ನಾರಾಯಣಗೌಡರು ಯಾವುದೇ ಕಾರಣಕ್ಕೂ ಬಿಜೆಪಿಗೆ ದ್ರೋಹ ಮಾಡುವುದಿಲ್ಲ-ವಿಜಯೇಂದ್ರ
ಮಂಡ್ಯ, ಏಪ್ರಿಲ್ 15: ನನ್ನ ಜೀವನದ ಮೊದಲ ಚುನಾವಣೆಯನ್ನು ನಾನು ಶಿಕಾರಿಪುರದಿಂದ ಎದುರಿಸುತ್ತಿದ್ದೇನೆ. ಆದರೆ ಮೇ.10 ರಂದು ನಡೆಯಲಿರುವ ರಾಜ್ಯ ವಿಧಾನ ಸಭೆಯ ಮೊದಲ ಚುನಾವಣಾ ಪ್ರಚಾರ ಕಾರ್ಯವನ್ನು ಕೆ.ಆರ್.ಪೇಟೆಯಿಂದ ಆರಂಭಿಸುತ್ತಿದ್ದೇನೆ. ಏಕೆಂದರೆ ಇದು ನನ್ನ ತಂದೆ ಬಿ.ಎಸ್.ಯಡಿಯೂರಪ್ಪ ಅವರ ಜನ್ಮ ಭೂಮಿ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ,
ಕೆ.ಆರ್ ಪೇಟೆ ಪಟ್ಟಣದ ಹೊರವಲಯದ ಜಯಮ್ಮ ರಾಮಸ್ವಾಮಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ವಿಜಯೇಂದ್ರ, ಮಂಡ್ಯ ಜಿಲ್ಲೆಯ ಏಳು ವಿಧಾನ ಸಭಾ ಕ್ಷೇತ್ರಗಳಲ್ಲಿ ಅತೀ ಹೆಚ್ಚು ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲ್ಲಿದೆ. ಮುಂಬರುವ ವಿದಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರ ಹಿಡಿಯುವುದು ನಿಶ್ಚಿತ. ರಾಜ್ಯದ ಮೊಟ್ಟ ಮೊದಲ ಚುನಾವಣಾ ಫಲಿತಾಂಶ ಕೆ.ಆರ್.ಪೇಟೆಯಿಂದಲೇ ಬಿಜೆಪಿ ಪರ ಬರಲಿದೆ ಎಂದರು.

ಇನ್ನು ಕಳೆದ ಉಪ ಚುನಾವಣೆಯ ಸಂದರ್ಭದಲ್ಲಿ ಕೆ.ಆರ್.ಪೇಟೆಯಲ್ಲಿ ಕಮಲ ಅರಳುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ. ನಮ್ಮ ಪಕ್ಷದ ಯಾವುದೇ ನಾಯಕರು ಸಚಿವ ಕೆ.ಸಿ.ನಾರಾಯಣಗೌಡರ ಗೆಲುವನ್ನು ಉಪ ಚುನಾವಣೆಯಲ್ಲಿ ನಿರೀಕ್ಷಿಸಿರಲಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಭದ್ರಕೋಟೆಯಾದ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯ ಒಂದು ಗರಿಕೆ ಹುಲ್ಲು ಕೂಡ ಬೆಳೆಯಲಾರದು ಎನ್ನುವ ಭಾವನೆಯಿತ್ತು. ಆದರೆ ಇಲ್ಲಿನ ಜನ ಕಳೆದ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ಹಾಕುವ ಮೂಲಕ ಮಂಡ್ಯ ಜಿಲ್ಲೆಯಲ್ಲಿ ಕಮಲ ಅರಳುವುದಕ್ಕೆ ಕಾರಣರಾದರು ಎಂದು ಹೇಳಿದರು.
ಚುನಾವಣೆಯಲ್ಲಿ ಗೆದ್ದ ಅನಂತರ ಒಬ್ಬ ಗ್ರಾಮ ಪಂಚಾಯತಿ ಸದಸ್ಯನೂ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ನೂರು ಸಲ ಯೋಚಿಸುತ್ತಾನೆ. ಆದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಬಿ.ಎಸ್.ಯಡಿಯೂರಪ್ಪ ರಾಜ್ಯ ಮುಖ್ಯಮಂತ್ರಿಯಾಗಬೇಕು ಎನ್ನುವ ಏಕೈಕ ಕಾರಣಕ್ಕಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ವ್ಯಕ್ತಿ ಕೆ.ಸಿ.ನಾರಾಯಣಗೌಡ ಎಂದು ವಿಜಯೇಂದ್ರ ಶ್ಲಾಘಿಸಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವ ಹಗಲುಗನಸು ಕಾಣುತ್ತಿದ್ದರೆ ಜೆಡಿಎಸ್ ಕಿಂಗ್ ಮೇಕರ್ ಕನಸು ಕಾಣುತ್ತಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಯಡಿಯೂರಪ್ಪ ಅವರು ಸುಮ್ಮನೆ ಕೂತಿಲ್ಲ. ಬಿಜೆಪಿಯನ್ನು ಸ್ಪಷ್ಠ ಬಹುಮತದೊಂದಿಗೆ ಮತ್ತೊಮ್ಮೆ ರಾಜ್ಯದ ಗದ್ದುಗೆಗೇರಿಸಲು ಬಿ.ಎಸ್.ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತುತ್ತಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಕಮಲ ಅರಳುವುದನ್ನು ಯಾವುದೇ ಶಕ್ತಿಗಳಿಂದ ತಡೆಯಲು ಸಾಧ್ಯವಿಲ್ಲ ಎಂದರು.
