ಬೂದಿ ಮುಚ್ಚಿದ ಕೆಂಡದಂತಿರುವ ಮಂಡ್ಯ, ಇಳಿಯದ ಕಾವು

By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಸೆಪ್ಟೆಂಬರ್ 10 : ಕಾವೇರಿಗಾಗಿ ಕಳೆದ ಐದು ದಿನಗಳಿಂದ ಪ್ರಕ್ಷುಬ್ದ ವಾತಾವರಣ ಕಂಡಿದ್ದ ಮಂಡ್ಯ ನಗರ ಸಹಜಸ್ಥಿತಿಯತ್ತ ಮರಳುತ್ತಿದ್ದರೂ ಕಾವೇರಿ ಕಿಚ್ಚು ಇನ್ನೂ ನಿಗಿನಿಗಿ ಉರಿಯುತ್ತಲೇ ಇದೆ. ಪೊಲೀಸರ ಲಾಠಿ ಚಾರ್ಜಿನಿಂದ ಆದ ಬಾವು ತುಸು ಇಳಿದರೂ, ಹೋರಾಟದ ಕಾವು ಇನ್ನೂ ಇಳಿದಿಲ್ಲ.

ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಐದು ದಿನಗಳಿಂದ ಇಡೀ ಮಂಡ್ಯ ಜಿಲ್ಲೆ ಹೊತ್ತಿ ಉರಿದಿತ್ತು. ಪ್ರತಿಭಟನೆಗಳ, ಉಪವಾಸ ಸತ್ಯಾಗ್ರಹಗಳ ಮಹಾಪೂರವೇ ನಡೆದವು. ಇದಾವುದಕ್ಕೂ ರಾಜ್ಯ ಸರಕಾರ ಸೊಪ್ಪು ಹಾಕಲಿಲ್ಲ, ಕಾವೇರಿ ನೀರು ಹರಿಯುತ್ತಲೇ ಇತ್ತು. [ಮಂಡ್ಯದಲ್ಲಿ ಶೇ90 ರಷ್ಟು ಕೃಷಿಕಾರ್ಯ ಸಂಪೂರ್ಣ: ರಮ್ಯಾ]

ಕರ್ನಾಟಕ ಬಂದ್ ದಿನ, ಶುಕ್ರವಾರ ರೈತರು ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರು ಕೆ.ಆರ್.ಎಸ್.ಗೆ ಮುತ್ತಿಗೆ ಹಾಕಲು ಯತ್ನಿಸಿ ಪೊಲೀಸರ ಲಾಠಿ ರುಚಿಯನ್ನು ನೋಡಿದ್ದರು. ಇದರಿಂದಾಗಿ ಶನಿವಾರ ಬೆಳಗ್ಗೆ ಚಳವಳಿಯ ಕಾವು ಸ್ವಲ್ಪ ಮಟ್ಟಿಗೆ ತಣ್ಣಗಾಗಿರುವಂತೆ ಭಾಸವಾಗಿತ್ತಾದರೂ, ಮಧ್ಯಾಹ್ನದ ವೇಳೆಗೆ ಮತ್ತೆ ಹೆಚ್ಚಾಯಿತು.

ಶನಿವಾರ ಬೆಳಗ್ಗೆಯಿಂದ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ತೆರೆದು ತಮ್ಮ ಕೆಲಸ ಮುಂದುವರಿಸುವಂತೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ತಿಳಿಸಿದ್ದರ ಮೇರೆಗೆ ವ್ಯಾಪಾರ ವಹಿವಾಟು ಆರಂಭವಾಗಿವೆ. ಸಾರಿಗೆ ಮತ್ತು ಖಾಸಗಿ ಬಸ್ಸುಗಳ ಸಂಚಾರ ಆರಂಭವಾಗಿದ್ದರಿಂದ ಗ್ರಾಮೀಣ ಪ್ರದೇಶದ ಜನರು ನಗರದತ್ತ ಆಗಮಿಸುತ್ತಿದ್ದುದು ಕಂಡುಬಂತು. [ಕಾವೇರಿ ವಿವಾದ : ಸೆಪ್ಟೆಂಬರ್ 15ರಂದು ರೈಲ್ವೆ ಬಂದ್]

