Bengaluru-Mysuru Expressway: ಎಕ್ಸ್‌ಪ್ರೆಸ್‌ವೇನಲ್ಲಿ ಮುಂದುವರೆದ ಪೊಲೀಸರ ಕಾರ್ಯಾಚರಣೆ, ವಾಗ್ವಾದಕ್ಕಿಳಿದ ಬೈಕ್ ಸವಾರ
ಮಂಡ್ಯ, ಆಗಸ್ಟ್, 02: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಸಂಚಾರಕ್ಕೆ ಆಗಸ್ಟ್ 1ರಿಂದ ನಿರ್ಬಂಧ ವಿಧಿಸಲಾಗಿದ್ದು, ಎರಡನೇ ದಿನವಾದ ಬುಧವಾರವೂ ಸಹ ಪೊಲೀಸರ ಕಾರ್ಯಾಚರಣೆ ಮುಂದುವರೆದಿತ್ತು. ಈ ವೇಳೆ ಬೈಕ್‌ನಲ್ಲಿ ಬಂದ ದ್ವಿಚಕ್ರ ವಾಹನ ಸವಾರನೊಬ್ಬ ದಂಡ ಕಟ್ಟದೆ ವಾದ ಮಾಡಿದ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ಹಾಗೂ ಪೊಲೀಸ್ ಇಲಾಖೆಯ ಆದೇಶವನ್ನು ಜಾರಿಗೊಳಿಸಲು ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ನಗರದ ಹೊರವಲಯ ಶ್ರೀನಿವಾಸಪುರ ಗೇಟ್‌ನ ಅಮರಾವತಿ ಹೋಟೆಲ್ ಸಮೀಪ ನೀಡಿರುವ ನಿರ್ಗಮನದ ಸ್ಥಳದಲ್ಲಿ ಹೊಸ ರೂಲ್ಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ನಿರ್ಬಂಧದ ನಡುವೆಯು ನಿಯಮ ಪಾಲಿಸದೆ ಕೆಲ ವಾಹನ ಸವಾರರು ಸಂಚರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ನಿಯಮ ಪಾಲಿಸದ ಸವಾರರ ಮೇಲೆ ಪೊಲೀಸರು ದಂಡ ಪ್ರಯೋಗ ಮಾಡಿದ್ದಾರೆ. ಮೊದಲ ದಿನವಾದ ಮಂಗಳವಾರ ಯಾವುದೇ ವಾಹನಗಳಿಗೆ ದಂಡ ವಿಧಿಸದೆ ಕೇವಲ ಜಾಗೃತಿ ಮೂಡಿಸಿ ಬಿಡಲಾಗಿತ್ತು. ಎರಡನೇ ದಿನವಾದ ಬುಧವಾರ ಸುಮಾರು 18 ವಾಹನಗಳಿಗೆ ತಲಾ 500 ರೂಪಾಯಿನಂತೆ ದಂಡ ವಿಧಿಸಲಾಗಿದೆ. 16 ದ್ವಿಚಕ್ರ ವಾಹನ, ಒಂದು ಟ್ರ್ಯಾಕ್ಟರ್, ಒಂದು ತ್ರಿಚಕ್ರ ವಾಹನಕ್ಕೆ ದಂಡ ವಿಧಿಸಿದ್ದಾರೆ.
ಆಗಸ್ಟ್ 1ರ ಮಂಗಳವಾರ ಹೊಸ ರೂಲ್ಸ್ ಬಗ್ಗೆ ಪೊಲೀಸರು ಜಾಗೃತಿ ಮೂಡಿಸಿದ್ದರಿಂದ ಬಹುತೇಕ ವಾಹನ ಸವಾರರು ಸರ್ವಿಸ್ ರಸ್ತೆಯತ್ತ ಮುಖ ಮಾಡಿದ್ದು ಕಂಡುಬಂದಿದೆ.
ಈ ವೇಳೆ ಎಕ್ಸ್‌ಪ್ರೆಸ್ ವೇನಲ್ಲಿ ಬೈಕ್ ಸವಾರಿ ಮಾಡಿಕೊಂಡು ಬಂದ ಬೈಕ್ ಸವಾರನನ್ನು ತಡೆದ ಪೊಲೀಸರು ದಂಡ ಕಟ್ಟುವಂತೆ ಹೇಳಿದಾಗ, ಹೊಸ ರೂಲ್ಸ್ ನನಗೆ ಗೊತ್ತಿಲ್ಲ. ನಾನು ದಂಡ ಕಟ್ಟುವುದಿಲ್ಲ. ನೀವು ಹೈವೆಗೆ ಹತ್ತುವಾಗ ಹತ್ತಬೇಡಿ ಎಂದು ಹೇಳಲ್ಲ, ಈಗ ದಂಡ ಕಟ್ಟಿ ಅಂತೀರಾ? ನಾನು ಕಟ್ಟಲ್ಲ ಎಂದು ಪೊಲೀಸರಿಗೇ ಅವಾಜ್ ಹಾಕಿದ್ದಾರೆ.
ಬಳಿಕ ಬೈಕ್ ಸವಾರನಿಗೆ ಬುದ್ಧಿವಾದ ಹೇಳಿದ ಪೊಲೀಸರು, ನೀವು ಹೆದ್ದಾರಿ ಪ್ರವೇಶಿಸುವಾಗ ಬೋರ್ಡ್ ಹಾಕಿದ್ದೇವೆ ನೋಡಿದ್ದೀರಾ? ನಿನ್ನೆ ಮೊನ್ನೆಯಿಂದ ಮಾಧ್ಯಮಗಳಲ್ಲಿ ಬರುತ್ತಿದೆ ನೋಡಿಲ್ವಾ? ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬೈಕ್ ಸವಾರ, ನಾನು ಈ ಹೊಸ ರೂಲ್ಸ್ ಎಲ್ಲೂ ನೋಡಿಲ್ಲ, ಹಾಗಾಗಿ ದಂಡ ಕಟ್ಟಲ್ಲ ಎಂದು ವಾದ ಮಾಡಿದ್ದಾನೆ.
ಇದಕ್ಕೆ ಪೊಲೀಸರು, ಸರಿಯಪ್ಪಾ ಹೊಸ ರೂಲ್ಸ್ ಗೊತ್ತಿಲ್ಲ ಅಂತೀಯಾ? ಹೆಲ್ಮೆಟ್ ಯಾಕೆ ಹಾಕಿಲ್ಲ? ನಿನಗೆ ಹೆಲ್ಮೆಟ್ ಹಾಕೋ ಹಳೆ ರೂಲ್ಸ್ ಗೊತ್ತಿಲ್ವಾ? ಎಂದು ಪೊಲೀಸರ ಮರುಪ್ರಶ್ನೆಗೆ ಬೈಕ್ ಸವಾರ ಕಕ್ಕಾಬಿಕ್ಕಿಯಾಗಿದ್ದಾನೆ. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಸಾರ್ವಜನಿಕರು, ಪೊಲೀಸರು ನಮ್ಮ ಒಳ್ಳೆಯದಕ್ಕೇ ಹೇಳೋದು ಎಂದು ಬೈಕ್ ಸವಾರನನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಮಂಕಾದ ಬೈಕ್ ಸವಾರ ದಂಡ ಕಟ್ಟಿ ತೆರಳಿದನು.












Click it and Unblock the Notifications