ಕೆ.ಆರ್.ಪೇಟೆ ನನ್ನ ತಂದೆ ಬಿ.ಎಸ್.ಯಡಿಯೂರಪ್ಪನವರ ಜನ್ಮ ಭೂಮಿ. ಅವರು ಮೊದಲ ಸಲ ಮುಖ್ಯಮಂತ್ರಿಯಾಗಿದ್ದಾಗ ಇಲ್ಲಿ ನಮ್ಮ ಪಕ್ಷದ ಶಾಸಕರಲ್ಲದಿದ್ದರೂ ಕ್ಷೇತ್ರದ ಅಭಿವೃದ್ದಿಗೆ 500-600 ಕೋಟಿ ಅನುದಾನ ನೀಡಿದ್ದಾರೆ. ಸಚಿವ ಕೆ.ಸಿ.ನಾರಾಯಣಗೌಡರ ತ್ಯಾಗದ ಫಲವಾಗಿ 1800 ಕೋಟಿ ರೂಗಳ ಅಭಿವೃದ್ದಿ ಕಾರ್ಯಗಳು ಕ್ಷೇತ್ರದಲ್ಲಾಗಿವೆ. ಪ್ರಧಾನಿ ನರೇಂದ್ರ ಮೋದಿ ದೇಶ ಮೆಚ್ಚುವ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಮತ್ತು ಎಸ್.ಬೊಮ್ಮಾಯಿ ಅವರ ಜನಪರ ಯೋಜನೆಗಳನ್ನು ಮನೆಮನೆಗೆ ತಲುಪಿಸಿವ ಕೆಲಸವಾಗಬೇಕು. ರಾಜ್ಯದ ಉದ್ದಗಲಕ್ಕೂ ನಮ್ಮ ಪಕ್ಷದ ಎಲ್ಲಾ ಅಭ್ಯರ್ಥಿಗಳು ನನ್ನನ್ನು ಪ್ರಚಾರಕ್ಕೆ ಕರೆಯುತ್ತಿದ್ದಾರೆ. ಇದಕ್ಕೆ ಯಡಿಯೂರಪ್ಪ ಅವರ ಶಕ್ತಿ ಮತ್ತು ಪ್ರಭಾವ ಕಾರಣ. ಶಿಕಾರಿಪುರದಲ್ಲಿ ನಾನು ಅತೀ ಹೆಚ್ಚು ಮತಗಳ ಅಂತರದಿಂದ ಜಯಗಳಿಸುತ್ತೇನೆ. ನಾನೊಬ್ಬನೇ ಜಯಗಳಿಸಿದರೆ ಸಾಲದು. ನನ್ನೊಂದಿಗೆ ಸಚಿವ ಕೆ.ಸಿ.ನಾರಾಯಣಗೌಡ ಕೂಡ ಆಯ್ಕೆಯಾಗಬೇಕು.
ಸ್ಥಳೀಯ ಕಾರ್ಯಕರ್ತರು ತಮ್ಮ ಸ್ವಾರ್ಥ ಬಿಟ್ಟು ಕೆಲಸ ಮಾಡಬೇಕು. ಸಣ್ಣಪುಟ್ಟ ವ್ಯತ್ಯಾಸಗಳಿದ್ದರೆ ಅದನ್ನು ಬದಿಗಿಟ್ಟು ನಾರಾಯಣಗೌಡರ ಗೆಲುವಿಗೆ ಕೈಜೋಡಿಸಬೇಕು. ನಾರಾಯಣಗೌಡ ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಾರೆ ಎಂದು ಅಪಪ್ರಚಾರ ಮಾಡಲಾಯಿತು. ಅವರ ಯಾವುದೇ ಕಾರಣಕ್ಕೂ ಬಿಜೆಪಿಗೆ ದ್ರೋಹ ಮಾಡುವುದಿಲ್ಲ ಎಂದು ಭರವಸೆ ನೀಡಿ ಇಲ್ಲಿದ್ದಾರೆ. ಕ್ಷೇತ್ರದಲ್ಲಿನ ವೀರಶೈವ ಸಮಾಜ ಅವರ ಕೈ ಹಿಡಿದು ಮುನ್ನಡೆಸಬೇಕು. ಒಕ್ಕಲಿಗೆ, ಹಾಲುಮತ, ದಲಿತ ಸಮುದಾಯ ಸೇರಿದಂತೆ ನಾಡಿನ ಎಲ್ಲಾ ಸಮುದಾಯಗಳೂ ಬಿಜೆಪಿಯನ್ನು ಬೆಂಬಲಿಸುವಂತೆ ವಿಜಯೇಂದ್ರ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಚಿವ ಕೆ.ಸಿ ನಾರಾಯಣಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಪಿ.ಉಮೇಶ್, ತಾಲೂಕು ಘಟಕದ ಅಧ್ಯಕ್ಷ ಅರವಿಂದ್ ಪರಮೇಶ್, ಮುಖಂಡರಾದ ಕಿಕ್ಕೇರಿ ಪ್ರಭಾಕರ್, ಶಿಳನೆರೆ ಅಂಬರೀಶ್, ಮೂಡಾ ಶ್ರೀನಿವಾಸ್, ಬ್ಯಾಲದಕೆರೆ ಪಾಪೇಗೌಡ, ಬೂಕನಕೆರೆ ಜವರಾಯಿಗೌಡ, ಪಾಂಡವಪುರ ಕ್ಷೇತ್ರದ ಅಭ್ಯಥಿ ಡಾ.ಇಂದ್ರೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.












Click it and Unblock the Notifications