀಲನೆ ಮಾಡುವ ಸಂದರ್ಭದಲ್ಲಿಯೇ ನಾವು ಆಕ್ಷೇಪ ಸಲ್ಲಿಸಿದ್ದೆವು. ನಾಮಪತ್ರದೊಂದಿಗೆ ಇದ್ದ ಪ್ರಮಾಣಪತ್ರವನ್ನು ತೋರಿಸಿರಲಿಲ್ಲ. ಅದನ್ನು ಕೇಳಿದ್ದಕ್ಕೆ ಲಿಖಿತ ದೂರು ನೀಡುವಂತೆ ಹೇಳಿದ್ದರು ಎಂದು ವಿವರಿಸಿದ್ದಾರೆ.
ಜೆಡಿಎಸ್ ಸಂಸದರು ಏನು ವಿದ್ಯಾರ್ಹತೆ ಪಡೆದಿದ್ದಾರೆ?
ಚುನಾವಣಾ ಆಯೋಗಕ್ಕೆ ನಾವು ದೂರು ನೀಡಿದ ಬಳಿಕ ಮತ್ತೊಂದು ನಾಮಪತ್ರ ಸಲ್ಲಿಕೆ ಮಾಡಿರುವ ಗುಮಾನಿ ಇದೆ ಎಂದು ದೂರಲಾಗಿದೆ.
ಫಾರಂ 26ರಲ್ಲಿ ತಪ್ಪಿದ್ದರಿಂದ ಚೆಕ್ ಲಿಸ್ಟ್ ನೀಡಿದ್ದೆವು. ಬಳಿಕ ಅದನ್ನು ಸರಿಪಡಿಸಿಕೊಟ್ಟಿದ್ದಾರೆ. ನಾಮಪತ್ರ ಅಸಿಂಧು ಆಗುತ್ತದೆ ಎನ್ನುವುದೆಲ್ಲ ಊಹಾಪೋಹ ಎಂಬುದಾಗಿ ಜಿಲ್ಲಾಧಿಕಾರಿ ಮಂಜುಶ್ರೀ ಹೇಳಿದ್ದಾರೆ.












Click it and Unblock the Notifications