ಜನತಾದಳ ಕಾರ್ಯಕರ್ತರಿಂದ ಬೈಕ್ ರ‍್ಯಾಲಿ

ಜನತಾದಳ ಕಾರ್ಯಕರ್ತರಿಂದ ಬೈಕ್ ರ‍್ಯಾಲಿ

ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ತಕ್ಷಣ ನಿಲುಗಡೆಗೊಳಿಸುವಂತೆ ಒತ್ತಾಯಿಸಿ ಜಾತ್ಯತೀತ ಜನತಾದಳದ ಕಾರ್ಯಕರ್ತರು, ಸಂಸದ ಸಿ.ಎಸ್. ಪುಟ್ಟರಾಜು ಹಾಗೂ ಜಾ.ದಳ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್ ನೇತೃತ್ವದಲ್ಲಿ ಬೈಕ್ ರ‍್ಯಾಲಿ ನಡೆಸಿದರು. [ಪೊಲೀಸರಿಂದ ಗಾಳಿಯಲ್ಲಿ ಗುಂಡು, ಅಶ್ರುವಾಯು, ಲಾಠಿ ಪ್ರಹಾರ]

ಸಿದ್ದು, ಜಯಾ, ನಾರಿಮನ್ ವಿರುದ್ಧ ಘೋಷಣೆ

ಸಿದ್ದು, ಜಯಾ, ನಾರಿಮನ್ ವಿರುದ್ಧ ಘೋಷಣೆ

ತಾಲೂಕಿನ ಹನಕೆರೆ ಗ್ರಾಮದಿಂದ ಜಿ.ಪಂ. ಸದಸ್ಯ ಯೋಗೇಶ್ ನೇತೃತ್ವದಲ್ಲಿ ಬೈಕ್ ರ‍್ಯಾಲಿ ಆರಂಭಿಸಿದ ಕಾರ್ಯಕರ್ತರು, ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಹಾಗೂ ವಕೀಲ ನಾರಿಮನ್ ವಿರುದ್ಧ ಘೋಷಣೆ ಕೂಗಿದರು. [ಕದ್ದು ಮುಚ್ಚಿ ಕೆಲ್ಸ, ಟೆಕ್ಕಿಗಳಿಗೆ ಬಿಸಿ ಮುಟ್ಟಿಸಿದ ಕನ್ನಡಿಗರು]

ಸರಕಾರದ ವಿರುದ್ಧ ಪುಟ್ಟರಾಜು ವಾಗ್ದಾಳಿ

ಸರಕಾರದ ವಿರುದ್ಧ ಪುಟ್ಟರಾಜು ವಾಗ್ದಾಳಿ

ಪುಟ್ಟರಾಜು ಹಾಗೂ ಜಫ್ರುಲ್ಲಾಖಾನ್ ಅವರೂ ಸಹ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ‍್ಯಾಲಿ ನಡೆಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪುಟ್ಟರಾಜು, ರಾಜ್ಯ ಸರ್ಕಾರ ರೈತರ ಹಿತವನ್ನು ಮರೆತು ತಮಿಳುನಾಡಿಗೆ ನೀರು ಹರಿಸುವ ಮೂಲಕ ನಾಡಿನ ಜನತೆಗೆ ದ್ರೋಹವೆಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮಿಳ್ನಾಡಿಗೆ ಕಾವೇರಿ ಬಸಿದು ಕೊಡುತ್ತಿದ್ದಾರೆ!

ತಮಿಳ್ನಾಡಿಗೆ ಕಾವೇರಿ ಬಸಿದು ಕೊಡುತ್ತಿದ್ದಾರೆ!

ಈ ಹಿಂದೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳು ಜಿಲ್ಲೆಯ ಕೃಷಿ ಚಟುವಟಿಕೆಗೆ ಕಟ್ಟು ಪದ್ಧತಿ ಪ್ರಕಾರ ನೀರು ಕೊಡುತ್ತೇವೆ ಎಂದು ವಾಗ್ದಾನ ಮಾಡಿ ಈಗ ಅದನ್ನು ಲೆಕ್ಕಿಸದೆ ತಮಿಳುನಾಡಿಗೆ ಕೃಷ್ಣರಾಜಸಾಗರ ಜಲಾಶಯದಿಂದ ಬಸಿದುಕೊಟ್ಟಿದ್ದಾರೆ. ಹೀಗಿರುವಾಗ ಇನ್ನು ಬೆಳೆಗಳಿಗೆ ನೀರನ್ನು ಎಲ್ಲಿಂದ ಕೊಡುತ್ತಾರೆ ಎಂದು ಪ್ರಶ್ನಿಸಿದರು.

ವಿವಿಧ ಸಂಘಟನೆಗಳ, ಮಹಿಳೆಯರ ಪ್ರತಿಭಟನೆ

ವಿವಿಧ ಸಂಘಟನೆಗಳ, ಮಹಿಳೆಯರ ಪ್ರತಿಭಟನೆ

ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕೆಲ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಗಳನ್ನು ಮುಂದುವರಿಸಿದರು. ಜಿಲ್ಲಾ ಮಹಿಳೋದಯ ಮಹಿಳಾ ಒಕ್ಕೂಟದ ಕಾರ್ಯಕರ್ತರು, ಮಂಡ್ಯ ಜಿಲ್ಲಾ ಡಿಟಿಎಚ್ ಡಿಜಿಟಲ್ ಮಾರಾಟಗಾರರ ಸಂಘದ ಕಾರ್ಯಕರ್ತರು ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಸ್ತೆ ತಡೆ

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಸ್ತೆ ತಡೆ

ರೈತ ಹಿತರಕ್ಷಣಾ ಸಮಿತಿ ವತಿಯಿಂದ ನಗರದ ಸರ್ ಎಂ.ವಿ. ಪ್ರತಿಮೆ ಎದುರು ಮಾಜಿ ಸಂಸದ ಜಿ. ಮಾದೇಗೌಡರ ನೇತೃತ್ವದಲ್ಲಿ ನಡೆಸುತ್ತಿದ್ದ ಧರಣಿ ಸತ್ಯಾಗ್ರಹ ಶನಿವಾರವೂ ಸಹ ಮುಂದುವರಿಯಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸುವ ಮೂಲಕ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದರು.

ಗ್ರಾಮಸ್ಥರಿಂದ ಎತ್ತಿನ ಗಾಡಿ ಮೆರವಣಿಗೆ

ಗ್ರಾಮಸ್ಥರಿಂದ ಎತ್ತಿನ ಗಾಡಿ ಮೆರವಣಿಗೆ

ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನಿರನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಿ ತಾಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಎತ್ತಿನ ಗಾಡಿಗಳೊಂದಿಗೆ ಪ್ರತಿಭಟನೆ ನಡೆಸಿದರು. ತಾಲೂಕಿನ ಪಣಕನಹಳ್ಳಿ, ತಂಡಸನಹಳ್ಳಿ, ಕೋಣನಹಳ್ಳಿ, ದೊಡ್ಡಬಾಣಸವಾಡಿ, ಚಿಕ್ಕಮಂಡ್ಯ, ಹುಲಿವಾನ, ಬೇವಿನಹಳ್ಳಿ ಗ್ರಾಮಗಳ ಜನತೆ ಎತ್ತಿನ ಗಾಡಿಗಳೊಂದಿಗೆ ಪ್ರತಿಭಟನೆ ನಡೆಸಿದರು.

ತ್ರಿಮೂರ್ತಿಗಳ ಪ್ರತಿಕೃತಿ ದಹನ

ತ್ರಿಮೂರ್ತಿಗಳ ಪ್ರತಿಕೃತಿ ದಹನ

ಗ್ರಾಮಸ್ಥರು ತಮ್ಮ ಗ್ರಾಮಗಳಿಂದ ಎತ್ತಿನ ಗಾಡಿಗಳಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಕೀಲ ನಾರಿಮನ್ ಅವರ ಪ್ರತಿಕೃತಿಗಳನ್ನು ತಂದು ನಗರ ಜೆ.ಸಿ. ವೃತ್ತದಲ್ಲಿ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಸಹಜ ಸ್ಥಿತಿಯತ್ತ ಸಂಚಾರ

ಸಹಜ ಸ್ಥಿತಿಯತ್ತ ಸಂಚಾರ

ಐದು ದಿನಗಳಿಂದಲೂ ಹೆದ್ದಾರಿ ಬಂದ್ ಆಗಿದ್ದ ಸಂಚಾರ ಇಂದು ಸಹಜವಾಗಿಯೇ ಎಲ್ಲ ವಾಹನಗಳು ಸಂಚಾರ ಆರಂಭಿಸಿದ್ದವು. ಸಾರಿಗೆ ಹಾಗೂ ಖಾಸಗಿ ಬಸ್ಸುಗಳ ಸಂಚಾರ ಎಂದಿನಂತಿತ್ತು. ಕೆಲವು ಕಡೆಗಳಲ್ಲಿ ಮಾತ್ರ ಪೊಲೀಸರು ಬದಲಿ ಮಾರ್ಗದ ಮೂಲಕ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Even after Karnataka bandh on Friday, Mandya is still boiling red and hot. Enraged by lathicharge by police during Karnataka bandh, people took out protest procession again on Saturday against Siddaramaiah, Jayalalithaa and Karnataka advocate Fali Nariman.
Please Wait while comments are loading...